ಬೆಂಗಳೂರಿನ ಕೋಗಿಲು ಗ್ರಾಮದಲ್ಲಿನ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಕಳೆದ 6 ತಿಂಗಳಿನಿಂದಷ್ಟೇ ಇಲ್ಲಿ ಮನೆಗಳನ್ನು ಕಟ್ಟಲಾಗಿದ್ದು, ಕಾಂಗ್ರೆಸ್ ಪ್ರಯೋಜಿತ ಅಕ್ರಮ ಎಂದು ಗೂಗಲ್ ಮ್ಯಾಪ್ ಸಾಕ್ಷ್ಯಗಳನ್ನು ಪ್ರದರ್ಶಿಸಿ ದೂರಿದ್ದಾರೆ.

ಬೆಂಗಳೂರು (ಡಿ.30): ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿರುವ 14 ಎಕರೆ 38 ಗುಂಟೆ ಜಮೀನಿನ ಪೈಕಿ 5 ಎಕರೆಯನ್ನು ಬಿಬಿಎಂಪಿಗೆ ನೀಡಲಾಗಿದೆ. ಉಳಿದ 9 ಎಕರೆ 38 ಗುಂಟೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದ ಸ್ಯಾನಿಟರಿ ಬರ್ನಿಂಗ್ ಪಾಯಿಂಟ್ ಯೋಜನೆ ರೂಪಿಸಲಾಗಿದೆ. ಆದರೆ, ಕಳೆದ 20 ವರ್ಷಗಳಿಂದ ಅಲ್ಲಿದ್ದೇವೆ ಎನ್ನುವವರ ವಾದ ಸುಳ್ಳು. 2023ರ ಗೂಗಲ್ ಮ್ಯಾಪ್ ಮತ್ತು ಸ್ಯಾಟಲೈಟ್ ಚಿತ್ರಗಳನ್ನು ಗಮನಿಸಿದರೆ ಅಲ್ಲಿ ಪಾಚಿ ಕಟ್ಟಿದ ಕೆಸರು ತುಂಬಿದ ಜಾಗವಿತ್ತು. ಕೇವಲ ಕಳೆದ 6 ತಿಂಗಳಿನಿಂದ ಇಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಲಾಗಿದೆ' ಎಂದು ಅಶೋಕ್ ಅವರು ಗೂಗಲ್ ಮ್ಯಾಪ್ ಸಾಕ್ಷ್ಯಗಳನ್ನು ಪ್ರದರ್ಶಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಗಿಲು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಬೆಳಗ್ಗೆ ಇಂದ ಅಂತರಾಷ್ಟ್ರೀಯ ಸುದ್ದಿ ಆಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಟ್ವೀಟ್ ಮಾಡಿದ್ದರು. ಅವರ ಶಾಸಕರು, ಸಂಸದರು ಕೂಡ ಭೇಟಿ ಮಾಡಿದ್ದಾರೆ. ಇಲ್ಲಿ ಒಟ್ಟು ಒಟ್ಟು 14 ಎಕರೆ 38 ಗುಂಟೆ ಜಮೀನು ಇದೆ. ಇದರಲ್ಲಿ 5 ಎಕರೆ ಬಿಬಿಎಂಪಿ ಕೇಳಿದ್ದು, ಅವರಿಗೆ ಕೊಟ್ಟಿದ್ದಾರೆ. 9 ಎಕರೆ 38 ಗುಂಟೆ ಈಗ ಇದೆ. 100 ಕೋಟಿ ರೂ. ವೆಚ್ಚದಲ್ಲಿ ಈಗ ಪ್ರಾಜೆಕ್ಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

20 ಸಾವಿರ ರೂ. ಕೊಟ್ಟರೆ ಆಧಾರ ಕಾರ್ಡ್ ಮಾಡಿಕೊಡ್ತಾರೆ:

