ಹೆಗಡೆ ಯಾವ ಸ್ಥಾನದಲ್ಲಿದ್ದರೂ ಕರ್ನಾಟಕದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇಂದ್ರದಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹೆಗಡೆ ‘ಯೋಜನಾ ಆಯೋಗದ’ ಉಪಾಧ್ಯಕ್ಷರಾಗಿದ್ದರು. ಆಗ ಕೊಂಕಣ ರೈಲ್ವೆ ಯೋಜನೆಗೆ ಮಂಜೂರಾತಿ ದೊರೆಯಿತು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ‘ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ’ಗೆ ಅನುದಾನ ನೀಡಿದ ಹೆಗ್ಗಳಿಕೆ ಅವರದು.
ಬೆಂಗಳೂರು(ಆ.29): ರಾಜ್ಯದಲ್ಲಿ ಮೊದಲು ಜನತಾದರ್ಶನ ಆರಂಭಿಸಿದ, 1 ರು.ಗೆ 2 ಕೇಜಿ ಅಕ್ಕಿ ನೀಡಿದ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ, ಪಂಚಾಯ್ತಿಗಳಿಗೆ ಬಲ ತುಂಬಿದ, ವಿಧಾನಸೌಧದೊಳಗೆ ಜನರನ್ನು ಸೇರಿಸಿದ, ಲೋಕಾಯುಕ್ತವನ್ನು ಸ್ಥಾಪಿಸಿದ, ಶಿಕ್ಷಣ ಕ್ಷೇತ್ರಕ್ಕೆ ಸುಧಾರಣೆಯ ಸ್ಪರ್ಶ ನೀಡಿದ, ಆಡಳಿತದಲ್ಲಿ ಕನ್ನಡ ಜಾರಿಗೆ ಶಾಶ್ವತ ಕ್ರಮ ಕೈಗೊಂಡ ಹೀಗೆ ಹಲವು ಪ್ರಥಮಗಳನ್ನು ಸಾಧಿಸಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.
‘ಸಾಧಕರು ನೆರಳು ನೀಡುವ ಮರವಿದ್ದಂತೆ. ಅವರು ಭೂಮಿಯ ಸತ್ವವನ್ನು ಪಡೆದು ಬೆಚ್ಚನೆಯ ಬಿಸಿಲು ಮತ್ತು ತಂಪಾದ ಮಳೆಗಳಿಂದ ಹುಲುಸಾಗಿ ತಮ್ಮದೇ ಚೈತನ್ಯದಿಂದ ಬಲವಾಗಿ ಭದ್ರವಾಗಿ ನಿಂತು ತಮ್ಮ ನೆರಳಿಗೆ ಬಂದವರಿಗೆಲ್ಲಾ ಆಶ್ರಯ ನೀಡುವ ಮರದಂತೆ’ ಎನ್ನುವ ಸ್ವಾಮಿ ವಿವೇಕಾನಂದರ ಮಾತುಗಳು ರಾಮಕೃಷ್ಣ ಹೆಗಡೆ ಅವರ (ಜನನ 29.8.1929, ಮರಣ 12.01.2004) ಬದುಕಿಗೆ ಸಮರ್ಪಕವಾದ ಹೋಲಿಕೆಯಾಗಿದೆ. ಸುಮಾರು ಅರ್ಧ ಶತಮಾನಕ್ಕೂ ಮೀರಿದಂತೆ ರಾಜಕಾರಣದಲ್ಲಿದ್ದ ಹೆಗಡೆ ಅವರು ರಾಷ್ಟ್ರ ಕಂಡ ಅಪರೂಪದ ಮುತ್ಸದ್ದಿಗಳಲ್ಲಿ ಒಬ್ಬರು.
ಕುಟುಂಬ ರಾಜಕಾರಣದಲ್ಲಿ ವಿಫಲರಾದ ನಾಯಕರಿವರು!
