Asianet Suvarna News Asianet Suvarna News

ಜಾತಿ ಗಣತಿ ವರದಿ ಪುನರ್‌ ಪರಿಶೀಲನೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಆಯೋಗದಿಂದ ಮರುಪರಿಶೀಲನೆ ವರದಿ ಬಂದ ಬಳಿಕ ಬಿಡುಗಡೆ: ಸಚಿವ ಕೋಟ ಹೇಳಿಕೆ, ಜಾತಿ ಗಣತಿ ವರದಿ ಈವರೆಗೂ ಬಿಡುಗಡೆ ಮಾಡದ್ದಕ್ಕೆ ಕೆ.ಪಿ.ನಂಜುಂಡಿ ವಿಶ್ವಕರ್ಮ ಆಕ್ಷೇಪ

Recheck of Caste Census Report in Karnataka Says Minister Kota Shrinivas Poojari grg
Author
First Published Dec 24, 2022, 2:00 AM IST

ವಿಧಾನ ಪರಿಷತ್‌(ಡಿ.24): ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ-2015’ಯನ್ನು (ಜಾತಿ ಜನಗಣತಿ) ಪುನರ್‌ ಪರಿಶೀಲಿಸುವ ಅಗತ್ಯವಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಹೇಳಿದ್ದು, ಪುನರ್‌ ಪರಿಶೀಲನಾ ವರದಿ ಬಂದ ಕೂಡಲೇ ಅದರ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಚ್‌.ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಆದರೆ, ಸರ್ಕಾರಕ್ಕೆ ಸಲ್ಲಿಸಿಲ್ಲ. ಆಯೋಗ ಹಾಲಿ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಈ ವರದಿಯ ಪುನರ್‌ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗಾಗಿ ಅವರು ಪುನರ್‌ ಪರಿಶೀಲಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಜಾತಿಗಣತಿ ವರದಿ ಕಾಂಗ್ರೆಸ್‌ ಸೋರಿಕೆ ಮಾಡಿರಲಿಲ್ಲವೇ?: ಸುಧಾಕರ್‌ ವಾಗ್ದಾಳಿ

ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ಕೆ.ಪಿ.ನಂಜುಂಡಿ ಅವರು, 162 ಕೋಟಿ ರು. ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವುದಕ್ಕೆ ಕಾರಣವೇನು? ಸಮಾಜದಲ್ಲಿ ವಿಶ್ವಕರ್ಮ ಸೇರಿದಂತೆ ಹಿಂದುಳಿದ, ತುಳಿತಕ್ಕೆ ಒಳಗಾದ ಹಲವು ಸಮುದಾಯಗಳಿದ್ದು ಅವುಗಳು ತಮ್ಮ ನೈಜ ಜನಸಂಖ್ಯೆಯನ್ನು ತಿಳಿದುಕೊಂಡು ಅದರ ಆಧಾರದ ಮೇಲೆ ಅಭಿವೃದ್ಧಿಗೆ ಅನುದಾನ, ಸೌಲಭ್ಯಗಳನ್ನು ಬಯಸುವುದು ಅವರವರ ಹಕ್ಕಲ್ಲವೇ? ಎಷ್ಟುದಿನಗಳಲ್ಲಿ ವರದಿ ಪುನರ್‌ ಪರಿಶೀಲಿಸಿ ವರದಿ ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಇಲ್ಲದಿದ್ದರೆ ನಾನು ಬಾವಿಗಿಳಿದು ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್‌ನ ಇತರೆ ಸದಸ್ಯರೂ ದನಿಗೂಡಿಸಿದರು.

ಇದಕ್ಕೆ ಸಚಿವರು, ಆಯೋಗ ವರದಿಯನ್ನು ಪುನರ್‌ ಪರಿಶೀಲಿಸಿ ಸಲ್ಲಿಸಿದ ಕೂಡಲೇ ಅದಕ್ಕೊಂದು ಅಂತಿಮ ರೂಪ ನೀಡಿ ಬಿಡುಗಡೆ ಮಾಡಲು ಕ್ರಮ ವಹಿಸುವ ಭರವಸೆ ನೀಡಿದರು.

Follow Us:
Download App:
  • android
  • ios