Asianet Suvarna News Asianet Suvarna News

CD Scandal: ಜಾರಕಿಹೊಳಿ ಸಿಡಿ ಕೇಸ್‌ ತನಿಖಾ ವರದಿ ಸಲ್ಲಿಕೆಗೆ ಅಸ್ತು

ಅತ್ಯಾಚಾರ ಆರೋಪ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ನಗರದ ಕಬ್ಬನ್‌ ಪಾರ್ಕ್ ಠಾಣಾ ಪೊಲೀಸರಿಗೆ ದಾಖಲಿಸಿದ ದೂರಿನ ತನಿಖಾ ವರದಿಯನ್ನು ಸಕ್ಷಮ ವಿಚಾರಣಾ ನ್ಯಾಯಾಲಯಕ್ಕೆ (ಮ್ಯಾಜಿಸ್ಪ್ರೇಟ್‌ ಕೋರ್ಟ್‌) ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖಾಧಿಕಾರಿಗೆ ಅನುಮತಿ ನೀಡಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

Ramesh Jarkiholi obscene CD Case Karnataka High Court permits to submit Final Investigation Report gvd
Author
Bangalore, First Published Feb 4, 2022, 7:02 AM IST

ಬೆಂಗಳೂರು (ಫೆ.04): ಅತ್ಯಾಚಾರ ಆರೋಪ ಸಂಬಂಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ವಿರುದ್ಧ ಸಂತ್ರಸ್ತೆ ನಗರದ ಕಬ್ಬನ್‌ ಪಾರ್ಕ್ ಠಾಣಾ ಪೊಲೀಸರಿಗೆ ದಾಖಲಿಸಿದ ದೂರಿನ ತನಿಖಾ ವರದಿಯನ್ನು ಸಕ್ಷಮ ವಿಚಾರಣಾ ನ್ಯಾಯಾಲಯಕ್ಕೆ (ಮ್ಯಾಜಿಸ್ಪ್ರೇಟ್‌ ಕೋರ್ಟ್‌) ಸಲ್ಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖಾಧಿಕಾರಿಗೆ ಅನುಮತಿ ನೀಡಿ ಹೈಕೋರ್ಟ್‌ (High Court) ಗುರುವಾರ ಆದೇಶಿಸಿದೆ.

ರಮೇಶ್‌ ಜಾರಕಿಹೊಳಿ ‘ಸಿಡಿ’ ಪ್ರಕರಣ ಕುರಿತ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ರಮೇಶ್‌ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಹಾಗೂ ಇತರೆ ಆರೋಪ ಕುರಿತು ಸಂತ್ರಸ್ತ ಯುವತಿ 2021ರ ಮಾ.26ರಂದು ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಗೆ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ತನಿಖಾ ವರದಿಗೆ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದನೆ ನೀಡಿದ್ದಾರೆ. ಹಾಗಾಗಿ, ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸುವುದರಿಂದ ಎಸ್‌ಐಟಿಯನ್ನು ನಿರ್ಬಂಧಿಸಲು ಸೂಕ್ತ ಕಾರಣಗಳು ಇಲ್ಲ. ಆದ್ದರಿಂದ ಎಸ್‌ಐಟಿ ತನಿಖಾಧಿಕಾರಿಯು ತನಿಖಾ ವರದಿಯನ್ನು ಸಕ್ಷಮ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅನುಮತಿ ನೀಡಿ ಪೀಠ ಆದೇಶಿಸಿತು.

ಅಲ್ಲದೆ, ಪ್ರಕರಣದ ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ಎಸ್‌ಐಟಿ ಮತ್ತು ಅದರ ತನಿಖಾಧಿಕಾರಿ ಹೊಂದಿದ್ದಾರೆಯೇ ಎಂಬುದು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಎಲ್ಲ ಪ್ರಶ್ನೆಗಳನ್ನು ಮ್ಯಾಜಿಸ್ಪ್ರೇಟ್‌ ನ್ಯಾಯಾಧೀಶರ ಪರಿಗಣನೆಗೆ ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಹಾಗೆಯೇ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪರಿಗಣಿಸುವುದಾಗಿ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿದೆ.

Ramesh Jarkiholi Meets Devendra Fadnavis: ಗೋವಾದಲ್ಲಿ ಜಾರಕಿಹೊಳಿ - ಫಡ್ನವೀಸ್ ಭೇಟಿ!

ಇದಕ್ಕೂ ಮುನ್ನ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ರಾಜ್ಯ ಸರ್ಕಾರ ಅಥವಾ ಹೈಕೋರ್ಟ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿಲ್ಲ. ಸಂತ್ರಸ್ತೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಎಸ್‌ಐಟಿ ರಚಿಸಲಾಗಿತ್ತು. ಅದೂ ರಮೇಶ್‌ ಜಾರಕಿಹೊಳಿ ಮನವಿ ಮೇರೆಗೆ ಅಂದಿನ ಗೃಹ ಸಚಿವರು ನೀಡಿದ ನಿರ್ದೇಶನದನ್ವಯ ನಗರ ಪೊಲೀಸ್‌ ಆಯುಕ್ತರು ಎಸ್‌ಐಟಿ ರಚಿಸಿದ್ದರು. ಇದರಿಂದ ಪ್ರಕರಣದ ತನಿಖೆ ನಡೆಸುವ ಅಧಿಕಾರ ಎಸ್‌ಐಟಿಗೆ ಇಲ್ಲವಾಗಿದೆ. ಇಡೀ ತನಿಖೆಯನ್ನು ಸಿಆರ್‌ಪಿಸಿ ನಿಯಮಗಳಿಗೆ ಅನುಗುಣವಾಗಿ ನಡೆಸಿಲ್ಲ. ಅಲ್ಲದೆ, ಎಸ್‌ಐಟಿ ರಚನೆ ಸಿಂಧ್ವುತ್ವವನ್ನೇ ಪ್ರಶ್ನಿಸಲಾಗಿದೆ. 