ರಾಮಕೃಷ್ಣ ಹೆಗಡೆ ಅವರಿಗೆ ಪ್ರಿಯವಾದ ಶಬ್ದ ‘ಮೌಲ್ಯಾಧಾರಿತ ರಾಜಕಾರಣ’. ಅವರು ಇಂದಿನಂತೆ ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ. ಒಮ್ಮೆ ಎಸ್.ನಿಜಲಿಂಗಪ್ಪ ಅವರನ್ನು ನಾಯಕನೆಂದು ಒಪ್ಪಿಕೊಂಡ ನಂತರ ಅಂದಿನ ಪ್ರಧಾನಿ ಎಷ್ಟೇ ಆಮಿಷ ತೋರಿಸಿದರೂ ಅವರು ಸಂಸ್ಥಾ ಕಾಂಗ್ರೆಸ್ ಬಿಟ್ಟು ಅಧಿಕಾರಕ್ಕಾಗಿ ಬೇರೆ ಯಾವ ಪಕ್ಷಕ್ಕೂ ಹೋಗಲಿಲ್ಲ.
ಜನತಾ ದರ್ಶನದ ಜನಕ
ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ರೂಪಿಸಿದ ‘ಜನತಾ ದರ್ಶನ’ ಜನಪ್ರಿಯ ಕಾರ‍್ಯಕ್ರಮವಾಗಿತ್ತು. ಹಿಂದಿದ್ದ ಸರ್ಕಾರ ವಿಧಾನಸೌಧಕ್ಕೆ ಸಾರ್ವಜನಿಕರನ್ನು ನಿಷೇಧಿಸಿತ್ತು. ಜಿಲ್ಲೆಯಲ್ಲೂ ಸಾರ್ವಜನಿಕರು ಅಧಿಕಾರಿಗಳನ್ನು ನೋಡುವಂತೆಯೇ ಇರಲಿಲ್ಲ. ರಾಮಕೃಷ್ಣ ಹೆಗಡೆ ಪ್ರಾರಂಭಿಸಿದ ಜನತಾ ದರ್ಶನ ಎಷ್ಟುಜನಪ್ರಿಯವಾಯಿತು ಎಂದರೆ ನಂತರ ಬಂದ ಎಲ್ಲಾ ಸರ್ಕಾರಗಳು ಅದನ್ನು ಅನುಸರಿಸಿದವು. ಹೆಗಡೆ ಅವರು ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸತೊಡಗಿದರು. ಇದರಿಂದಲೇ ಅವರು ಮಹಿಳಾ ಲೋಕದಲ್ಲಿ ಜನಪ್ರಿಯರಾದರು.
ಜನತೆಯ ಕೈಗೆ ಅಧಿಕಾರ
ರಾಮಕೃಷ್ಣ ಹೆಗಡೆ 1983ರಲ್ಲಿ ‘ಕರ್ನಾಟಕ ರಾಜ್ಯ ಜಿಲ್ಲಾ ಪರಿಷತ್ ಮತ್ತು ಮಂಡಲ್ ಪಂಚಾಯತ್’ ಕಾಯ್ದೆ ಜಾರಿಗೆ ತಂದರು. ಅದರಂತೆ ಚುನಾವಣೆ ನಡೆದು ಅಧಿಕಾರ ವಿಕೇಂದ್ರೀಕರಣ ಕೂಡ ನಡೆಯಿತು. ಇವರ ಜೊತೆ ಕೈಜೋಡಿಸಿದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್ ಸಹ ಇತಿಹಾಸ ಸೇರಿದ್ದಾರೆ.
