ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖಜಾನೆ ಲೂಟಿ ಮಾಡುತ್ತಿದೆ ಎಂದು ಸುವರ್ಣಸೌಧದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ದಿವಾಳಿಯಾಗಿದ್ದು, ತೆರಿಗೆ ಏರಿಕೆಗೂ ಸರ್ಕಾರ ಮುಂದಾಗಿದೆ ಎಂದರು.
ಸುವರ್ಣಸೌಧ (ಡಿ.18): ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣವನ್ನೇ ಈ ಸರ್ಕಾರ 'ಪಟಾ ಪಟ್' ಅಂತ ಲೂಟಿ ಹೊಡೆದಿದೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದರು. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದರು
ಸಾರಿಗೆ ಇಲಾಖೆ ಪಾಪರ್: ಬೀದಿಗೆ ಬಂದ ಕಾರ್ಮಿಕರು
ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಶಕ್ತಿ ಯೋಜನೆಗೆ ಸರ್ಕಾರ ಹಣ ನೀಡುತ್ತಿಲ್ಲ, ಸಾರಿಗೆ ಇಲಾಖೆ ಸಂಪೂರ್ಣ ಹದಗೆಟ್ಟಿದ್ದು ಕಾರ್ಮಿಕರು ಬೀದಿಗೆ ಇಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದ್ದು, ಇವರ ಮಾನಮರ್ಯಾದೆ ಬಟಾಬಯಲಾಗಿದೆ. ನಾನು ಸಾರಿಗೆ ಸಚಿವನಾಗಿದ್ದಾಗ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಲಾಭದಲ್ಲಿದ್ದವು. ಇಲಾಖೆಗಾಗಿ 1000 ಎಕರೆ ಜಮೀನು ಖರೀದಿಸಿದ್ದೆವು ಮತ್ತು 52 ಪ್ರಶಸ್ತಿಗಳು ನಮಗೆ ಬಂದಿದ್ದವು. ಕೋವಿಡ್ ಹೊರತುಪಡಿಸಿ ನಮ್ಮ ಅವಧಿಯಲ್ಲಿ ಸಾರಿಗೆ ಇಲಾಖೆ ಸದಾ ಲಾಭದಲ್ಲಿತ್ತು ಎಂದು ನೆನಪಿಸಿದರು.
ತೆರಿಗೆ ಏರಿಕೆ ಚಿಂತನೆ: ತುಘಲಕ್ ದರ್ಬಾರ್
ಖಜಾನೆ ಖಾಲಿಯಾಗಿರುವುದರಿಂದ ಈಗ ತೆರಿಗೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಮದ್ಯದ ದರ ಮತ್ತು ಮನೆ ತೆರಿಗೆ ಹೆಚ್ಚಿಸಲು ಸಿದ್ದರಾಮಯ್ಯ ಅವರು ಚಿಂತನೆ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಒಂದು ತುಘಲಕ್ ಸರ್ಕಾರ. ರಾಜ್ಯದ ಜನರು ಈ ಸರ್ಕಾರವನ್ನು ಅಧಿಕಾರಕ್ಕೆ ತಂದು ರೋಸಿ ಹೋಗಿದ್ದಾರೆ ಎಂದರು.
ಭೂ ಲೂಟಿ ಆರೋಪ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ
ಕೋಲಾರದಲ್ಲಿ 21 ಎಕರೆ ಕೆರೆ ಜಮೀನನ್ನು ಲೂಟಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಲೂಟಿ ಮಾಡಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆಯ ಭೂಮಿಯನ್ನೂ ಬಿಡದೆ ಲೂಟಿ ಮಾಡಲಾಗುತ್ತಿದೆ. ಇಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರೇ ಕಳ್ಳರಾಗಿದ್ದಾರೆ ಎಂದು ದೂರಿದರು.
ಇದು ನುಂಗಣ್ಣಗಳ ಸರ್ಕಾರ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಡಳಿತದ ಕುರಿತು ತೀವ್ರ ಕಿಡಿಕಾರಿದ ಅವರು, ಇದು ಜನಪರ ಸರ್ಕಾರ ಅಲ್ಲ, ನುಂಗಣ್ಣಗಳ ಮತ್ತು ಲೂಟಿಕೋರರ ಸರ್ಕಾರ. ಸರ್ಕಾರಕ್ಕೆ ಹಣವಿಲ್ಲದೆ ಜನರಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


