* ರಾಜ್ಯ ಕಾಂಗ್ರೆಸ್ಸಿಗೆ ಖರ್ಗೆ, ಸಿದ್ದು, ಖರ್ಗೆ ನೇತೃತ್ವ: ರಾಹುಲ್ ಗಾಂಧಿ* ಮೂವರೂ ಒಗ್ಗಟ್ಟಾಗಿ ಹೋರಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು* 150 ಸ್ಥಾನಗಳನ್ನು ಗೆಲ್ಲಬೇಕು, ಬೆಂಗಳೂರಲ್ಲಿ ಸರಣಿ ಸಭೆ ವೇಳೆ ಸೂಚನೆ
ಬೆಂಗಳೂರು(ಏ.02): ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ತ್ರಿವಳಿ ನೇತೃತ್ವ ಘೋಷಣೆ ಮಾಡಿದ್ದು, ಬರೋಬ್ಬರಿ 150 ಸ್ಥಾನಗಳೊಂದಿಗೆ ಸುಭದ್ರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ಗುರಿಯನ್ನು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೂರೂ ಮಂದಿ ಒಟ್ಟಾಗಿ ಹೋರಾಟ ಮಾಡಿ 150 ಸ್ಥಾನ ಗೆಲ್ಲಬೇಕು. ಕರ್ನಾಟಕ ಸ್ವಾಭಾವಿಕವಾಗಿ ಕಾಂಗ್ರೆಸ್ ರಾಜ್ಯವಾಗಿರುವುದರಿಂದ ಈ ಗುರಿ ಕಠಿಣವಲ್ಲ. ಹೀಗಾಗಿ 150 ಸ್ಥಾನಗಳಿಗೆ ಒಂದು ಸ್ಥಾನವೂ ಕಡಿಮೆಯಾಗಬಾರದು ಎಂದು ಸ್ಪಷ್ಟಸೂಚನೆ ನೀಡಿದರು.
ಶುಕ್ರವಾರ ದಿನವಿಡೀ ಕಾಂಗ್ರೆಸ್ ಹಿರಿಯ ನಾಯಕರು, ಶಾಸಕರು, ಮಾಜಿ ಸಚಿವರು, ಪರಾಜಿತ ಅಭ್ಯರ್ಥಿಗಳು, ವಿವಿಧ ಮುಂಚೂಣಿ ಘಟಕಗಳೊಂದಿಗೆ ಸರಣಿ ಸಭೆ ನಡೆಸಿದ ಅವರು ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದÜರು. ಯಾವ್ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು. ಚುನಾವಣೆ ಗೆದ್ದ ಬಳಿಕ ಯಾವ ಅಂಶಗಳನ್ನು ಮನದಲ್ಲಿಟ್ಟುಕೊಂಡು ಸರ್ಕಾರ ನಡೆಸಬೇಕು ಎಂಬುದನ್ನೂ ವಿವರಿಸಿದರು.
ಕೆಪಿಸಿಸಿ ಸಭಾಂಗಣದಲ್ಲಿ ಸರಣಿ ಸಭೆಗಳಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ತನ್ಮೂಲಕ 150 ಸ್ಥಾನಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಪರೋಕ್ಷವಾಗಿ ವೈಮನಸ್ಸುಗಳನ್ನು ಬದಿಗಿಟ್ಟು ಮುನ್ನಡೆಯುವಂತೆ ಸಲಹೆ ನೀಡಿದರು.