ಪ್ರಧಾನಿ ರಾಜೀವ್ ಗಾಂಧಿ ಅವರು ಹೆಗಡೆಯನ್ನು ಟೀಕೆ ಮಾಡುತ್ತಿದ್ದರು. ಆದರೆ ಅವರ ಅನೇಕ ಕಾರ‍್ಯಕ್ರಮಗಳನ್ನು ಅಖಿಲ ಭಾರತ ಮಟ್ಟದಲ್ಲಿ ಅನುಷ್ಠಾನಕ್ಕೆ ತಂದರು. ಕರ್ನಾಟಕದ ಅಧಿಕಾರ ವಿಕೇಂದ್ರೀಕರಣ ಸೂತ್ರವನ್ನು ಇಡೀ ದೇಶಕ್ಕೆ ಅನ್ವಯವಾಗುವಂತೆ ಸಂವಿಧಾನಕ್ಕೆ 73-74ನೆಯ ತಿದ್ದುಪಡಿ ತಂದರು. ಹೆಗಡೆ ಅವರು ಮತದಾನದ ವಯಸ್ಸನ್ನು 18ಕ್ಕೆ ಇಳಿಸಿದರು. ಇದು ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತಿತ್ತು. ರಾಜೀವ್ ಗಾಂಧಿ ಅದನ್ನು ಮೆಚ್ಚಿ ಯುವ ಜನಾಂಗಕ್ಕೆ 18ನೆಯ ವಯಸ್ಸಿಗೆ ಮತದಾನದ ಹಕ್ಕು ಕೊಟ್ಟರು.
ಶಿಕ್ಷಣ ಕ್ಷೇತ್ರಕ್ಕೆ ಹೊಸತನದ ಲೇಪನ
1983ರ ಮೊದಲು ಕರ್ನಾಟಕದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿತ್ತು. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಕ್ಷರಶಃ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದರು. ವಿಧಾನಪರಿಷತ್ತಿನ ಸದಸ್ಯರಾದ ಎಸ್.ಚನ್ನಬಸವಯ್ಯ ಮತ್ತು ಪದ್ಮಾವತಿ ವಿಠ್ಠಲರಾವ್ ಅವರು ಮಾಡಿದ ಒತ್ತಾಯದ ಹಿನ್ನೆಲೆಯಲ್ಲಿ ‘1983ರ ಸಮಗ್ರ ಶಿಕ್ಷಣ ಮಸೂದೆ’ ಜಾರಿಗೆ ಬಂತು. ಪ್ರಧಾನಿ ರಾಜೀವ್ ಗಾಂಧಿ 1986ರಲ್ಲಿ ದೇಶಕ್ಕೆ ಹೊಸ ಶೈಕ್ಷಣಿಕ ನೀತಿಯನ್ನು ಕೊಟ್ಟರು. ಇಂದು ಸಹ ದೇಶದಲ್ಲಿ ಅನುಷ್ಠಾನವಾಗಿರುವ ಅನೇಕ ಹೊಸ ವಿಚಾರಗಳಿಗೆ ಮುಖ್ಯಮಂತ್ರಿ ಹೆಗಡೆ ಕಾರಣಕರ್ತರು ಎಂಬುದು ಇಲ್ಲಿ ಮುಖ್ಯವಾದ ವಿಚಾರ.
ಲೋಕಾಯುಕ್ತದ ಸೃಷ್ಟಿಕರ್ತ
ಹೆಗಡೆ ಅವರ ಅತಿ ಮುಖ್ಯ ಕೊಡುಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ರೂಪಿಸಿದ ಕರ್ನಾಟಕ ಲೋಕಾಯುಕ್ತ ಸಂಸ್ಥೆ. 2001ರಲ್ಲಿ ಎನ್.ವೆಂಕಟಾಚಲ, 2006ರಲ್ಲಿ ಎನ್.ಸಂತೋಷ ಹೆಗಡೆ ಅವರು ಲೋಕಾಯುಕ್ತರಾದರು. ಆಗ ಕರ್ನಾಟಕದ ಜನತೆಗೆ ರಾಜ್ಯದಲ್ಲಿ ಲೋಕಾಯುಕ್ತ ಎಂಬ ಸಂಸ್ಥೆಯಿದೆ ಎಂಬುದು ಅರಿವಿಗೆ ಬಂತು. ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಹೆಗಡೆ ಅವರು ಲೋಕಾಯುಕ್ತ ಸಂಸ್ಥೆ ಸ್ಥಾಪಿಸಿದರು ಎನ್ನುವ ಕ್ರೆಡಿಟ್ ಅವರಿಗೆ ಬರಲಿಲ್ಲ.
