Kannada Prabha, Asianet Suvarna News: ರೈತ ರತ್ನ ಪ್ರಶಸ್ತಿಗೆ 21 ಸಾಧಕರ ಆಯ್ಕೆ
* ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗದ ಪ್ರತಿಷ್ಠಿತ ಪ್ರಶಸ್ತಿ
* ಫೆ.24 ರಂದು ಪ್ರಶಸ್ತಿ ಪ್ರದಾನ
* 'ರೈತ ರತ್ನ - 2022’ ಪ್ರಶಸ್ತಿಗೆ 11 ವಿಭಾಗಗಳ 21 ಸಾಧಕರ ಆಯ್ಕೆ
ಬೆಂಗಳೂರು(ಫೆ.17): ಕೃಷಿ(Agriculture) ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬಲ್ಲ ರಾಜ್ಯದ ರೈತರು(Farmers) ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ - 2022’ (Raita Ratna Award) ಪ್ರಶಸ್ತಿಗೆ 11 ವಿಭಾಗಗಳ 21 ಸಾಧಕರನ್ನು ಬುಧವಾರ ಆಯ್ಕೆ ಮಾಡಲಾಯಿತು.
‘ಕನ್ನಡಪ್ರಭ’ (Kannada Prabha) ದಿನಪತ್ರಿಕೆ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’(Asianet Suvarna News) ಸುದ್ದಿವಾಹಿನಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದೇ ತಿಂಗಳ 24ನೇ ತಾರೀಖಿನಂದು ಬೆಂಗಳೂರಿನಲ್ಲಿ(Bengaluru) ನಡೆಯಲಿರುವ ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅತ್ಯಲ್ಪ ನೀರನ್ನೇ ಬಳಸಿ ಸಾವಯವ ಕೃಷಿ ಸಾಮ್ರಾಜ್ಯವನ್ನೇ ಕಟ್ಟಿದ ಹೆಮ್ಮೆಯ ರೈತ..!
ಬೆಂಗಳೂರಿನಲ್ಲಿರುವ ‘ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್’ನ ಕೇಂದ್ರ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತೀರ್ಪುಗಾರರಾಗಿ ಕೃಷಿ-ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ, ಕೃಷಿ ವಿಜ್ಞಾನಿ-ಲೇಖಕ ಡಾ. ಕೆ.ಎನ್.ಗಣೇಶಯ್ಯ, ರತ್ನಗಿರಿ ಇಂಪೆಕ್ಸ್ ಸಂಸ್ಥೆಯ ಮುಖ್ಯಸ್ಥ ಎಸ್.ಎ.ವಾಸುದೇವ ಮೂರ್ತಿ ಅವರು ಭಾಗವಹಿಸಿದ್ದರು.
11 ವಿಭಾಗಗಳಲ್ಲಿ ಆಯ್ಕೆ:
ಸುಸ್ಥಿರ ಕೃಷಿ, ಸಾವಯವ ಕೃಷಿ, ಆಧುನಿಕ ಕೃಷಿ, ಯುವ ರೈತ, ರೈತ ಮಹಿಳೆ, ಪಶು ಸಂಗೋಪನೆ, ತೋಟಗಾರಿಕೆ, ಬೆಳೆ ವಿಜ್ಞಾನಿ ಅಥವಾ ಬೆಳೆ ವೈದ್ಯ, ಕೃಷ್ಯುತ್ಪನ್ನ ಸಂಸ್ಥೆ ಅಥವಾ ವ್ಯಕ್ತಿ, ಕೃಷಿ ಸಂಶೋಧನೆ ಅಥವಾ ತಂತ್ರಜ್ಞಾನ ಹಾಗೂ ಸುವರ್ಣ ಕೃಷಿ ಶಾಲೆ ಎಂಬ 11 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಪ್ರಕ್ರಿಯೆ ವೇಳೆ ಬರೋಬ್ಬರಿ 1300ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದು ಬಂದಿದ್ದವು. ಇವುಗಳ ಪೈಕಿ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಕಳೆದ ವಾರ 5 ದಿನಗಳ ಕಾಲ ನಡೆದಿತ್ತು. ಕನ್ನಡಪ್ರಭ ಸಂಪಾದಕೀಯ ತಂಡವು(Kannada Prabha Editorial Team) ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕಷವಾಗಿ ಪರಿಶೀಲಿಸಿ ಪ್ರತಿ ವಿಭಾಗದಲ್ಲೂ ತಲಾ 5ರಿಂದ 6 ಸಾಧಕರನ್ನು(Achievers) ಆರಿಸಿತ್ತು.
