ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

* ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ
* ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ
* ಸ್ವತಃ ತಾವೇ ಉತ್ತು ಬೆಳೆಯುವುದರ ಮೂಲಕ ನಿಜ ದನಿಯ ಕಾಯಕ ಸ್ವಾಮೀಜಿಯಾಗಿ ಹೊರಹೊಮ್ಮಿದ್ದಾರೆ.

Raita Ratna Award: Organic farming category winner Basavalinga Mahaswamiji from Chitradurga rbj

ಬೆಂಗಳೂರು/ಚಿತ್ರದುರ್ಗ, (ಮಾ.21): ಸುವರ್ಣನ್ಯೂಸ್‌- ಕನ್ನಡಪ್ರಭ 2022ನೇ ಸಾಲಿನ ರೈತ ರತ್ನ ಪ್ರಶಸ್ತಿಗೆ (Raita Ratna Award) ಮೊಳಕಾಲ್ಮೂರಿನ ಸಿದ್ದಯ್ಯನ ಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಸಾಧಕ ಸಂತನಿಗೆ ಗೌರವ ಸಮರ್ಪಣೆ. ಮೊಳಕಾಲ್ಮೂರಿನ ಸಿದ್ದಯ್ಯನ ಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಸಾಧಕ ಸಂತನಿಗೆ ಗೌರವ ಸಮರ್ಪಣೆ.

ರಾಜ್ಯದ ಗಡಿ ಭಾಗದ ಚಿನ್ನಹಗರಿ ನದಿ ತಟದಲ್ಲಿ ನೆಲೆ ಕಂಡಿರುವ ಸಿದ್ದಯ್ಯನ ಕೋಟೆಯ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ(Basavalinga Mahaswamiji) ಮಠದ ದಾಸೋಹಕ್ಕೆ ಅಗತ್ಯವಾದ ದವಸವನ್ನು ಸ್ವತಃ ತಾವೇ ಉತ್ತು ಬೆಳೆಯುವುದರ ಮೂಲಕ ನಿಜ ದನಿಯ ಕಾಯಕ ಸ್ವಾಮೀಜಿಯಾಗಿ ಹೊರಹೊಮ್ಮಿದ್ದಾರೆ.

Kannada Prabha, Asianet Suvarna News: ರೈತ ರತ್ನ ಪ್ರಶಸ್ತಿಗೆ 21 ಸಾಧಕರ ಆಯ್ಕೆ

ಜಂಗಮ ಜೋಳಿಗೆ ಹಾಕಿಕೊಂಡು ಜನರ ಬಳಿಗೆ ಹೋಗಿ ದುಶ್ಚಟಗಳ ಬಿಡುವ ಜಾಗೃತಿ ಕಾರ್ಯಕ್ರಮಗಳ ಏರ್ಪಡಿಸಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಸ್ವಾಮೀಜಿ, ಬಿಡುವಿನ ಸಮಯದಲ್ಲಿ ಕೃಷಿಯಲ್ಲಿ(Agriculture) ತೊಡಗುತ್ತಿದ್ದಾರೆ. ಪ್ರತಿ ವರ್ಷ ನೂರಾರು ಕ್ವಿಂಟಾಲ್‌ ದವಸ ಬೆಳೆಯುತ್ತಾರೆ.

1994 ಬೀದರ್‌ ನಡೆದಿದ್ದ ರಾಜ್ಯಮಟ್ಟದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ರಾಮವಿಲಾಸ್‌ ಪಾಸ್ವಾನ್‌ ಅವರು ಭಾಷಣದ ಮಧ್ಯದಲ್ಲಿ ಬಸವಣ್ಣನ ಆಶಯಗಳಂತೆ ಲಿಂಗಾಯಿತ ಮಠಕ್ಕೆ ದಲಿತ ವಟುವೊಬ್ಬರನ್ನು ಪೀಠಾಧ್ಯಕ್ಷರನ್ನಾಗಿಸುತ್ತೀರಾ ಎಂಬ ಪ್ರಶ್ನೆ ಎತ್ತಿದ್ದರು. ಸಭೆಯಲ್ಲಿದ್ದ ಇಳಕಲ್‌ ಡಾ.ಮಹಾಂತ ಸ್ವಾಮೀಜಿ ಉತ್ತಮ ವಟುವೊಬ್ಬರು ಸಿಕ್ಕರೆ ನಮ್ಮ ಪೀಠಕ್ಕೆ ನೇಮಿಸುತ್ತೇನೆ ಎಂದಿದ್ದರು. ನಂತರ ಮಾತಿಗೆ ತಪ್ಪದ ಮಹಾಂತಪ್ಪ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲ ಗ್ರಾಮದ ಛಲವಾದಿ ಸಮುದಾಯದ ಯುವಕನಿಗೆ ಲಿಂಗ ದೀಕ್ಷೆ, ಸಂಸ್ಕಾರ ನೀಡಿ ಸಿದ್ದಯ್ಯನ ಕೋಟೆ ಶಾಖಾ ಮಠಕ್ಕೆ ಪೀಠಾಧ್ಯಕ್ಷರನ್ನಾಗಿಸಿ ಕಳಿಸಿಕೊಟ್ಟಿದ್ದಾರೆ.
Raita Ratna Award: Organic farming category winner Basavalinga Mahaswamiji from Chitradurga rbj