1 ರು.ಗೆ ಅಕ್ಕಿ, ಉಚಿತ ಬಸ್ ಪಾಸ್
ಹೆಗಡೆ ಆರ್ಥಿಕವಾಗಿ ದುರ್ಬಲವರ್ಗದ ಗರ್ಭಿಣಿಯರಿಗೆ ಆರು ತಿಂಗಳ ಮಾಸಾಶಾನ ಮತ್ತು ಹುಟ್ಟುವ ಮಗುವಿಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಸರ್ಕಾರದಿಂದ ಕೊಡುವ ಯೋಜನೆ ರೂಪಿಸಿದರು. ಈ ಯೋಜನೆ ‘ವಿಶ್ವ ಆರೋಗ್ಯ ಸಂಸ್ಥೆ’ಯ ಮೆಚ್ಚುಗೆಗೆ ಪಾತ್ರವಾಯಿತು. ವಿಧವಾ ಮಾಸಾಶಾನ ಯೋಜನೆ ಅವರ ಕಾರ‍್ಯಕ್ರಮ. ಬಡ ಕುಟುಂಬಗಳಿಗೆ ಹೆಣ್ಣು ಮಕ್ಕಳ ಮದುವೆ ಭಯಾನಕ ವಿಚಾರವಾಗಿತ್ತು. ಇದಕ್ಕಾಗಿ ‘ತಾಳಿ ಭಾಗ್ಯ’ ಯೋಜನೆ ಜಾರಿಗೆ ತಂದರು.
ಎರಡು ರುಪಾಯಿಗೆ 1 ಕೆ.ಜಿ. ಅಕ್ಕಿ ಸಹ ಅವರ ಕಾಲದಲ್ಲಿ ಜಾರಿಗೆ ಬಂತು. ಅಂದಿನ ‘ಅಂತ್ಯೋದಯ’ದ ಮುಂದಿನ ಭಾಗವೇ ಇಂದಿನ ‘ಅನ್ನಭಾಗ್ಯ.’ ಹೆಗಡೆ ಅವರು ಶಾಲಾ ಮಕ್ಕಳಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಗೆ ತಂದರು. ಇದರಿಂದಾಗಿ ತಾಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿದ್ದ ಯುವಕ ಯುವತಿಯರು ಕಾಲೇಜು ಶಿಕ್ಷಣ ಪಡೆಯುವಂತಾಯಿತು.
ರೈತರ ಬಂಧು ಹೆಗಡೆ
ಹೆಗಡೆ ಅವರು ತೋಟದ ಬೆಳೆಗೆ ಹೆಚ್ಚಿನ ಆದ್ಯತೆ ಕೊಟ್ಟರು. ಇದರಿಂದಾಗಿ ರೈತರಿಗೆ ತುಂಬಾ ಅನುಕೂಲವಾಯಿತು. 1964ರಲ್ಲಿ ಅವರು ಫಿಲಿಪೈನ್ಸ್‌ಗೆ ಹೋಗಿದ್ದರು. ಅಲ್ಲಿಂದ ಅನಾಸಸ್ ಗಡ್ಡೆ ತಂದು ಶಿರಸಿ ಭಾಗದ ರೈತರಿಗೆ ಕೊಟ್ಟರು. ಅಲ್ಲಿಂದ ಅನಾಸಸ್ ರಾಜ್ಯದ ಪ್ರಮುಖ ಬೆಳೆಯಾಯಿತು. ಅವರು ಸಿಎಂ ಆಗಿದ್ದಾಗ ರಾಜ್ಯ ಬರಗಾಲಕ್ಕೆ ತುತ್ತಾಯಿತು. ಆಗ ಹೆಗಡೆ ಮರ ಬೆಳೆಸುವ ಮತ್ತು ನೀರನ್ನು ಸದುಪಯೋಗಪಡಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿದರು.
