ಹೈಕಮಾಂಡ್ ವಚನ ಭ್ರಷ್ಟವಾಗಿರುವುದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್  ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದು ನಿಶ್ಚಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು  ಕಿತ್ತಾಡುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.

ಬೆಂಗಳೂರು (ನ.21): ಹೈಕಮಾಂಡ್ ವಚನ ಭ್ರಷ್ಟ ಆಗಿದೆ ಎಂದು ಹೇಳಿ ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿದೆ:

ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕುರ್ಚಿ ಗಲಾಟೆಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಸಚಿವರೆಲ್ಲರೂ ದೆಹಲಿ ಕಡೆ ಮುಖ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿದೆ. ಸತ್ತೇ ಹೋಗಿದೆ. ಶಿವಕುಮಾರ್ ಈಗಾಗಲೇ ರಾಜೀನಾಮೆ ಸುಳಿವು ನೀಡಿದ್ದಾರೆ. ಕಣ್ಣೀರು ಹಾಕಿದ್ದಾರೆ. ಕೆಲಸ ಮಾಡೋದು ಒಬ್ಬರು, ಖುಷಿ ಪಡೋದು ಒಬ್ಬರು ಎಂದಿದ್ದಾರೆ. ದರೋಡೆ ಮಾಡುವವರಿಗೆ ಕರ್ನಾಟಕ ಒಂದು ರೀತಿ ಸ್ವರ್ಗವಾಗಿದೆ ಎಂದು ಆಶೋಕ್‌ ಹರಿಹಾಯ್ದರು.

ಸಿಎಂ ಕುರ್ಚಿ ಬಿಡಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಬಿಡುವುದಿಲ್ಲ ಎಂದು ದಿಟ್ಟತನದಿಂದ ಹೇಳಿದ್ದಾರೆ. ಅಗತ್ಯ ಇಲ್ಲದೆಯೇ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇನ್ನು ಒಂದು ತಿಂಗಳೊಳಗೆ ಈ ಪ್ರಹಸನದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಶಿವಕುಮಾರ್ ಅವರು ಎರಡೂ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಾರೆ. ನೋಡುತ್ತಿರಿ ಎಂದರು.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ, ಧರ್ಮಸ್ಥಳ ಘಟನೆ ಹೀಗೆ ಅನೇಕ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿರುವುದರಿಂದ ಪೊಲೀಸ್‌ ಇಲಾಖೆಯ ಮೇಲೆ ಯಾರಿಗೂ ನಿಯಂತ್ರಣವಿಲ್ಲದಂತಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಕಮಿಶನ್‌ ವ್ಯವಸ್ಥೆ ಇರುವುದರಿಂದ ಎಲ್ಲೂ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಅಶೋಕ್‌ ಆರೋಪಿಸಿದರು.