ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025 ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ. ಒಂದೇ ದಿನ ₹158.54 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು.

ಬೆಂಗಳೂರು (ಜೂ.4): ಕೊನೆಗೂ 18 ವರ್ಷಗಳ ನಿರೀಕ್ಷೆಗೆ ತೆರೆ ಬಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ 2025 ಟ್ರೋಫಿಯನ್ನು ಗೆಲ್ಲುವ ಮೂಲಕ ಅಭಿಮಾನಿಗಳ ಸಂತೋಷವನ್ನು ನೂರ್ಮಡಿಗೊಳಿಸಿದೆ. ಆದರೆ ಈ ಸಂತೋಷದ ಸಂಭ್ರಮದಲ್ಲಿ ರಾಜ್ಯದ ಮದ್ಯ ಮಾರಾಟ ಮಾತ್ರವಲ್ಲ, ಅಭಿಮಾನಿಗಳ ಲಿಕ್ಕರ್ ಸೇವನೆಯೂ ದಾಖಲೆಮಟ್ಟದ ವರದಿಯಾಗಿದೆ.

18 ವರ್ಷದ ಕನಸು ನಿನ್ನೆ ಸಾಕಾರ:

ಪಂಜಾಬ್ ವಿರುದ್ಧ ನಡೆದ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಭರ್ಜರಿ ಗೆಲುವು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಉಲ್ಲಾಸಕ್ಕೆ ಕಾರಣವಾಯಿತು. RCB ಗೆಲುವು ಈಗ ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಜನರ ಭಾವನೆಗೂ ಸಂಬಂಧಪಟ್ಟಿತ್ತು. ಈ ಗೆಲುವಿನ ಸಂಭ್ರಮಕ್ಕೆ ಸಾವಿರಾರು ಅಭಿಮಾನಿಗಳು ಬಾರ್‌ಗಳು ಹಾಗೂ ಮದ್ಯದಂಗಡಿಗಳಿಗೆ ಮುಗಿ ಬಿದ್ದರು. ಮ್ಯಾಚ್ ಮುಗಿಯುವಷ್ಟರಲ್ಲಿ ಮದ್ಯದಂಗಡಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಒಂದೇ ದಿನ ಇಷ್ಟೊಂದು ಆದಾಯ ಬಂದಿರುವುದನ್ನು ನೋಡಿ ರಾಜ್ಯದ ಮದ್ಯ ನಿಗಮ ಅಧಿಕಾರಿಗಳು ಬೆಚ್ಚಿ ಬೀಳಿದ್ದಾರೆ.

ಸರಕಾರ ನೀಡಿರುವ ಅಂಕಿಅಂಶಗಳ ಪ್ರಕಾರ:

  • ಬಿಯರ್ ಮಾರಾಟ: 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ
  • ಮೌಲ್ಯ: ₹30.66 ಕೋಟಿ
  • ಲಿಕ್ಕರ್ ಮಾರಾಟ: 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿದೆ
  • ಮೌಲ್ಯ: ₹127.88 ಕೋಟಿ
  • ಒಟ್ಟು ಮೌಲ್ಯ: ₹158.54 ಕೋಟಿ ಮೌಲ್ಯದ ಮದ್ಯ ಮಾರಾಟವಾಯಿತು.
  • ಇದು ರಾಜ್ಯದ ಇತಿಹಾಸದಲ್ಲಿ ಒಂದೇ ದಿನದ ಮದ್ಯ ಮಾರಾಟದಲ್ಲಿ ದಾಖಲೆ ಪ್ರಮಾಣ!

ಸಂಭ್ರಮದಲ್ಲಿ ತೇಲಾಡಿದ ಅಭಿಮಾನಿಗಳು:

ಆರ್‌ಸಿಬಿ ಅಭಿಮಾನಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಜಯೋತ್ಸವ ಆಚರಿಸಲು ಹೆಚ್ಚಾಗಿ ಮದ್ಯವನ್ನೇ ಆಯ್ಕೆ ಮಾಡಿಕೊಂಡಿದ್ದಂತೆ ಕಂಡುಬಂದಿದೆ. ನಿನ್ನೆ ಸಂಜೆ ಮ್ಯಾಚ್ ಆರಂಭವಾದ ಹೊತ್ತಿನಿಂದಲೇ ಬಾರ್‌ಗಳು ಮತ್ತು ವೈನ್ ಶಾಪ್‌ಗಳಲ್ಲಿ ಜನಸಂದಣಿ ಹೆಚ್ಚು ಕಾಣಿಸಿಕೊಂಡಿತು. ಬಹುತೇಕ ಸ್ಥಳಗಳಲ್ಲಿ ಬಿಯರ್ ಸ್ಟಾಕ್ ಮುಕ್ತಾಯವಾಗಿರುವುದೂ ವರದಿಯಾಗಿದೆ. ಈ ಒಂದೇ ದಿನದ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿಗಳ ಆದಾಯ ಕೂಡ ಸಿಕ್ಕಿದೆ. ಮದ್ಯ ಮಾರಾಟದ ತೆರಿಗೆ ಸರ್ಕಾರಕ್ಕೆ ದೊಡ್ಡ ಆದಾಯ ಮೂಲವಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಆರ್‌ಸಿಬಿ ತಂಡವು 18 ವರ್ಷಗಳ ನಿರೀಕ್ಷೆಯ ನಂತರ ಬಂದ ಜಯ, ಕ್ರಿಕೆಟ್ ಅಭಿಮಾನಿಗಳಲ್ಲಿ ಹರ್ಷ ಜ್ವರದಂತಿತ್ತು. ಆದರೆ ಈ ಸಂಭ್ರಮದಲ್ಲಿ ಮದ್ಯ ಸೇವನೆಯ ಪ್ರಮಾಣ ಒಂದು ರೀತಿಯಲ್ಲಿ ಸಮಾಜದ ಮನೋಭಾವನೆಯನ್ನು ತೋರಿಸುತ್ತಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇದು ಚಿಂತಾಜನಕವೂ ಆಗಿದೆ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.