ಕನ್ನಡದ ಕೆಲಸಕ್ಕೆ ಮಾದರಿ
1983ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬರಲು ಕಾರಣವಾದ ಮೂರು ಚಳವಳಿಯನ್ನು ಹೆಗಡೆ ಮರೆಯಲಿಲ್ಲ. ಮೊದಲನೆಯದು ರೈತ ಚಳವಳಿ. ಎರಡನೆಯದು ಗೋಕಾಕ್ ಚಳವಳಿ ಮತ್ತು ಮೂರನೆಯದು ದಲಿತ ಚಳವಳಿ. ಈ ಚಳವಳಿಗಳು ಇತಿಹಾಸದ ಪುಟಕ್ಕೆ ಸೇರುವಂತೆ ತಮ್ಮ ಚಾಣಕ್ಷತೆಯನ್ನು ಮೆರೆದವರು ಸಹ ಹೆಗಡೆ ಅವರೇ. ದಲಿತರ ಸತ್ವವಾಗಿದ್ದ ಕವಿ, ಅತ್ಯಂತ ಮೃದು ಮನಸ್ಸಿನ ವ್ಯಕ್ತಿ ಸಿದ್ದಲಿಂಗಯ್ಯ ಅವರನ್ನು ವಿಧಾನಪರಿಷತ್ತಿನ ಸದಸ್ಯರನ್ನಾಗಿ ನೇಮಿಸಲಾಯಿತು. ಕನ್ನಡ ಚಳವಳಿ ಮತ್ತು ರೈತ ಚಳವಳಿ ಹಲವು ತುಣುಕುಗಳಾದವು. ಕನ್ನಡ ಚಳವಳಿಗಳು ಹಲವು ಗುಂಪುಗಳಾದವು. ಕನ್ನಡ ಚಳವಳಿಗಾರ ಜಿ.ನಾರಾಯಣ ಕುಮಾರ್ ಶಾಸಕರಾದರು.
1983ರಲ್ಲಿ ಲೋಕದಳದ ಮೂಲಕ ಆಯ್ಕೆಯಾಗಿ ತಮ್ಮ ಜನತಾ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಸಿದ್ದರಾಮಯ್ಯ ಅವರನ್ನು ‘ಕನ್ನಡ ಕಾವಲು ಸಮಿತಿ’ಯ ಅಧ್ಯಕ್ಷರನ್ನಾಗಿ ಹೆಗಡೆ ನೇಮಿಸಿ ಸಚಿವ ಸಂಪುಟದ ಸ್ಥಾನಮಾನ ನೀಡಿದರು. ರೈತ ಚಳವಳಿಯ ಪ್ರಮುಖ ಧ್ಯೇಯಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು ಎಂಬ ಒತ್ತಾಯವಿತ್ತು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇಡೀ ರಾಜ್ಯ ಸುತ್ತಿದರು. ಗಡಿ ಪ್ರದೇಶಗಳ ಅಭಿವೃದ್ಧಿಗೆ ಉಪಯುಕ್ತ ಸಲಹೆಗಳನ್ನು ಕೊಟ್ಟರು.
1983ರ ತನಕ ವಿಧಾನಸೌಧದಲ್ಲಿ ಶೇ.10ರಷ್ಟುಮಾತ್ರ ಕನ್ನಡ ಆಡಳಿತ ಭಾಷೆಯಾಗಿತ್ತು. ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಶೇ.20ರಷ್ಟು ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯಿತ್ತು. ಸಿದ್ದರಾಮಯ್ಯ ನೀಡಿದ ವರದಿಯನ್ನು ಹೆಗಡೆ ಅನುಷ್ಠಾನ ಮಾಡಿದ ಕಾರಣ ಇಂದು ವಿಧಾನಸೌಧದಲ್ಲಿ ಶೇ.80 ಮತ್ತು ವಿಭಾಗ ಮತ್ತು ಜಿಲ್ಲೆಗಳಲ್ಲಿ ಶೇ.95ರಷ್ಟುಆಡಳಿತದಲ್ಲಿ ಕನ್ನಡ ಬಳಕೆಯಾಗುತ್ತಿದೆ. ಭಾಷೆಯ ದೃಷ್ಟಿಯಿಂದ ಇದೊಂದು ಮಹತ್ವದ ಪರಿವರ್ತನೆ.
