ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಮೃತಪಟ್ಟಿದ್ದಾರೆ. ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು (ಜೂ.04): ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಹೃದಯಾಘಾತವಾದರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನಿಸುವ ವೇಳೆ ಸಾವಿಗೀಡಾಗಿದ್ದಾರೆ. ಉಳಿದಂತೆ ಇನ್ನೂ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವೊಜಯೋತ್ಸವ ಕಾರ್ಯಕ್ರಮವನ್ನು 5 ಗಂಟೆಗೆ ಆಯೋಜನೆ ಮಾಡಲಾಗಿತ್ತು. ಇದಕ್ಕೂ ಮುನ್ನ ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಎರಡು ಗೇಟ್‌ಗಳನ್ನು ಮಾತ್ರ ನಿಗದಿ ಮಾಡಲಾಯಿತು. ಈ ವೇಳೆ ಮುಂಬದಿಯಲ್ಲಿದ್ದ ಎಲ್ಲ ಅಭಿಮಾನಿಗಳನ್ನು 17ನೇ ಗೇಟ್‌ಗೆ ಕಳಿಸಿ ಅಲ್ಲಿಂದ ಪ್ರವೇಶ ಪಡೆಯುವಂತೆ ಸೂಚಿಸಲಾಯಿತು. ಆಗ ಸುಮಾರು 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಏಕಾಏಕಿ ಹಿಂಬದಿಯ ಗೇಟ್‌ ಬಳಿ ಹೋಗಿ ನಿಂತುಕೊಂಡಿದ್ದರು. ಈ ವೇಳೆ ಗೇಟ್‌ನಿಂದ ಒಬ್ಬೊಬ್ಬರನ್ನೇ ಪರಿಶೀಲನೆ ಮಾಡಿ ಬಿಡುವುದನ್ನು ತಡೆದುಕೊಳ್ಳಲಾರದ ಅಭಿಮಾನಿಗಳ ನೂಕು ನುಗ್ಗಲು ಹೆಚ್ಚಾಗಿ ಗೇಟ್ ಅನ್ನು ಮುರಿದು ಒಳಗೆ ನುಗ್ಗಿದ್ದಾರೆ. ಈ ವೇಳೆ ಗೇಟ್ ಮುಂದೆಯೇ ನಿಂತಿದ್ದ 20ಕ್ಕೂ ಅಧಿಕ ಜನರು ಕಾಲ್ತುಳಿತಕ್ಕೆ ಸಿಲುಕಿದ್ದಾರೆ.

ಕಾಲ್ತುಳಿತ ಸಂಭವಿಸುತ್ತಿದ್ದಂತೆ ನಿಯಂತ್ರಣ ಸಿಗದ ಅಭಿಮಾನಿಗಳು ಕಾಲಡಿ ಸಿಕ್ಕವರ ಮೇಲೆಯೇ ಹತ್ತಿಕೊಂಡು ಹೋಗಿದ್ದು, ಇದರಿಂದ ಗಂಭೀರ ಗಾಯಗೊಂಡವರನ್ನು ಎಳೆದುಕೊಂಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ 11 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿವ ಸಾಧ್ಯತೆ:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಗಂಭೀರತೆ ಇನ್ನೂ ನಿರೀಕ್ಷೆಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆ ಮೂಲಗಳ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 11 ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆರ್‌ಸಿಬಿ ಆಟಗಾರರು ವಿಧಾನಸೌಧದ ಬಳಿ ಸರ್ಕಾರದಿಂದ ಸನ್ಮಾನ ಸ್ವೀಕರಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ಸರ್ಕಾರದಿಂದ ಗೌರವ ಸ್ವೀಕರಿಸಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ವಿಜಯೋತ್ಸವ ಆಚರಣೆ ಮಾಡಬೇಕಿತ್ತು. ಆದರೆ, ಅಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ಅವಕಾಶವನ್ನು ನೀಡುವಲ್ಲಿ ಮೀನಾಮೇಷ ಎಣಿಸಿ ಗಂಟೆಗೊಂದು ಹೇಳಿಕೆ ನೀಡುತ್ತಾ ಅಭಿಮಾನಿಗಳು ಗುಂಪು ಸೇರಿ ಪರದಾಡುವಂತೆ ಮಾಡಿತ್ತು. ಇದರ ಪರಿಣಾಮವಾಗಿ ಅಲ್ಲಿಂದಿಲ್ಲಿಗೆ ಗುಂಪಾಗಿ ಓಡಾಡಿದ ಅಭಿಮಾನಿಗಳು ಕ್ರೀಡಾಂಗಣದ ಹಿಂಬದಿ ಬಂದು ನಿಂತುಕೊಂಡಾಗ ನಿಯಂತ್ರಣ ಸಿಗದೇ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತ ತಡೆಗೆ ತಕ್ಷಣ ನಿಖಿಲ್ ಮನವಿ:

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಲ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಜೊತೆಗೆ, 'ನಾವೆಲ್ಲರೂ ಆರ್‌ಸಿಬಿ ವಿಜಯದ ಸಂಭ್ರಮದಲ್ಲಿ ಇದ್ದೇವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆಯಲ್ಲಿ ಈಗಾಗಲೇ ಕಾಲ್ತುಳಿತ ಹಾಗೂ ನುಕೂನುಗ್ಗಲಿಂದ 20ಕ್ಕೂ ಹೆಚ್ಚು ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ, ಆದರಿಂದ ಸರ್ಕಾರ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಕ್ರೀಡಾಭಿಮಾನಿಗಳು ಕೂಡ ಅತ್ಯಂತ ಸಂಯಮದಿಂದ ಸಹಕರಿಸಬೇಕಾಗಿ ಮನವಿ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.