ರಿಸರ್ವ್ ಬ್ಯಾಂಕ್‌ನಿಂದ ಲಕ್ಷ ಲಕ್ಷ ನಾಣ್ಯಗಳನ್ನು ಸಾಗಿಸುತ್ತಿದ್ದ ಲಾರಿ ನೆಲಮಂಗಲದಲ್ಲಿ ಪಲ್ಟಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನಾಣ್ಯಗಳು ರಸ್ತೆಯ ಪಕ್ಕದಲ್ಲಿಯೇ ಬಿದ್ದಿದ್ದು, ಲಾರಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಉಳಿದ ನಾಣ್ಯಗಳ ಸಂಗ್ರಹ ಕಾರ್ಯ ನಡೆದಿದೆ.

ಬೆಂಗಳೂರು/ನೆಲಮಂಗಲ (ಜು.23): ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (Reserve Bank Of India - RBI) ಲಕ್ಷ ಲಕ್ಷ ನಾಣ್ಯಗಳನ್ನು ತುಂಬಿಕೊಂಡು ರಾಯಚೂರಿಗೆ ಸರಬರಾಜು ಮಾಡುತ್ತಿದ್ದ ಲಾರಿಯೊಂದು ನೆಲಲಮಂಗಲ ತಾಲೂಕಿನ ರಾಯರಪಾಳ್ಯ ಗೇಟಿನ ಬಳಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಲಕ್ಷ, ಲಕ್ಷ ಮೌಲ್ಯದ ನಾಣ್ಯಗಳು ರಸ್ತೆಯ ಬದಿಗೆ ಬಿದ್ದಿದ್ದು, ಈ ಘಟನೆಯಲ್ಲಿ ಲಾರಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹೌದು, ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನಾಣ್ಯಗಳ ಭದ್ರ ಸಾಗಣೆಗೆ ಬಳಕೆಯಾದ ಲಾರಿ ಪಲ್ಟಿಯಾಗಿರುವ ಘಟನೆ ನಿನ್ನೆ ರಾತ್ರಿ ನೆಲಮಂಗಲ ತಾಲ್ಲೂಕಿನ ರಾಯರಪಾಳ್ಯ ಗೇಟ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ರಿಸರ್ವ್ ಬ್ಯಾಂಕಿನಿಂದ ರಾಯಚೂರಿಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಲಾರಿ ಹೋಗುವಾಗ ಭಾರವಾಗಿದ್ದ ಹಿಂದಿನ ಗಾಲಿಗಳು, ಹಳ್ಳದ ಕಡೆಗೆ ಜಾರಿಕೊಂಡು ಚಾಲಕನ ನಿಯಂತ್ರಣಕ್ಕೆ ಸಿಗದೇ ಉರುಳಿ ಬಿದ್ದಿದೆ. ಇನ್ನು ಲಾರಿಯನ್ನು ಭದ್ರವಾಗಿ ಮುಚ್ಚಿದ್ದರಿಂದ ಲಾರಿಯೊಳಗಿನ ನಾಣ್ಯಗಳು ಹೊರಗೆ ಬಿದ್ದಿರಲಿಲ್ಲ.

ಘಟನೆಯ ವಿವರಣೆಗೆ ಬರುವುದಾದರೆ, ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್‌ನ ಶಾಖೆಯಿಂದ ಒಂದು ಹಾಗೂ ಎರಡು ರೂಪಾಯಿ ಮುಖಬೆಲೆಯ 57 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ತುಂಬಿಕೊಂಡ ಲಾರಿ ರಾಯಚೂರು ಕಡೆಗೆ ಸಾಗುತ್ತಿತ್ತು. ಈ ವೇಳೆ ನಾಣ್ಯಗಳನ್ನು ತುಂಬಿದ್ದ ಲಾರಿ ರಸ್ತೆಯ ಪಕ್ಕ ನಿಲ್ಲಿಸುವಾಗ, ಅಲ್ಲಿದ್ದ ಮಣ್ಣಿನ ದಿಬ್ಬ ಕುಸಿತದಿಂದಾಗಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ನಾಣ್ಯಗಳನ್ನು ಮೂಟೆಯಲ್ಲಿ ಡಬಲ್ ಪ್ಯಾಕಿಂಗ್ ಮಾಡಲಾಗಿದ್ದು, ಯಾವುದೇ ನಾಣ್ಯಗಳು ಸೇರಿಕೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅಪಘಾತವಾದ ಸ್ಥಳಕ್ಕೆ ತಕ್ಷಣವೇ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎತ್ತುವ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ. ಪ್ರಸ್ತುತ ಲಾರಿಯಲ್ಲಿದ್ದ ನಾಣ್ಯಗಳು ಸುರಕ್ಷಿತವಾಗಿದೆಯೇ ಅಥವಾ ನಷ್ಟವಾಗಿದೆ ಎಂಬ ನಿಖರವಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದರೆ, ರಾತ್ರಿ ವೇಳೆಯೇ ಬ್ಯಾಂಕಿನ ಅಧಿಕಾರಿಗಳು ಬಂದು ಎಲ್ಲ ನಾಣ್ಯಗಳನ್ನು ಇನ್ನೊಂದು ಲಾರಿಗೆ ವರ್ಗಾವಣೆ ಮಾಡಿಕೊಂಡು ಅಲ್ಲಿಂದ ಭದ್ರತೆಯಲ್ಲಿಯೇ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಲಾರಿ ಬೆಂಗಳೂರಿನಿಂದ ರಾಯಚೂರಿಗೆ ಚಿಲ್ಲರೆ ಹಣ ಸಾಗಿಸುತ್ತಿದ್ದು, ಇದನ್ನು ರಿಸರ್ವ್ ಬ್ಯಾಂಕಿನಿಂದ ನಿಯೋಜಿಸಲಾಗಿತ್ತು. ಚಾಲಕನ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಂಡಿರುವುದೇ ಪುಣ್ಯವಾಗಿದೆ. ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ. ರಸ್ತೆ ಪಕ್ಕದ ಸಂರಕ್ಷಣೆಯ ಕೊರತೆ ಹಾಗೂ ನೆಲದ ಬಿರುಕು ಈ ಅಪಘಾತಕ್ಕೆ ಕಾರಣವಿರಬಹುದು ಎಂಬ ಅಂದಾಜು ಮಾಡಿದ್ದಾರೆ.

