ಗ್ರಾಮೀಣ ಭಾಗದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಉಚಿತವಾಗಿ ಆಧುನಿಕ ಕಲಾ ಶಿಕ್ಷಣ ನೀಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಎನ್‌ಜಿಎಂಎ ನಡುವೆ ಒಡಂಬಡಿಕೆ ನಡೆದಿದ್ದು, ಐಎಫ್ಎ ಪಠ್ಯಕ್ರಮ ಅಭಿವೃದ್ಧಿಪಡಿಸಲಿದೆ.

ಬೆಂಗಳೂರು (ಅ.9): ಗ್ರಾಮೀಣ ಭಾಗದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಹಾಗೂ ಕಲಾ ರಂಗದಲ್ಲಿ ಔನ್ನತ್ಯ ಸಾಧಿಸಲು ಅನುವಾಗುವಂತೆ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಲ್ಲಿ ಉಚಿತವಾಗಿ ಆಧುನಿಕ ಕಲಾ ಶಿಕ್ಷಣ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ (ಎನ್‌ಜಿಎಂಎ) ನಡುವೆ ನಡೆದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅರಿವು ಕೇಂದ್ರಕ್ಕೆ ಬರುವ ಗ್ರಾಮೀಣ ಮಕ್ಕಳಿಗೆ ಆಧುನಿಕ ಕಲೆಯ ಪರಿಚಯ

ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಕ್ಕೆ ಬರುವ ಮಕ್ಕಳಿಗೆ ಆಧುನಿಕ ಕಲೆಯ ಪರಿಚಯ ಮಾಡಿಸುತ್ತೇವೆ. ಎನ್‌ಜಿಎಂಎ ಸಂಸ್ಥೆಯು ಕಲಾ ಶಿಕ್ಷಣದ ಮಾದರಿ ಅಭಿವೃದ್ಧಿ ಪಡಿಸಲಿದೆ. ಶೈಕ್ಷಣಿಕ ಉದ್ದೇಶಕ್ಕಾಗಿ ತನ್ನ ಶಾಶ್ವತ ಸಂಗ್ರಹಾಲಯದಲ್ಲಿರುವ ಆಯ್ದ ಡಿಜಿಟಲ್ ಕಲಾಕೃತಿಗಳನ್ನು ಸಹ ಒದಗಿಸಲಿದೆ. ಜೊತೆಗೆ ಗ್ರಂಥಪಾಲಕರಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿ ಗ್ರಾಮೀಣ ಮಕ್ಕಳಿಗೆ ಉಚಿತ ಕಲಾ ಶಿಕ್ಷಣ ನೀಡಲಿದೆ ಎಂದು ಈಶ್ವರ್‌ ಖಂಡ್ರೆ ಹೇಳಿದರು.

ಪಂ ಲೈಬ್ರರಿಗಳೇ ಇನ್ಮುಂದೆ 'ಆರ್ಟ್ ಗ್ಯಾಲರಿ

ಜತೆಗೆ ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್ (ಐಎಫ್ಎ) ಆಧುನಿಕ ಕಲಾ ಶಿಕ್ಷಣ ಕಲಿಕೆಗೆ ಅಗತ್ಯವಾದ ಪಠ್ಯಕ್ರಮ ಅಭಿವೃದ್ಧಿ ಪಡಿಸುತ್ತದೆ. ಸಾಮರ್ಥ್ಯ ವರ್ಧನೆ ಹಾಗೂ ಕಾರ್ಯಕ್ರಮದ ಅನುಷ್ಠಾನಕ್ಕೆ ಬೆಂಬಲ ನೀಡಲಿದೆ ಎಂದು ವಿವರಿಸಿದರು.