Asianet Suvarna News Asianet Suvarna News

ಮಡಿಕೇರಿಯ ಬೆಟ್ಟದಲ್ಲಿ ಭಾರೀ ಒರತೆ: ಗುಡ್ಡ ಜರಿದು ಅನಾಹುತ

2018ರ ಗುಡ್ಡ ಕುಸಿತ ಪ್ರದೇಶವಾದ ಮಡಿಕೇರಿ ತಾಲೂಕಿನ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಎಂಬಲ್ಲಿ ಈಗ ಮತ್ತೆ ಜಲಸ್ಫೋಟ ಸಂಭವಿಸಿ ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಯಾವುದೇ ಮನೆಗಳಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ramakolli hills in madikeri facing landslide fear gvd
Author
Bangalore, First Published Jul 24, 2022, 1:26 PM IST

ಮಡಿಕೇರಿ (ಜು.24): 2018ರ ಗುಡ್ಡ ಕುಸಿತ ಪ್ರದೇಶವಾದ ಮಡಿಕೇರಿ ತಾಲೂಕಿನ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಎಂಬಲ್ಲಿ ಈಗ ಮತ್ತೆ ಜಲಸ್ಫೋಟ ಸಂಭವಿಸಿ ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಯಾವುದೇ ಮನೆಗಳಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಇದರ ಕೆಳಭಾಗದಲ್ಲಿರುವ 15 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇತ್ತೀಚೆಗಷ್ಟೇ ಜಿಲ್ಲೆಯ ಎರಡನೇ ಮೊಣ್ಣಂಗೇರಿ ಸಮೀಪದ ರಾಮಕೊಲ್ಲಿಯಲ್ಲಿ ಎರಡು ಬಾರಿ ಜಲಸ್ಫೋಟ ಸಂಭವಿಸಿತ್ತು. ಮತ್ತೆ ಜಲಸ್ಫೋಟವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಜರಿದ ಬೆಟ್ಟ: ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ ಕಡಿಮೆಯಾಗಿದ್ದರೂ ಮಳೆಯ ಅವಾಂತರಗಳು ಮಾತ್ರ ಮುಂದುವರಿಯುತ್ತಿದೆ. ಮಡಿಕೇರಿ ತಾಲೂಕಿನ ರಾಮಕೊಲ್ಲಿಯಲ್ಲಿ ಜಲಸ್ಫೋಟ, 2ನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಮಾತ್ರವಲ್ಲ ಬೆಟ್ಟಜರಿದು ಹೋಗಿದೆ. ಬೆಟ್ಟದ ಒಂದು ಭಾಗದ ಸಂಪೂರ್ಣ ಮಣ್ಣು ನೀರಿನೊಂದಿಗೆ ಜರಿದುಕೊಂಡು ಮದೆನಾಡಿನ ಮೂಲಕ ಜೋಡುಪಾಲದವರೆಗೆ ಕೆಸರು ಮಿಶ್ರಿತ ನೀರು ಹರಿದುಕೊಂಡು ಬಂದಿದೆ. 

Belagavi: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಜಿಲ್ಲೆಯಲ್ಲಿ ಜೋರಾಗಿ ಮಳೆಯಾದರೆ ಜಲಸ್ಫೋಟವಾದ ಬೆಟ್ಟಇನ್ನಷ್ಟುಕುಸಿಯುವ ಸಾಧ್ಯತೆ ಇದೆ. ಮಾತ್ರವಲ್ಲ ಹಾಗೆ ಕುಸಿದು ಬಂದ ಮಣ್ಣು ಜೋಡುಪಾಲದ ತನಕ ಬಂದು ರಾಷ್ಟ್ರೀಯ ಹೆದ್ದಾರಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. 2018ರಲ್ಲೇ ಈ ಬೆಟ್ಟಜರಿದ ಪರಿಣಾಮ ಜೋಡುಪಾಲದಲ್ಲಿ ಸಾಕಷ್ಟು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬೆಟ್ಟ ಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಬೆಟ್ಟಕುಸಿತವಾಗುವ ಮೊದಲು ಬೆಟ್ಟಪ್ರದೇಶದಿಂದ ಜೋರಾದ ಶಬ್ದ ಕೇಳಿ ಬಂದಿದ್ದು, ಗ್ರಾಮದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಭೂವಿಜ್ಞಾನ ಇಲಾಖೆ, ಎನ್‌ಡಿಆರ್‌ಎಫ್‌ ತಂಡ ಭೇಟಿ, ಪರಿಶೀಲನೆ: ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರಾಮಕೊಲ್ಲಿ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರು ಮತ್ತು ಎನ್‌ಡಿಆರ್‌ಎಫ್‌ ತಂಡವು ಶುಕ್ರವಾರ ಪರಿಶೀಲಿಸಿದರು. ಪರಿಶೀಲನೆ ನಡೆಸಲು ತೆರಳಿದ ಸಂದರ್ಭದಲ್ಲಿ ಮಳೆಯು ಹೆಚ್ಚಾದ ಕಾರಣ ಸ್ಥಳಿಯರು ಬಿರುಕು ಬಿಟ್ಟಿರುವ ಸ್ಥಳವನ್ನು ಮಳೆ ಕಡಿಮೆಯಾದ ನಂತರ ತೋರಿಸುವುದಾಗಿ ತಿಳಿಸಿದ ಮೇರೆಗೆ 2ನೇ ಮೊಣ್ಣಂಗೇರಿ ಗುಡ್ಡ ಪ್ರದೇಶದಲ್ಲಿ 2018 ನೇ ಸಾಲಿನಲ್ಲಿ ಬೆಟ್ಟಕುಸಿದಿದ್ದ ಪ್ರದೇಶ ಹಾಗೂ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ತಂಡವು ಪರಿಶೀಲಿಸಿತು. 

ಆಂಧ್ರ ಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಮೂವರು ಪೊಲೀಸರ ಸಾವು

ಈ ಪ್ರದೇಶದಲ್ಲಿ 2018ನೇ ಸಾಲಿನಲ್ಲಿ ಗುಡ್ಡ ಕುಸಿದಿದ್ದ ಪ್ರದೇಶದ ಒಂದು ಭಾಗದಲ್ಲಿ ಅಲ್ಪ ಪ್ರಮಾಣದ ಮಣ್ಣು ಜರಿದಿದ್ದು ಹಾಗೂ ಪಕ್ಕದ ಗುಡ್ಡದಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಗುಡ್ಡದ ಕೆಳಭಾಗದ ಪೂರ್ವ ದಿಕ್ಕಿನಲ್ಲಿ ಸುಮಾರು 900 ಮೀಟರ್‌ ದೂರದಲ್ಲಿ ಅಂದಾಜು 30 ಮನೆಗಳಿವೆ. ಮಳೆ ಹೆಚ್ಚಾಗಿರುವ ಕಾರಣ ಹಾಗೂ ಮಂಜು ಕವಿದಿರುವುದರಿಂದ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ, ಮಳೆ ಕಡಿಮೆಯಾದ ನಂತರ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್‌ ಅವರು ತಿಳಿಸಿದ್ದಾರೆ.

Follow Us:
Download App:
  • android
  • ios