ಹಂಪಿಯ ‘ಕನ್ನಡ ವಿಶ್ವವಿದ್ಯಾಲಯ’ ಮತ್ತು ಬೆಳಗಾಯಲ್ಲಿ ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ’ ಸ್ಥಾಪನೆಯ ನಿರ್ಧಾರವನ್ನು ಹೆಗಡೆ ಮಾಡಿದ್ದರು. ಶಿವಮೊಗ್ಗದಲ್ಲಿ ‘ಕುವೆಂಪು ವಿಶ್ವವಿದ್ಯಾಲಯ’ ಈ ಕಾಲದಲ್ಲಿ ಪ್ರಾರಂಭವಾಯಿತು. ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾಯಿತು. ಬೀದರ್‌ನಲ್ಲಿ ಪಶುವೈದ್ಯಕೀಯ ಕಾಲೇಜು ಮತ್ತು ರಾಯಚೂರಿನಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭವಾದವು.
ಬೆಂಗಳೂರಿಗೆ ಹೊಸ ಸ್ವರೂಪ
ರಾಜ್ಯದಲ್ಲಿ ಯುವಜನ ಸೇವಾ ಇಲಾಖೆ ಪ್ರಾರಂಭಕ್ಕೆ ಕಾರಣಕರ್ತರು ಹೆಗಡೆ. ನೃಪತುಂಗ ರಸ್ತೆಯಲ್ಲಿರುವ ‘ಯವನಿಕಾ’ ಮತ್ತು ಮಿಲ್ಲರ್ ರಸ್ತೆಯಲ್ಲಿರುವ ‘ಗುರುನಾನಕ್’ ಸಭಾಂಗಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಉದ್ಘಾಟನೆಯಾದವು. ಬೆಂಗಳೂರು ಹಸಿರುಮಯವಾಗಲು ಹೆಗಡೆ ಕಾರ‍್ಯಕ್ರಮ ರೂಪಿಸಿದ್ದರು. ಮುಖ್ಯಮಂತ್ರಿಯಾದ ತಕ್ಷಣ ಬೆಂಗಳೂರಿಗೆ ಅಂಟಿದ್ದ ಗೂಂಡಾಗಳ ನಗರ ಹಣೆಪಟ್ಟಿತೆಗೆಯಲು ಸಂಕಲ್ಪ ಮಾಡಿದರು. ಇದನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ಪಿ.ಜಿ.ಹರ್ಲಂಕರ್ ಅವರ ಮಾತುಗಳಲ್ಲಿ ಕೇಳಬಹುದು: ‘ನಾನು ಕಮಿಷನರ್ ಆಗಿ ನೇಮಕವಾದ ಮೊದಲ ದಿನವೇ ಅವರು ‘ನಗರದಲ್ಲಿ ಎಲ್ಲೂ ಗೂಂಡಾಗಳಿರಬಾರದು. ನಮ್ಮ ಕಚೇರಿಯಿಂದ ನಿಮ್ಮ ಕೆಲಸಕ್ಕೆ ಯಾವುದೇ ಅಡ್ಡಿ ಬರುವುದಿಲ್ಲ’ ಎಂಬ ಆಶ್ವಾಸನೆ ಕೊಟ್ಟರು.’
ಬೆಂಗಳೂರು ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ನಾಟ್ಯ, ನಾಟಕ, ಚಲನಚಿತ್ರ ಮೊದಲಾದ ಅನೇಕ ವಿಚಾರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಉಲ್ಲೇಖಿಸುವಂತಾಗಲು ಹೆಗಡೆ ಅವರ ಕೊಡುಗೆಯಿದೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರಿಗಿದೆ.