ನೀವು ಎಲ್ಲಿಗೇ ಕರೆದರೂ ಬರಲು ನಾನು ಸಿದ್ಧನಿದ್ದೇನೆ. ರಾಜ್ಯದ ಮೂಲೆ-ಮೂಲೆಗೂ ಬರುತ್ತೇನೆ. 20 ವರ್ಷದ ಹಿಂದೆ ಏನು ಮಾಡಿದ್ದರು ಎಂಬುದರ ಮೇಲೆ ಅಲ್ಲದೆ ಈಗ ಪಕ್ಷಕ್ಕಾಗಿ ಏನು ಮಾಡುತ್ತಿದ್ದಾರೆ ಎಂಬ ಅರ್ಹತೆಯ ಮೇಲೆ ಟಿಕೆಟ್ ನೀಡಲಾಗುವುದು. ಯುವಕರು, ಮಹಿಳೆಯರು ಹಾಗೂ ಪಕ್ಷ ನಿಷ್ಠರಿಗೆ, ಕಾಂಗ್ರೆಸ್‌ಗೆ ರಕ್ತ, ಕಣ್ಣೀರು ನೀಡಿದವರಿಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಸಂದೇಶ ನೀಡಿದರು.
ನಾವು ಅಧಿಕಾರಕ್ಕೆ ಬಂದ ಬಳಿಕ ಬಡವರು, ದುರ್ಬಲರು, ಸಣ್ಣ ಉದ್ದಿಮೆದಾರರಿಗೆ ಶಕ್ತಿ ತುಂಬಿ ರಾಜ್ಯವನ್ನು ಮತ್ತೆ ಪ್ರಗತಿಯ ಹಾದಿಗೆ ತರಬೇಕು ಎಂದೂ ಕರೆ ನೀಡಿದರು.
ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ:
ರಾಜ್ಯದಲ್ಲಿ ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಶೇ. 40ರಷ್ಟುಕಮಿಷನ್ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘವೇ ಪ್ರಧಾನಮಂತ್ರಿಗೆ ಪತ್ರ ಬರೆದಿದೆ. ಹೀಗಾಗಿ ಮೊದಲು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನು ಭ್ರಷ್ಟಾಚಾರದ ವಿರುದ್ಧ ಮಾತನಾಡುವುದಿಲ್ಲ. ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಅಪಹಾಸ್ಯಕ್ಕೆ ಒಳಗಾಗಲಿದ್ದು ಇಡೀ ರಾಜ್ಯ ನಗಲಿದೆ. ರಾಜ್ಯ ಮಾತ್ರವಲ್ಲ ದೇಶದಲ್ಲಿ ಎಲ್ಲೂ ಅವರು ಭ್ರಷ್ಟಾಚಾರ ವಿರುದ್ಧ ಮಾತನಾಡಲಾಗಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಬಿಜೆಪಿ ವೈಫಲ್ಯ ಜನರ ಮುಂದಿಡಿ:
ರಾಜ್ಯ ಹಾಗೂ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ದೇಶದ ಆರ್ಥಿಕತೆ ಹಾಳಾಗಿದೆ, ಬೆಲೆ ಏರಿಕೆ ಹೆಚ್ಚಾಗಿದೆ. ನಮ್ಮ ಶಕ್ತಿಯಾಗಿದ್ದ ಆರ್ಥಿಕತೆ ದುರ್ಬಲವಾಗಿದೆ. ಕರ್ನಾಟಕದ ಯಾವುದೇ ಬಿಜೆಪಿ ನಾಯಕ, ರಾಷ್ಟ್ರೀಯ ನಾಯಕರು ನಿರುದ್ಯೋಗ, ಆರ್ಥಿಕತೆ, ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಲು ಸಾಧ್ಯವಿಲ್ಲ. ಬಡವರ ಹಣವನ್ನು ಕಿತ್ತು ದೊಡ್ಡ ಉದ್ಯಮಿಗಳಿಗೆ ನೀಡುವುದು ಇವರ ಉದ್ದೇಶ. ಹೀಗಾಗಿ ಕೋಮುದ್ವೇಷ, ನಿರುದ್ಯೋಗ, ನೋಟು ರದ್ಧತಿ, ಕೆಟ್ಟಜಿಎಸ್‌ಟಿ ಪದ್ಧತಿ, ಕರಾಳ ಕೃಷಿ ಕಾಯ್ದೆಯಿಂದ ದೇಶಕ್ಕಾಗಿರುವ ನಷ್ಟವನ್ನು ಜನರಿಗೆ ತಲುಪಿಸಬೇಕಿದೆ ಎಂದರು.
