ತ್ಯಾಗದಲ್ಲಿ ನೆಮ್ಮದಿ ಇದ್ದರೂ ಇಂದಿನವರು ಅದಕ್ಕೆ ಸಿದ್ದರಿಲ್ಲದಿರುವುದು ವಿಪರ್ಯಾಸ. ಹಿಂದಿನ ಕಾಲದಲ್ಲಿ ರಾಜ್ಯವನ್ನಾಳುತ್ತಿದ್ದ ರಾಜರು ಕೂಡ ತಮಗೆಲ್ಲವೂ ಇದ್ದರೂ ವಯಸ್ಸಾಗುತ್ತಿರುವಂತೆ ವನಪ್ರಸ್ಥಕ್ಕೆ ತೆರಳಿ ನಂತರ ಸಂನ್ಯಾಸ ಜೀವನ ನಡೆಸುತ್ತಿದ್ದರು. ತ್ಯಾಗದಲ್ಲಿ ನೆಮ್ಮದಿ ಇದೆ ಎಂದು ರಾಜಾದಿರಾಜರೂ ಕಂಡು ಕೊಂಡಿದ್ದರು. ಆದರೆ ಇಂದು ಅದನ್ನು ಕಾಣುವುದಕ್ಕೆ ಸಾಧ್ಯವೇ ಇಲ್ಲ.

ಅಧಿಕಾರದಿಂದ ಎಂದೂ ನೆಮ್ಮದಿ ಸಿಗುವುದಿಲ್ಲ

ಪ್ರತಿಯೊಬ್ಬರ ಬದುಕಿಗೂ ಬೇಕಿರುವುದು ನೆಮ್ಮದಿ. ಆ ನೆಮ್ಮದಿಗಾಗಿ ಬದುಕಿ ಹೊರತು ಹಣ, ಕೀರ್ತಿ, ಅಧಿಕಾರಕ್ಕಾಗಿ ಅಲ್ಲ. ಹಣ - ಅಧಿಕಾರದಿಂದ ಎಂದೂ ನೆಮ್ಮದಿ ಸಿಗುವುದಿಲ್ಲ. ನೆಮ್ಮದಿ ಸಿಗುವುದು ನಮ್ಮಲ್ಲಿ ಇರುವುದನ್ನು ಹಂಚಿದಾಗ ಮಾತ್ರ ಅರ್ಥತ್ ದಾನ - ಧರ್ಮದಲ್ಲಿ ಮಾತ್ರ ಎಂದು ಶ್ರೀರಾಮಚಂದ್ರಾಪುರ ಮಠದ (Ramachandrapura Math) ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಗಳ ಸಂನ್ಯಾಸ ಸ್ವೀಕಾರ ದಿನದ ಅಂಗವಾಗಿ ನಡೆದ 'ಜೀವನ ದಾನ' ( (Jeevanadhana) ವಿಶೇಷ ಕಾರ್ಯಕ್ರಮದಲ್ಲಿ ಜೀವನರಕ್ಷೆ ಅನುಗ್ರಹ ನೀಡಿ ಮಾತನಾಡಿದ ಶ್ರೀಗಳು, ದಾನದಲ್ಲಿ ಎರಡು ಕ್ರಮ ಇದೆ. ಒಂದು ತಪಸ್ವಿಗಳು ಅಥವಾ ಸಾಧಕರಿಗೆ ದಾನ ಮಾಡುವುದು. ಇನ್ನೊಂದು ಯಾರಿಗೆ ಅಗತ್ಯ ಇದೆಯೋ ಅಂತವರಿಗೆ ದಾನ ಮಾಡುವುದು. ಮೊದಲಿನದು ಇಂದಿನ ದಿನಮಾನದಲ್ಲಿ ಕಷ್ಟ. ಆದರೆ ಎರಡನೆಯದು ಸರಳ. ಅಂತಹ ಕಾರ್ಯ ಪ್ರತಿಯೊಬ್ಬರೂ ಮಾಡಿ ಎಂದ ಅವರು, ಆರ್ತರಿಗೆ ಸಹಾಯ ಮಾಡುವುದೆ ನಿಜವಾದ ವೈಭವ, ಅದು ನಮಗೂ ಸಂತೋಷ ನೀಡಲಿದೆ. ಖಂಡಿತವಾಗಿಯೂ ನಮಗೆ ಚಿನ್ನದ ಕಿರೀಟ, ಪಲ್ಲಕ್ಕಿ ಮೆರವಣಿಗೆ ಸಂತೋಷ ನೀಡುವುದಿಲ್ಲ. ಆದರೆ ಕಷ್ಟದಲ್ಲಿ ಇರುವವರನ್ನು ನಮ್ಮ ಸಮಾಜ ಗುರುತಿಸಿ ಸಹಾಯ ಮಾಡುವುದಕ್ಕೆ ಮುಂದಾಗಿರುವುದು ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ ಎಂದರು.