ಎರಡು ಪಾತ್ರೆ, ಅಕ್ಕಿ, ಬೇಳೆಯೊಂದಿಗೆ ಸಿದ್ದಯ್ಯನ ಕೋಟೆಗೆ ಆಗಮಿಸಿದ ಶ್ರೀಗಳು ಅಲ್ಲಿದ್ದ ಸಿಮೆಂಟ್‌ ಶೀಟಿನ ಸಣ್ಣ ಮನೆಯಿಂದ ಕಾಯಕ ಆರಂಭಿಸಿ ನಿಧಾನವಾಗಿ ಮಠವನ್ನು ಬೆಳೆಸುತ್ತಾ ಸಾಗಿದರು. ಮಠದ ಅಂಗಳದಲ್ಲಿಯೇ ಶೇಂಗಾ, ಜೋಳ, ರಾಗಿ ಬೆಳೆಯುತ್ತಾ, ತೀರಾ ಸಂಕಷ್ಟದ ನಡುವೆಯೂ ಛಲ ಬಿಡದೆ ಮಠವನ್ನು ರಾಜ್ಯಮಟ್ಟಕ್ಕೆ ಪರಿಚಯಿಸಿದರು. ನಿತ್ಯ ಮುಂಜಾನೆ 4 ಗಂಟೆಗೆ ಏಳುವ ಬಸವಲಿಂಗ ಸ್ವಾಮೀಜಿ, ಪೂಜಾ ಕಾರ್ಯ ಮುಗಿಸಿಕೊಂಡು ಜಮೀನಿಗೆ ಹೋಗಿ ಕೆಲಸದಲ್ಲಿ ತೊಡಗುತ್ತಾರೆ. ವಾಪಾಸಾಗಿ ಇಲ್ಲಿನ ವಿದ್ಯಾರ್ಥಿಗಳ ದಾಸೋಹಕ್ಕೆ ಅಣಿಯಾಗುತ್ತಾರೆ. ತಾವೇ ಅಡುಗೆ ಮಾಡಿ ಮಕ್ಕಳಿಗೆ ಬಡಿಸುತ್ತಾರೆ. ಸರಳತೆಯೊಂದಿಗೆ ಭಕ್ತರನ್ನು ನಗು ಮುಖದಿಂದ ಉಪಚರಿಸುತ್ತಾರೆ. ಇದು ಕಳೆದೆರಡು ದಶಕದಿಂದ ನಡೆಯುತ್ತಿದೆ.

ಮಠಕ್ಕೆ ಸೇರಿದ 3 ಎಕರೆ ಮತ್ತು ಗ್ರಾಮದ ರೈತರಿಗೆ ಸೇರಿದ 5 ಎಕರೆ ಜಮೀನನ್ನು ದಾನ ಪಡೆದು ಅಲ್ಲಿನ ಕೊಳವೆ ಬಾವಿಗಳನ್ನು ಬಳಸಿಕೊಂಡು ಸಾವಯವ ಕೃಷಿ ಪದ್ದತಿಯಡಿ ರಾಗಿ, ಜೋಳ, ಬತ್ತ, ನವಣೆ, ಸಜ್ಜೆ, ಗೋಧಿ, ತೊಗರಿ, ಹಲಸಂದೆ, ಹೆಸರು, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿರುವ ಮೂರು ಹಸುಗಳ ಹಾಲು ಮೊಸರನ್ನು ಮಠದ ದಾಸೋಹಕ್ಕೆ, ಗೊಬ್ಬರವನ್ನು ಜಮೀನಿಗೆ ಬಳಸಿಕೊಳ್ಳುತ್ತಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಎದುರಾಗಿರುವ ಕೊರೋನಾ ಗದ್ದಲದಿಂದ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿ ಆದಾಯವೂ ಇಲ್ಲದಿದ್ದರೂ ಶ್ರೀಗಳು ಎದೆಗುಂದದೆ ಕೃಷಿಯಲ್ಲಿ ತೊಡಗಿ ನಿತ್ಯ ದಾಸೋಹಕ್ಕೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯ ಲಾಕ್‌ಡೌನ್‌ ಸಮಯದಲ್ಲಿ 350 ಚೀಲ ಸೋನಾ ಮಸೂರಿ ಭತ್ತ ಬೆಳೆದು ರಾಜ್ಯದ ಗಮನ ಸೆಳೆದಿದ್ದರು.

ಕಾವಿ ತೊಟ್ಟರೂ ಕೃಷಿಯ ಎಲ್ಲಾ ಕೆಲಸಗಳನ್ನು ತಾವೇ ನಿರ್ವಹಿಸುವ ಶ್ರೀಗಳ ಕಾರ್ಯವನ್ನು ಮೆಚ್ಚಿ ಇಳಕಲ್‌ ಮಠ ಸೇರಿದಂತೆ ವಿವಿಧ ಮಠಗಳು ಭಕ್ತಿ ಭೂಷಣ, ಕಾಯಕಯೋಗಿ, ಕಾಯಕ ಜ್ಯೋತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
"

Latest Videos
Follow Us:
Download App:
  • android
  • ios