ಆಯ್ದ 57 ನಾಮನಿರ್ದೇಶನಗಳನ್ನು ತೀರ್ಪುಗಾರರಾದ ಶಿವನಾಂದ ಕಳವೆ, ಗಣೇಶಯ್ಯ ಹಾಗೂ ವಾಸುದೇವ ಮೂರ್ತಿ ಅವರ ಮುಂದಿಡಲಾಗಿತ್ತು. ಪ್ರತಿ ಕ್ಷೇತ್ರದಲ್ಲೂ ಉತ್ಕೃಷ್ಟಸಾಧನೆ ಮಾಡಿದ್ದ ರೈತರು, ಕೃಷಿ ಸಂಬಂಧಿ ಸಾಧಕರನ್ನು ತೀರ್ಪುಗಾರರು ಪರಸ್ಪರ ಸಮಾಲೋಚಿಸಿ, ಅಳೆದು ತೂಗಿ ಪ್ರಶಸ್ತಿಗೆ ಆರಿಸಿದರು. ಸುಮಾರು 3 ತಾಸುಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆ ಬಳಿಕ 21 ಸಾಧಕರನ್ನು ಪ್ರಶಸ್ತಿಗೆ(Award) ಅಂತಿಮಗೊಳಿಸಲಾಯಿತು.
80ರ ವಯಸ್ಸಲ್ಲೂ ಕುಗ್ಗದ ಆಸಕ್ತಿ: ವರ್ಷಕ್ಕೆ 40 ಲಕ್ಷ ಆದಾಯ ಗಳಿಸುವ ರೈತ
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ(Ravi Hegde), ಪ್ರಧಾನ ಪುರವಣಿ ಸಂಪಾದಕ ಜೋಗಿ, ಕಾರ್ಯನಿರ್ವಾಹಕ ಸಂಪಾದಕ ರವಿಶಂಕರ್.ಕೆ.ಭಟ್, ಹಿರಿಯ ಮುಖ್ಯ ಉಪ ಸಂಪಾದಕ ರಾಜೇಶ್ ಶೆಟ್ಟಿಉಪಸ್ಥಿತರಿದ್ದರು.
ಕನ್ನಡಪ್ರಭ-ಏಷ್ಯನೆಟ್ ಸುವರ್ಣ ನ್ಯೂಸ್ ನೀಡುವ ದ್ವಿತೀಯ ವರ್ಷದ ‘ರೈತ ರತ್ನ’ ಪ್ರಶಸ್ತಿಗೆ ಸಾಧಕರ ಆಯ್ಕೆ ಬುಧವಾರ ಬೆಂಗಳೂರಿನಲ್ಲಿ ನಡೆಯಿತು. ತೀರ್ಪುಗಾರರಾಗಿ ಶಿವಾನಂದ ಕಳವೆ, ಡಾ. ಕೆ.ಎನ್.ಗಣೇಶಯ್ಯ, ಎಸ್.ಎ.ವಾಸುದೇವ ಮೂರ್ತಿ ಪಾಲ್ಗೊಂಡಿದ್ದರು. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಜೋಗಿ, ಕಾರ್ಯನಿರ್ವಾಹಕ ಸಂಪಾದಕ ರವಿಶಂಕರ್.ಕೆ.ಭಟ್, ಹಿರಿಯ ಮುಖ್ಯ ಉಪಸಂಪಾದಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರತಿಷ್ಠಿತ ಅವಾರ್ಡ್: 'ರೈತ ರತ್ನ’ ಪ್ರಶಸ್ತಿಗೆ 15 ಸಾಧಕರ ಆಯ್ಕೆ
ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ-2021’ ಪ್ರಶಸ್ತಿಯ 15 ವಿಭಾಗಗಳ ಸಾಧಕರನ್ನು ಆರಿಸಲಾಗಿತ್ತು.