ಬೆಂಗಳೂರು :  ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ನ 13 ಶಾಸಕರು ಮಂಗಳವಾರ  ಐದು ದಿನಗಳ ‘ಅಜ್ಮೇರ್ ದರ್ಗಾ’ ಪ್ರವಾಸಕ್ಕೆ ತೆರಳಿದ್ದಾರೆ. ಹರಕೆ ತೀರಿಸುವ ಸಲುವಾಗಿ ಸಚಿವ ರಮೇಶ್ ಜಾರಕಿಹೊಳಿ ಅಜ್ಮೇರ್ ದರ್ಗಾಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಹರಕೆಯ ಪ್ರವಾಸವಲ್ಲ, ಪಕ್ಷದ ನಾಯಕರಿಗೆ ತಮ್ಮ ಬೆಂಬಲಿತ ಶಾಸಕರ ಸಂಖ್ಯಾ ಬಲ ಪ್ರದರ್ಶನಕ್ಕಾಗಿ ಕೈಗೊಂಡಿರುವ ಪ್ರವಾಸ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು. 

ಆಷಾಢದ ನಂತರ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ಸೋದರ ಸತೀಶ್ ಜಾರಕಿಹೊಳಿ ಗೆ ಸ್ಥಾನ ನೀಡಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದು. ಒಂದೇ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ ಭವಿಷ್ಯದಲ್ಲಿ ಮಂತ್ರಿಗಿರಿಗೆ ಕುತ್ತು ಬರುವುದನ್ನು ತಡೆಯಲು ಪ್ರವಾಸದ ನೆಪದಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

"

ಬುಧವಾರ ದೆಹಲಿಗೆ ತೆರಳಲಿರುವ ರಾಜ್ಯ ನಾಯಕರು ಕೂಡ ಹೈಕಮಾಂಡ್‌ಗೆ ಮಾಹಿತಿ ನೀಡಲಿ ಎಂಬುದು ರಮೇಶ್ ಜಾರಕಿಹೊಳಿ ಅವರ ಪ್ರವಾಸದ ಉದ್ದೇಶವಾಗಿದೆ ಎನ್ನಲಾಗಿದೆ. ಜೊತೆಗೆ ತಮ್ಮ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಕಡೆಗಣಿಸಬಾರದು ಎಂಬ ಸಂದೇಶವನ್ನು ನೀಡಲು ರಮೇಶ್ ಜಾರಕಿಹೊಳಿ ಅವರು ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಮಂಗಳವಾರ ಸಂಜೆ ನಗರದ ಹೊರವಲಯದಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಜ್ಮೇರ್‌ನತ್ತ ಪ್ರಯಾಣ ಬೆಳೆಸಿರುವ ೧೩ ಜನ ಶಾಸಕರು ಮೊದಲು ಜೈಪುರಕ್ಕೆ ತೆರಳಿದ್ದಾರೆ. ಅಲ್ಲಿಂದ ಅಜ್ಮೇರ್ ದರ್ಗಾಕ್ಕೆ ತೆರಳಿದ್ದಾರೆ. ಮುಂದಿನ ಶುಕ್ರವಾರ ಅಥವಾ ಶನಿವಾರ ಪ್ರವಾಸ ಮುಗಿಸಿ ನಗರಕ್ಕೆ ವಾಪಸ್ಸಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಶ್ರೀಮಂತ್ ಕುಮಾರ್ ಪಾಟೀಲ್, ನಾಗೇಂದ್ರ, ಗಣೇಶ್, ಭೀಮಾನಾಯಕ್, ತುಕಾರಾಂ, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯ ವೀರಕುಮಾರ್ ಪಾಟೀಲ್ ಸೇರಿದಂತೆ ಒಟ್ಟು 13 ಜನ ಶಾಸಕರು ಪ್ರವಾಸಕ್ಕೆ ತೆರಳಿದ್ದಾರೆ.