ರಾಜ್ಯದಲ್ಲಿ ಮಳೆ ಅಬ್ಬರ ಇಳಿಕೆ, ಪ್ರವಾಹ ಮುಂದುವರಿಕೆ: ಖಾನಾಪುರ 7 ಫಾಲ್ಸ್ ವೀಕ್ಷಣೆಗೆ ನಿರ್ಬಂಧ
ಕಳೆದೆರಡು ದಿನಗಳಿಗೆ ಹೋಲಿಸಿದರೆ ಕರಾವಳಿ, ಕೊಡಗು ಮಲೆನಾಡು ಭಾಗದಲ್ಲಿ ಶನಿವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಬೆಂಗಳೂರು (ಜು.07): ಕಳೆದೆರಡು ದಿನಗಳಿಗೆ ಹೋಲಿಸಿದರೆ ಕರಾವಳಿ, ಕೊಡಗು ಮಲೆನಾಡು ಭಾಗದಲ್ಲಿ ಶನಿವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇದೇ ವೇಳೆ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 3 ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕೃಷ್ಣಾ ಹಾಗೂ ಅದರ ಉಪನದಿಗಳ ಪ್ರವಾಹದಿಂದ ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸೇತುವೆ, ಕಾರದಗಾ-ಭೋಜ್ ಮತ್ತು ಕುನ್ನೂರ- ಭೋಜವಾಡಿ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ 55 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಬಿಜೆಪಿಯವರು ಭಾರತ್ ಅಕ್ಕಿ ಸ್ಕೀಂ ಲೋಕಸಭೆ ಎಲೆಕ್ಷನ್‌ಗಾಗಿ ತಂದದ್ದು: ಸಿಎಂ ಸಿದ್ದರಾಮಯ್ಯ
ಮಳೆ ಹಿನ್ನೆಲೆಯಲ್ಲಿ ಬಟವಾಡೆ ಫಾಲ್ಸ್, ಚಿಕ್ಕಲೆ ಫಾಲ್ಸ್, ಪಾರವಾಡ ಫಾಲ್ಸ್, ಚೋರ್ಲಾ ಫಾಲ್ಸ್, ವಜ್ರಾ ಫಾಲ್ಸ್ ಸೇರಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ 7 ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಫಾಲ್ಸ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾಲ್ಸ್ ಮುಖ್ಯ ರಸ್ತೆಗೆ ಮೂವರು ಫಾರೆಸ್ಟ್ ಗಾರ್ಡ್ಗಳು ಕಾವಲು ಕಾಯುತ್ತಿದ್ದಾರೆ. ಇದರಿಂದಾಗಿ ವೀಕೆಂಡ್ನಲ್ಲಿ ಫಾಲ್ಸ್ ನೋಡಲು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆಯಾಗಿದ್ದು, 3 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಈ ಮಧ್ಯೆ, ಜಿಲ್ಲೆಯ ಗಿರಿತಾಣಗಳು, ಶಿಖರಗಳ ಚಾರಣವನ್ನು (ಟ್ರೆಕ್ಕಿಂಗ್) ಮಳೆಗಾಲ ಮುಗಿಯುವವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಅಲ್ಲದೆ, ಜಿಲ್ಲೆಯಾದ್ಯಂತ ಇರುವ ಜಲಪಾತ, ಝರಿ, ನದಿ, ಸಮುದ್ರ, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ನೀರಿನಲ್ಲಿ ಇಳಿಯುವುದು, ಈಜುವುದು, ಸಾಹಸ ಚಟುವಟಿಕೆಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ. ಇನ್ನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರಗಳಲ್ಲಿನ ಜನ ತಮ್ಮ, ತಮ್ಮ ಮನೆಗಳಿಗೆ ತೆರಳಿದ್ದಾರೆ.
ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸ್ತೇವೆ: ಬರೆದಿಟ್ಟುಕೊಳ್ಳಿ ಎಂದ ರಾಹುಲ್ ಗಾಂಧಿ
ಮಲೆನಾಡಿನಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವ ನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಶನಿವಾರ, ಒಂದೇ ದಿನ 4 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಪ್ರಸಕ್ತ ಸಾಲಿನಲ್ಲಿ ಹರಿದು ಬಂದ ಅತ್ಯಧಿಕ ಪ್ರಮಾಣದ ನೀರು ಇದಾಗಿದೆ. ಇನ್ನು, ಕೇರಳದ ವೈನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಭರ್ತಿಗೆ ಕೇವಲ 3 ಅಡಿಗಳಷ್ಟು ನೀರು ಬಾಕಿಯಿದೆ.