ಬೆಂಗಳೂರು, (ಅ.29): ಈಗಾಗಲೇ ಭಾರೀ ಮಳೆಯಿಂದಾಗಿ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆಯೂ ಮತ್ತೊಂದು ಶಾಕ್ ಎನ್ನುವಂತೆ ಮುಂದಿನ ಎರಡು ದಿನ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರಿ ಮಳೆ ಸುರಿಯಲಿದೆ. ಹೀಗಾಗಿ ನಗರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಬೆಂಗಳೂರಲ್ಲಿ ಮಹಾಮಳೆ: 50 ಕುಟುಂಬಗಳಿಗೆ 25000 ಮೊತ್ತದ ಪರಿಹಾರ ಚೆಕ್‌ ವಿತರಣೆ

ಅಕ್ಟೋಬರ್ 29ರಿಂದ ನವೆಂಬರ್ 3ರ ತನಕ ಭಾರೀ ಮಳೆ ಆಗಲಿದೆ ಎಂದು ಸುವರ್ಣ ನ್ಯೂಸ್‌ಗೆ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಅಲ್ಲದೇ ದಕ್ಷಿಣ ಒಳನಾಡಿನಲ್ಲೂ  ಅಕ್ಟೋಬರ್ 30 ಭಾರೀ ಮಳೆ ಆಗಲಿದೆ ಎಂದು ಹೇಳಿದ್ದಾರೆ.

 ಇತ್ತೀಚಿಗೆ ನಗರದಲ್ಲಿ ಸುರಿದಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಜನರ ನಿವಾಸಗಳಿಗೆ ಮಳೆ ನೀರು ನುಗ್ಗಿ ಭಾರಿ ಅವಾಂತರ ಉಂಟಾಗಿತ್ತು. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ವಸ್ತುಗಳೆಲ್ಲಾ ನೀರಿನಲ್ಲಿ ಮುಳುಗಿ ಹೋಗಿದ್ದವು. ಈ ಮೂಲಕ ಜನರ ಬದುಕೇ ತತ್ತರಿಸಿ ಹೋಗಿತ್ತು. ಸಿಎಂ ಯಡಿಯೂರಪ್ಪ ಕೂಡ ನೀರು ನುಗ್ಗಿ ಅವಾಂತರ ಸೃಷ್ಠಿಸಿದಂತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ 25 ಸಾವಿರ ಪರಿಹಾರ ಕೂಡ ಘೋಷಿಸಿದ್ದರು.