Asianet Suvarna News Asianet Suvarna News

ಹೂಡಿಕೆಗೆ ಕರ್ನಾಟಕವೇ ಬೆಸ್ಟ್‌: ರಾಜೀವ್‌ ಚಂದ್ರಶೇಖರ್‌

ಹೂಡಿಕೆಗೆ, ಉದ್ದಿಮೆ ಸ್ಥಾಪನೆಗೆ ಇಲ್ಲಿ ಪೂರಕ ವಾತಾವರಣ| ಜರ್ಮನಿ ಉದ್ಯಮಿಗಳ ಜತೆ ಆನ್‌ಲೈನ್‌ ಗೋಷ್ಠಿ| ಕರ್ನಾಟಕವು ಉದ್ದಿಮೆ ಸ್ನೇಹಿ ರಾಜ್ಯ. ರಾಜ್ಯದ ಬೆಂಗಳೂರು ಮತ್ತು ಇತರೆಡೆಗಳಲ್ಲಿ ಉದ್ದಿಮೆಗಳನ್ನು ಸ್ಥಾಪನೆಗೆ ಪೂರಕ ವಾತಾವರಣವನ್ನು ಇಲ್ಲಿನ ಸರ್ಕಾರ ನಿರ್ಮಿಸಿದೆ| 

Rajeev Chandrasekhar Says Karnataka Best To Invest
Author
Bengaluru, First Published Sep 3, 2020, 8:08 AM IST

ಬೆಂಗಳೂರು(ಸೆ.03): ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಉದ್ದಿಮೆಗಳಿಗೆ ಸೂಕ್ತವಾದ ಅತ್ಯುತ್ತಮ ಆರ್ಥಿಕ ಮತ್ತು ಹೊಸತನದ ವಾತಾವರಣವನ್ನು ಹೊಂದಿದೆ. ಪ್ರಚಲಿತ ಜಾಗತಿಕ ವಿದ್ಯಮಾನಗಳು ಉದ್ದಿಮೆಗಳ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬದಲಾಯಿಸಿದ್ದು ಈ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಭಾರತ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕವು ಉದ್ದಿಮೆ ಸ್ಥಾಪನೆಗೆ ಪ್ರಶಸ್ತ ತಾಣವಾಗಿದೆ’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಯೂರೋಪ್‌-ಏಷ್ಯಾ ಬ್ಯುಸಿನೆಸ್‌ ಕನೆಕ್ಟ್, ಮಗ್ದೆಬರ್ಗ್‌ನ ಚೆಂಬರ್‌ ಅಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರೀಸ್‌ ಮತ್ತು ಇಂಡೋ - ಜರ್ಮನ್‌ ಚೇಂಬರ್‌ ಅಫ್‌ ಕಾಮರ್ಸ್‌ಗಳು ಆಯೋಜಿಸಿದ್ದ ‘ಜರ್ಮನಿಯಲ್ಲಿ ಇಂಡಿಯಾ ಬಿಸಿನೆಸ್‌ ಡೇ-2020’ ಎಂಬ ವೀಡಿಯೋ ಸಂವಾದದಲ್ಲಿ ದಿಕ್ಸೂಚಿ ಭಾಷಣ ಮಾಡಿ ರಾಜ್ಯದಲ್ಲಿನ ಹೂಡಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಆನ್‌ಲೈನಲ್ಲಿ ಜನಾಭಿಪ್ರಾಯ ಆಲಿಸಿ: ರಾಜೀವ್‌ ಚಂದ್ರಶೇಖರ್‌