ಹೆಗಡೆ ಯಾವ ಸ್ಥಾನದಲ್ಲಿದ್ದರೂ ಕರ್ನಾಟಕದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಕೇಂದ್ರದಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹೆಗಡೆ ‘ಯೋಜನಾ ಆಯೋಗದ’ ಉಪಾಧ್ಯಕ್ಷರಾಗಿದ್ದರು. ಆಗ ಕೊಂಕಣ ರೈಲ್ವೆ ಯೋಜನೆಗೆ ಮಂಜೂರಾತಿ ದೊರೆಯಿತು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ‘ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ’ಗೆ ಅನುದಾನ ನೀಡಿದ ಹೆಗ್ಗಳಿಕೆ ಅವರದು.
ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್ ಕಾಗೇರಿ: ಪ್ರಹ್ಲಾದ್ ಜೋಶಿ
ರಾಜಕಾರಣಕ್ಕೆ ಹೊಸ ನೀರು ತಂದವರು
ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಕರ್ನಾಟಕದ ರಾಜಕಾರಣಕ್ಕೆ ಹೊಸ ನೀರು ಬರಲು ಕಾರಣಕರ್ತರಾಗಿದ್ದಾರೆ. ಬಿ.ರಾಚಯ್ಯ, ಎಂ.ಚಂದ್ರಶೇಖರ್, ವಿ.ಎಸ್.ಕೃಷ್ಣ ಅಯ್ಯರ್, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಬಿ.ಎಲ್.ಗೌಡ, ಡಿ.ಬಿ.ಚಂದ್ರೇಗೌಡ, ವಿ.ಎಲ್.ಪಾಟೀಲ್. ಡಿ.ಮಂಜುನಾಥ್, ಅಜೀಜ್ ಸೇಠ್ ಮುಂತಾದವರನ್ನು ಅವರ ಶಕ್ತಿಗೆ ಅನುಸಾರ ಹೆಗಡೆ ಬಳಸಿಕೊಂಡಿದ್ದಾರೆ.
ರಾಮಕೃಷ್ಣ ಹೆಗಡೆಯಂತಹ ರಾಷ್ಟ್ರನಿರ್ಮಾಪಕರು ಮತ್ತು ಮುತ್ಸದ್ದಿಯನ್ನು ಅವರು ಹುಟ್ಟಿದ ಆಗಸ್ಟ್ ಮತ್ತು ನಿಧನರಾದ ಜನವರಿ ತಿಂಗಳಿಗೆ ಮೀಸಲುಗೊಳಿಸಿ ನೆನಪು ಮಾಡಿಕೊಳ್ಳುವುದು ಅವರ ವ್ಯಕ್ತಿತ್ವಕ್ಕೆ ದ್ರೋಹ ಬಗೆದಂತೆ. ಉಪನ್ಯಾಸಗಳ ಜೊತೆ ಯುವ ಜನಾಂಗಕ್ಕೆ ನಾಯತ್ವದ ವಿಚಾರದಲ್ಲಿ ತರಬೇತಿ ಕೊಡಬೇಕು. ಅನೇಕ ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಕ್ಷೇತ್ರಕಾರ್ಯ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಇದನ್ನು ಸರ್ಕಾರವೇ ಮಾಡಬೇಕಿಲ್ಲ. ಹೆಗಡೆ ಅವರನ್ನು ಪ್ರೀತಿಸುವ ಮತ್ತು ಅವರ ವಿಚಾರಧಾರೆಗಳನ್ನು ಮೆಚ್ಚುವ ಜನರು ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕಿದೆ. ಅದಕ್ಕೆ ಸರ್ಕಾರವೂ ಪ್ರೋತ್ಸಾಹ ಕೊಡಬೇಕಿದೆ.