ಎಲ್ಲಿಯವರೆಗೂ ಎಸ್‌ಐಟಿ ರಚನೆಯ ಸಿಂಧುತ್ವದ ವಿಚಾರ ನಿರ್ಧಾರವಾಗುವುದಿಲ್ಲವೋ, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿ ಆಗುವುದಿಲ್ಲ. ಅದರಂತೆ ವಿಚಾರಣಾ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸಲು ಅನುಮತಿ ನೀಡಬಾರದು ಎಂದು ಕೋರಿದರು. ಅದಕ್ಕೆ ಆಕ್ಷೇಪಿಸಿದ ಎಸ್‌ಐಟಿ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ, ಸಂತ್ರಸ್ತೆ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಗೆ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಎಂ.ಸಿ.ಕವಿತಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. 

ಅವರನ್ನು ಎಸ್‌ಐಟಿ ತಂಡಕ್ಕೆ ನಿಯೋಜಿಸಲಾಗಿತ್ತು. ಅವರು ತನಿಖೆ ಪೂರ್ಣಗೊಳಿಸಿ ಸಲ್ಲಿಸಿರುವ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದಿಸಿದ್ದಾರೆ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಹಾಗಾಗಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಎಸ್‌ಐಟಿ ಮುಖಸ್ಥ ಸೌಮೇಂದು ಮುಖರ್ಜಿ ಅವರು ಸುದೀರ್ಘ ರಜೆಯಲ್ಲಿ ತೆರಳಿದ್ದರು. ನ್ಯಾಯಾಲಯ ತನಿಖಾ ವರದಿ ಸಲ್ಲಿಸಲು ತಡೆ ನೀಡಿತ್ತೇ ವಿನಾ ತನಿಖೆಗೆ ತಡೆ ವಿಧಿಸಿರಲಿಲ್ಲ ಎಂದರು.

Belagavi Politics ಬೆಳಗಾವಿಯಲ್ಲಿ ಸಹೋದರರ ಸವಾಲ್, ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತು

ಸುಪ್ರೀಂಕೋರ್ಟ್‌ಗೆ ಮೊರೆ: ಹೈಕೋರ್ಟ್‌ ಗುರುವಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಂತ್ರಸ್ತೆಯ ಪರ ವಕೀಲ ಸಂಕೇತ್‌ ಏಣಗಿ ಈಗಾಗಲೇ ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ. ಅದರಂತೆ ಸುಪ್ರೀಂಕೊರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾದರೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗಲಿದೆ. ಮತ್ತೊಂದೆಡೆ ಸದಾಶಿವನಗರ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ ಅವರು ನೀಡಿರುವ ದೂರಿಗೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತೆಯ ತಂದೆಯು ಆರ್‌.ಟಿ. ನಗರದಲ್ಲಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಯು ಪೂರ್ಣಗೊಂಡಿದ್ದು, ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಚಾರ್ಜ್‌ಶೀಟ್ ಸಲ್ಲಿಸಿದರೆ ಸಂಕಷ್ಟ: ಹೈಕೋರ್ಟ್‌ ಆದೇಶದಿಂದಾಗಿ ಸಂತ್ರಸ್ತೆಯು ದಾಖಲಿಸಿರುವ ದೂರಿನ ತನಿಖಾ ವರದಿಯನ್ನು ಸಂಬಂಧಪಟ್ಟಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಲು ಇದೀಗ ಎಸ್‌ಐಟಿ ಸ್ವತಂತ್ರವಾಗಿದೆ. ಅದರಂತೆ ಶೀಘ್ರ ಎಸ್‌ಐಟಿ ತನಿಖಾ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ಒಂದೊಮ್ಮೆ ಎಸ್‌ಐಟಿಯು ರಮೇಶ್‌ ಜಾರಕಿಹೊಳಿ ವಿರುದ್ಧ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್) ಸಲ್ಲಿಸಿದರೆ ಅವರಿಗೆ ಸಂಕಷ್ಟತಪ್ಪಿದ್ದಲ್ಲ. ಆದರೆ, ಆರೋಪಗಳಿಗೆ ಕ್ಲೀನ್‌ಚಿಟ್‌ ನೀಡಿ ಬಿ ರಿಪೋರ್ಟ್‌ ಸಲ್ಲಿಸಿದರೆ ರಮೇಶ್‌ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ.

ಅರೆನಗ್ನ ವ್ಯಕ್ತಿಗೆ ಕೋರ್ಟ್‌ ಕ್ಷಮೆ: ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ವಿಚಾರಣೆಯ ವರ್ಚುವಲ್‌ ಕಲಾಪದಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಶ್ರೀಧರ್‌ ಎನ್‌. ಭಟ್‌ ಎಂಬುವರು ಹೈಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ‘ನಾನು ಉದ್ದೇಶಪೂರ್ವಕವಾಗಿ ನಡೆದುಕೊಂಡಿರಲಿಲ್ಲ. ತಪ್ಪಿನ ಅರಿವಾಗಿದ್ದು, ಇಂತಹ ತಪ್ಪು ಮಾಡುವುದಿಲ್ಲ. ಅಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಲ್ಲೂ ವಿನಯಪೂರ್ವಕವಾಗಿ ಬೇಷರತ್‌ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ಅದನ್ನು ಪರಿಗಣಿಸಿದ ಹೈಕೋರ್ಟ್‌, ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀಧರ್‌ ಭಟ್‌ಗೆ ಸೂಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

Follow Us:
Download App:
  • android
  • ios