ಕರ್ನಾಟಕವು ಉದ್ದಿಮೆ ಸ್ನೇಹಿ ರಾಜ್ಯ. ರಾಜ್ಯದ ಬೆಂಗಳೂರು ಮತ್ತು ಇತರೆಡೆಗಳಲ್ಲಿ ಉದ್ದಿಮೆಗಳನ್ನು ಸ್ಥಾಪನೆಗೆ ಪೂರಕ ವಾತಾವರಣವನ್ನು ಇಲ್ಲಿನ ಸರ್ಕಾರ ನಿರ್ಮಿಸಿದೆ. ರಾಜ್ಯಾದ್ಯಂತ ಉತ್ಪಾದನಾ ವಲಯ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಹೊಸ ಕೈಗಾರಿಕಾ ನೀತಿ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಿದೆ. ಬೆಂಗಳೂರಿನ ಹೊರಗೆ ಕೈಗಾರಿಕೆ ಮತ್ತು ತಂತ್ರಜ್ಞಾನ ವಲಯವನ್ನು ವರ್ಗಾಯಿಸುವ ಚಿಂತನೆಯಲ್ಲಿ ಕರ್ನಾಟಕ ಸರ್ಕಾರವಿದೆ. ಸ್ಥಳೀಯರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶವನ್ನು ಕರ್ನಾಟಕ ಸರ್ಕಾರ ಹೊಂದಿದೆ’ ಎಂಬ ಮಾಹಿತಿಯನ್ನು ರಾಜೀವ್‌ ನೀಡಿದರು.

ಕರ್ನಾಟಕ ಸರಕಾರದ ಪರವಾಗಿ ಭಾಗವಹಿಸಿದ ಕೈಗಾರಿಕಾ ಆಯುಕ್ತರಾದ ಗುಂಜನ್‌ ಕೃಷ್ಣ ಅವರು ಪ್ರಮುಖ ಆರ್ಥಿಕ ಕ್ಷೇತ್ರಗಳು ಮತ್ತು ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದರು. ಹೂಡಿಕೆಗೆ ಹೆಚ್ಚು ಅವಕಾಶವಿರುವ ಪ್ರಮುಖ ಆರ್ಥಿಕ ವಲಯಗಳು, ಆದ್ಯತೆಯ ಕ್ಷೇತ್ರಗಳು, ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವರಗಳನ್ನು ನೀಡಿದರು.

ಇಂಡೋ-ಜರ್ಮನ್‌ ಚೇಂಬರ್‌ ಅಫ್‌ ಕಾಮರ್ಸ್‌ ನ ಮುಖ್ಯಸ್ಥ ಡಿರ್‌ ಮ್ಯಾಟರ್‌ ಭಾರತದ ಪ್ರಸಕ್ತ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಚೇಂಬರ್‌ ನ ಫ್ರಾನ್ಜಿಸ್ಕಾ ರೋಟ್ಗರ್‌ ಅವರು ನವೋದ್ಯಮಗಳಿಗೆ ಭಾರತ ಸರ್ಕಾರ ಮತ್ತು ಐರೋಪ್ಯ ಒಕ್ಕೂಟ ನೀಡುವ ಬೆಂಬಲದ ಬಗ್ಗೆ ತಿಳಿಸಿದರು.

ಕೋವಿಡ್‌-19ರ ನಂತರದ ದಿನಗಳಲ್ಲಿ ಕರ್ನಾಟಕ ಮತ್ತು ಜರ್ಮನಿಯ ಸ್ಯಾಚಸೆನ್‌-ಅನಾಲ್ಟ್‌ ನಡುವೆ ಹೊಸ ವ್ಯವಹಾರ ಸಂಬಂಧವನ್ನು ಕಟ್ಟುವುದು, ವ್ಯವಹಾರ ಅವಕಾಶನ್ನು ಅನ್ವೇಷಿಸುವುದು ಸೇರಿದಂತೆ ಈ ಉಭಯ ಪ್ರಾಂತ್ಯಗಳ ನಡುವೆ ಪರಸ್ಪರ ಸಹಕಾರದ ಬಗ್ಗೆ ಗಮನ ಕೇಂದ್ರಿಕರಿಸಿತು. ವಿವಿಧ ವ್ಯವಹಾರಗಳ 50 ಪ್ರತಿನಿಧಿಗಳು ಈ ಆನ್‌ಲೈನ್‌ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
 

Follow Us:
Download App:
  • android
  • ios