ತ್ಯಾಗದಲ್ಲಿ ನೆಮ್ಮದಿ ಇದೆ

ತ್ಯಾಗದಲ್ಲಿ ನೆಮ್ಮದಿ ಇದ್ದರೂ ಇಂದಿನವರು ಅದಕ್ಕೆ ಸಿದ್ದರಿಲ್ಲದಿರುವುದು ವಿಪರ್ಯಾಸ. ಹಿಂದಿನ ಕಾಲದಲ್ಲಿ ರಾಜ್ಯವನ್ನಾಳುತ್ತಿದ್ದ ರಾಜರು ಕೂಡ ತಮಗೆಲ್ಲವೂ ಇದ್ದರೂ ವಯಸ್ಸಾಗುತ್ತಿರುವಂತೆ ವನಪ್ರಸ್ಥಕ್ಕೆ ತೆರಳಿ ನಂತರ ಸಂನ್ಯಾಸ ಜೀವನ ನಡೆಸುತ್ತಿದ್ದರು. ತ್ಯಾಗದಲ್ಲಿ ನೆಮ್ಮದಿ ಇದೆ ಎಂದು ರಾಜಾದಿರಾಜರೂ ಕಂಡು ಕೊಂಡಿದ್ದರು. ಆದರೆ ಇಂದು ಅದನ್ನು ಕಾಣುವುದಕ್ಕೆ ಸಾಧ್ಯವೇ ಇಲ್ಲ, ಕೊನೆಯ ಉಸಿರಿನವರೆಗೂ ಅಧಿಕಾರದ ಆಸೆ ನೆಮ್ಮದಿಯನ್ನು ಹಾಳು ಮಾಡಿದೆ. ಕೂಡುವ ಲೆಕ್ಕಕ್ಕಿಂತ ಕಳೆಯುವ ಲೆಕ್ಕದಲ್ಲಿರುವ ಸುಖವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಜೀವನರಕ್ಷೆ : ಮುಳ್ಳಿನ ಗಿಡದಿಂದ ಶಾಲನ್ನು ಬಿಡಿಸಿದ ಶ್ತೀಗಳು, ಆ ಶಾಲನ್ನು ಶ್ರೀರಕ್ಷೆಯಾಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಹೊದೆಸುವ ಮೂಲಕ ಜೀವನದಾನ ನಡೆಯಿತು. ಹೊಸನಗರದ ಸಂಪೇಕಟ್ಟೆಯ ಮತ್ತೀಕೈ ಗ್ರಾಮದ ರಾಮಚಂದ್ರ ಭಟ್ ಕುಟುಂಬಕ್ಕೆ ಜೀವನದಾನ ನೀಡಲಾಯಿತು. ಅವರಿಗೆ 88 ವರ್ಷ ವಯಸ್ಸಾಗಿದ್ದು, ಅಡುಗೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ದುಡಿಯುತ್ತಿದ್ದ ಮಗನನ್ನು ಕಳೆದು ಕೊಂಡಿದ್ದು, ಈ ಕುಟುಂಬ ಸಂಕಷ್ಟದಲ್ಲಿತ್ತು.

ಇದೇ ಸಂದರ್ಭದಲ್ಲಿ ಶಂಕರ ಪಂಚಮಿ ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಜೀವನದಾನದ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಜೀವನದಾನ ಟ್ರಸ್ಟಿನ ಡಾ. ಶಾರದಾ ಜಯಗೋವಿಂದ, ಮಂಜಪ್ಪ ಗುಂಡಿ, ಆರ್.ಜಿ. ಹೆಗಡೆ ಹೊಸಾಕುಳಿ, ಚಂದ್ರಮತಿ ಹರಗಿ, ರಾಜಲಕ್ಷ್ಮೀ ಹೆಗಡೆ ಹೊಸ್ಮನೆ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಶಾಂತಾರಾಮ ಹಿರೇಮನೆ, ರಮೇಶ್ ಹೆಗಡೆ ಗುಂಡೂಮನೆ, ಪ್ರಮುಖರಾದ ಆರ್.ಎಸ್.ಹೆಗಡೆ, ಪ್ರಮೋದ ಪಂಡಿತ್, ತಿಮ್ಮಪ್ಪ ಗುಡ್ಡೆದಿಂಬ ಮತ್ತಿತರರು ಇದ್ದರು.

ಏನಿದು ಜೀವನ ದಾನ?

ಸಂನ್ಯಾಸ ಸ್ವೀಕರಿಸಿದ ಶುಭ ನೆನಪಿಗಾಗಿ ಪ್ರತಿವರ್ಷ ದೀನ ದುಃಖಿತರಿಗೆ ಅಭಯ ನೀಡುವ, ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಕಾರ್ಯಕ್ರಮ “ಜೀವನದಾನ”. ಜನ್ಮದಿನವನ್ನು ಹಲವರು ದೀಪವನ್ನು ಆರಿಸಿ ಆಚರಿಸುತ್ತಾರೆ, ಕೆಲವರು ದೀಪವನ್ನು ಬೆಳಗಿಸಿ ಆಚರಿಸುತ್ತಾರೆ, ಆದರೆ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ತಾವು ಸಂನ್ಯಾಸ ಸ್ವೀಕರಿಸಿದ ದಿನದಂದು ಕಷ್ಟದಲ್ಲಿರುವವರ ಬಾಳಿಗೆ ಬೆಳಕಾಗುವ ಮೂಲಕ ಸಂನ್ಯಾಸ ಸ್ವೀಕಾರದಿನವನ್ನು ಆಚರಿಸುತ್ತಾರೆ.

ಜೀವನದಾನ ಪಡೆದ ಕುಟುಂಬದ ಎಲ್ಲಾ ಅಗತ್ಯಗಳನ್ನು ಶ್ರೀಮಠ ನೋಡಿಕೊಳ್ಳುತ್ತದೆ. ಅವರಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಜೀವನಪರ್ಯಂತ ಶ್ರೀಮಠದಿಂದ ಒದಗಿಸಲಾಗುತ್ತದೆ.