Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೊಂದು ಹೊಸ ಪಕ್ಷ : 28 ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧೆ

ರಾಜ್ಯದಲ್ಲಿ ನೂತನ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲು ಸಿದ್ಧವಾಗಿದೆ. 

Ravi krishna Reddy Forms new Political Party
Author
Bengaluru, First Published Feb 12, 2019, 10:32 AM IST

ಬೆಂಗಳೂರು :  ರಾಜ್ಯದಲ್ಲಿ ‘ಕರ್ನಾಟಕ ಜನತಾ ರಂಗ’ ಎಂಬ ಮತ್ತೊಂದು ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದಿದೆ.  ರಾಜ್ಯದ ಜನತೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಂದ ಬೇಸತ್ತು ಹೋಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಆ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ‘ಜೆಸಿಬಿ’ ಪಕ್ಷಗಳು (ಜೆಡಿಎಸ್‌,ಕಾಂಗ್ರೆಸ್‌ ಹಾಗೂ ಬಿಜೆಪಿ) ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಕುಟಿಲ ರಾಜಕೀಯದಲ್ಲಿ ಮುಳುಗಿ ಹೋಗಿವೆ. ಇನ್ನು ಪರ್ಯಾಯ ರಾಜಕಾರಣ ಸೃಷ್ಟಿಮಾಡುತ್ತೇವೆಂದು ಕೆಲ ಪಕ್ಷಗಳು ಬಂದವು. ಆದರೆ, ಸಮರ್ಥ ನಾಯಕತ್ವ , ಕಾರ್ಯಕರ್ತರು ಇಲ್ಲದೆ ಆ ಪಕ್ಷಗಳೂ ಸೊರಗಿ ಹೋಗಿ ಹೋದ ಹಿನ್ನೆಲೆಯಲ್ಲಿ ಕೆಲವು ಸಮಾನ ಮನಸ್ಕರರು ಸೇರಿಕೊಂಡು ಪರ್ಯಾಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ. ‘ಕರ್ನಾಟಕ ಜನತಾ ರಂಗ’ ಎಂಬ ಪಕ್ಷದ ಹೆಸರು, ಲಾಂಛನ ನೋಂದಣಿಗೆ ಕೇಂದ್ರ ಚುನಾವಣಾ ಅಯೋಗಕ್ಕೆ ದಾಖಲಾತಿ ಸಲ್ಲಿಸಿದ್ದೇವೆ. ಇನ್ನೊಂದು ತಿಂಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾನ್ಯತೆ ಸಿಗಲಿದೆ ಎಂದು ತಿಳಿಸಿದರು.

ಪಕ್ಷದ ಉಪಾಧ್ಯಕ್ಷರಾಗಿ ಎಸ್‌.ಎಚ್‌.ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ದೀಪಕ್‌, ಖಚಾಂಚಿ ಕೆ.ಬಿ.ಅರವಿಂದ್‌, ಜಂಟಿ ಕಾರ್ಯದರ್ಶಿಯಾಗಿ ರಘುಪತಿಭಟ್‌ ಅವರು ಇದ್ದು, ಸದಸ್ಯರಾಗಿ ವಿಕಾಸ್‌ ಸೊಪ್ಪಿನ್‌, ವೇಣುಗೋಪಾಲ್‌ ಸೇರಿದಂತೆ ಒಟ್ಟು 19 ಮಂದಿಯ ಕೇಂದ್ರ ಸಮಿತಿ ರಚಿಸಲಾಗಿದೆ. ಈಗಾಗಲೇ ಮೂರು ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳಿದರು.

28 ಕ್ಷೇತ್ರದಲ್ಲಿ ಸ್ಪರ್ಧೆ:  ರಚನಾತ್ಮಕ ಕೆಲಸ, ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುವುದರ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ವಿಶ್ವಾಸ ಇಟ್ಟಿರುವವರಿಗೆ ಮುಕ್ತ ಆಹ್ವಾನ ನೀಡಲಾಗುವುದು. ಮುಂಬರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಘು ಜಾಣಗೆರೆ, ಮಂಡ್ಯದಿಂದ ಲಿಂಗೇಗೌಡ, ತುಮಕೂರಿನಿಂದ ಮಲ್ಲಿಕಾರ್ಜುನ್‌ ಭಟ್ಟರಹಳ್ಳಿ, ಧಾರವಾಡ ಅಥವಾ ಬಾಗಲಕೋಟೆ ಕ್ಷೇತ್ರದಿಂದ ವಿಕಾಸ್‌ ಸೊಪ್ಪಿನ್‌ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಹಣ, ಹೆಂಡ ಹಂಚುವಂತಿಲ್ಲ. ಚುನಾವಣಾ ವೆಚ್ಚಕ್ಕೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಣೆ ಮಾಡಬೇಕು. ಪಕ್ಷದ ಸಿದ್ಧಾಂತಗಳಲ್ಲಿ ಒಪ್ಪಿಗೆ ಇದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳುವವರಿಗೆ ಪಕ್ಷ ಮನ್ನಣೆ ನೀಡಲಿದೆ. ಪಕ್ಷದಲ್ಲಿ ವಿಶ್ವಾಸವಿಟ್ಟು ಸ್ಪರ್ಧೆ ಮಾಡುವುದಕ್ಕೆ ಇಚ್ಛೆ ಹೊಂದಿರುವವರು 79756 25575ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದರು.

Follow Us:
Download App:
  • android
  • ios