ಬೆಳಗ್ಗೆ ವೇಳೆ ಅಪಘಾತವಾಗಿದ್ದರೆ ನಾಣ್ಯಗಳ ಕಳ್ಳತನ:

ಸ್ಥಳೀಯ ಹಾಗೂ ಪೊಲೀಸ್ ಮೂಲಗಳ ಪ್ರಕಾರನ ರಿಸರ್ವ್ ಬ್ಯಾಂಕ್‌ನಿಂದ ನಾಣ್ಯಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಬೆಳಗ್ಗೆ ಅಥವಾ ಹಗಲು ಹೊತ್ತಿನಲ್ಲಿ ಹಳ್ಳಕ್ಕೆ ಉರುಳಿ ಬಿದ್ದಿದ್ದರೆ ಅದನ್ನು ನೋಡಲು ಮುಗಿಬೀಳುತ್ತಿದ್ದ ಜನರು ಲಾರಿಯಲ್ಲಿದ್ದ ನಾಣ್ಯಗಳನ್ನೂ ಹೊತ್ತೊಯ್ಯುವ ಸಾಧ್ಯತೆಯಿತ್ತು. ರಾತ್ರಿ ವೇಳೆ ಈ ಘಟನೆ ನಡೆದಿದ್ದರಿಂದ ಲಾರಿಯ ಬಳಿ ಯಾರೂ ಹೋಗಲು ಮುಂದಾಗಿಲ್ಲ. ಬೆರಳೆಣಿಗೆ ಜನರು ಅಲ್ಲಿಗೆ ಹೋಗಿದ್ದರೂ, ಅಲ್ಲಿ ನಾಣ್ಯಗಳ ಮೂಟೆಗಳು ಕಳ್ಳತನ ಆಗಿವೆಯೇ, ಇಲ್ಲವೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಹೆದ್ದಾರಿಗಳಲ್ಲಿ ಏನೇ ಬಿದ್ದರೂ ಕದ್ದೊಯ್ಯುವ ಜನ:
ಸಾಮಾನ್ಯವಾಗಿ ಹೆದ್ದಾರಿಗಳ ಬಳಿ ಯಾವುದೇ ವಾಹನಗಳು ಉರುಳಿ ಬಿದ್ದರೂ ಅದರಲ್ಲಿ ಯಾರಿಗಾದರೂ ಪ್ರಾಣಾಪಾಯ ಉಂಟಾಗಿದೆಯೇ ಎಂಬುದನ್ನು ಗಮನಿಸದೇ ಲಾರಿಯಲ್ಲಿ ಯಾವ ಸಾಮಗ್ರಿಗಳಿವೆ? ಅವುಗಳನ್ನು ಎತ್ತಿಕೊಂಡು ಹೋಗಬೇಕು ಎನ್ನುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಹಾಲು, ಪೆಟ್ರೋಲ್, ಡೀಸೆಲ್, ಹಣ್ಣು-ತರಕಾರಿಗಳು, ಕೋಳಿ, ಕೋಳಿ ಮೊಟ್ಟೆ ಹೀಗೆ ಎಲ್ಲವನ್ನೂ ಜನರು ಹೊತ್ತುಕೊಂಡು ಹೋಗುವ ದೃಶ್ಯಗಳು ಕೂಡ ವೈರಲ್ ಆಗಿವೆ.