ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಸೋಮವಾರ ಜಿಟಿಜಿಟಿ ಮಳೆಯಾಗಿದ್ದು, ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಮಂಗಳವಾರವೂ ಕೂಡ ಮಳೆ ಆಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 9 ಜಿಲ್ಲೆಗಳಲ್ಲಿ ಸೋಮವಾರ ಜಿಟಿಜಿಟಿ ಮಳೆಯಾಗಿದ್ದು, ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಮಂಗಳವಾರವೂ ಕೂಡ ಮಳೆ ಆಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಒಂದೆರಡು ವಾರದಲ್ಲಿ ಚಳಿ ಪ್ರಮಾಣ ಕಡಿಮೆ
ಕಳೆದ ಒಂದೆರಡು ವಾರದಲ್ಲಿ ಚಳಿ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈಗ ಪುನಃ ಚಳಿ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತಗೊಂಡಿತ್ತು. ಮಧ್ಯಾಹ್ನ ವರೆಗೆ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ ಬಳಿಕ ಆರಂಭವಾದ ತುಂತುರು ಮಳೆ ಅಲ್ಲಲ್ಲಿ ರಾತ್ರಿವರೆಗೂ ಮುಂದುವರಿದಿತ್ತು. ರಾತ್ರಿ ವೇಳೆ ತಾಪಮಾನ ಮತ್ತಷ್ಟು ಕುಸಿದು ಚಳಿ ಹೆಚ್ಚಾಗಿತ್ತು.
ಮೋಡ ಕವಿದ ವಾತಾವರಣ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಚಾಮರಾಜನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೊಡಗು, ಹಾಸನದಲ್ಲಿ ತಂಪುಗಾಳಿ, ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯ ಮುನ್ಸೂಚನೆ ಇದೆ. ಮುಂದಿನ 48 ಗಂಟೆಗಳಲ್ಲಿ ಇದೇ ವಾತಾವರಣ ಇರುವುದಾಗಿ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಕನಿಷ್ಠ ತಾಪಮಾನ 18ರಿಂದ 22 ಡಿಗ್ರಿ
ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಚಳಿ, ಒಣಹವೆಯಿದೆ. ಬೀದರ್, ಧಾರವಾಡ, ಬೆಳಗಾವಿ, ದಾವಣಗೆರೆ, ಹಾಸನ, ಮೈಸೂರಿನಲ್ಲಿ ಕನಿಷ್ಠ ತಾಪಮಾನ 11-14 ಡಿಗ್ರಿ ಸೆಲ್ಸಿಯಸ್‌ಗಳಷ್ಟಿದೆ. ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಚಿತ್ರದುರ್ಗದಲ್ಲಿ ಕನಿಷ್ಠ ತಾಪಮಾನ 14ರಿಂದ 18 ಡಿಗ್ರಿ ಸೆಲ್ಸಿಯಸ್ ಇದೆ. ಇನ್ನು ಕರಾವಳಿ ಭಾಗದಲ್ಲಿ ಕನಿಷ್ಠ ತಾಪಮಾನ 18ರಿಂದ 22 ಡಿಗ್ರಿ ಸೆಲ್ಸಿಯಸ್‌ಗಳಷ್ಟಿದೆ.