ಸ್ಯಾನಿಟರಿ ಬರ್ನಿಂಗ್ ಪಾಯಿಂಟ್ ಮಾಡಲು ಅಲ್ಲಿ ಪ್ರಾಜೆಕ್ಟ್ ಮಾಡಿದ್ದಾರೆ. ಅಲ್ಲಿ ಬಾಂಗ್ಲಾದೇಶದಿಂದ ಮುಸ್ಲಿಮರು ಪಶ್ಚಿಮ ಬಂಗಾಳಕ್ಕೆ ಬಂದರೆ, 20 ಸಾವಿರ ರೂ. ನೀಡಿದರೆ ಆಧಾರ್ ಕಾರ್ಡ್ ಕೊಡ್ತಾರೆ. ಇವರು ನಮ್ಮ ರಾಜ್ಯದ ಜನರು ಅಲ್ಲ ಎಂದು ಸಿಎಂ ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳಿಗೂ ನಾನು ಮಾತಾಡಿದೆ. ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಚೀಫ್ ಇಂಜಿನಿಯರ್ ಕರಿಗೌಡ ಅವರಿಂದ ಮಾಹಿತಿ ಪಡೆದಿದ್ದೇನೆ. ಈ ಮಾಹಿತಿ ಪ್ರಕಾರ ಕೋಗಿಲು ಗ್ರಾಮದ ಸರ್ವೆ ನಂಬರ್ 99 ನಕ್ಷೆ ಲಭ್ಯವಾಗಿದೆ. ಅದರಲ್ಲಿ 14 ಎಕರೆ ಜಾಗವಿತ್ತು. ಯೋಜನೆಗೆ ಪಡೆದ ನಂತರ 9 ಎಕರೆ 38 ಗುಂಟೆ ಜಮೀನು ಇತ್ತು. ಖಾಸಗಿಯವರಿಗೆ ಮೊದಲು ಇಲ್ಲಿ ಲೀಸ್‌ಗೆ ಭೂಮಿ ಕೊಟ್ಟಿದ್ದರು. ಅಲ್ಲಿ ಕಲ್ಲು ಕ್ವಾರಿ ಆಯ್ತು. ಅದರಲ್ಲಿ ಹೊಂಡ ಆಯ್ತು. ಬಳಿಕ ಘನತ್ಯಾಜಕ್ಕೆ ಹಾಕಲು ನೀಡಿದರು. ಇದು ಸರ್ಕಾರದ ಭೂಮಿಯಾಗಿದೆ. ಇವರ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ , ಅವರ ಸ್ಪೆಷಲ್ ಆಫೀಸರ್ ಸರ್ಪರಾಜ್ ಖಾನ್ ಅಲ್ಲೆ ಕುಳಿತಿದ್ದಾರೆ ಎಂದರು.

2023ರ ಗೂಗಲ್ ಮ್ಯಾಪ್ ತೋರಿಸಿದ ಅಶೋಕ್. ಆಗ ಈ ಜಾಗ ಖಾಲಿ ಇತ್ತು. ಕಳೆದ 20 ವರ್ಷಗಳಿಂದ ಅಲ್ಲಿ ಯಾರು ಇರಲಿಲ್ಲ. ಇವರು ತಲೆ ಕೆಟ್ಟವರು ಹೇಳ್ತಾರೆ, ಅಲ್ಲಿ 20 ವರ್ಷದಿಂದ ಇದ್ದಾರೆ ಎನ್ನುತ್ತಾರೆ. ಅಲ್ಲಿ ಕೆಸರು ತುಂಬಿಕೊಂಡಿತ್ತು. ಅದೇ ಜಾಗದಲ್ಲಿ 6 ತಿಂಗಳಿಂದ ಮನೆ ಕಟ್ಟಿದ್ದಾರೆ. ವಾಸಿಂ ಎನ್ನುವ ಕಾಂಗ್ರೆಸ್ ಲೀಡರ್ ಎಲ್ಲರ ಹತ್ತಿರ ತಲಾ 4 ಲಕ್ಷ ರೂ. ಪಡೆದಿದ್ದಾನೆ. ಇದು ಕಾಂಗ್ರೆಸ್ ಪ್ರಯೋಜಿತ ಅಕ್ರಮವಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ರಾಜ್ಯಾದ್ಯಂತ ಅಕ್ರಮವಾಗಿ ಇರುವ ಎಲ್ಲರನ್ನು ತೆರವು ಮಾಡುತ್ತೇವೆ ಎಂದರು. ಆದರೆ ಕಸ ಹಾಕುವ ಜಾಗದಲ್ಲಿ ಕಾಂಗ್ರೆಸ್‌ನವರು ಮನೆ ಮಾಡಿಕೊಂಡಿದ್ದಾರೆ ಎಂದು ಆರ್. ಅಶೋಕ್ ಟೀಕಿಸಿದರು.

2023ರಲ್ಲಿ ಖಾಲಿ ಇದ್ದ ಪಾಚಿ ಕಟ್ಟಿದ ಜಾಗದ ಪೋಟೋ ರಿಲೀಸ್

ಇದು 2023 ರ ಸೆಟಲೈಟ್ ಪಿಕ್ಟರ್ ಆಗಿದೆ. 2023ರಲ್ಲಿ ಖಾಲಿ ಇದ್ದ ಪಾಚಿ ಕಟ್ಟಿದ ಜಾಗದ ಪೋಟೋ ರಿಲೀಸ್ ಮಾಡಿದ ಆರ್.ಅಶೋಕ್ ಅವರು, 12/09/2025 ರಂದು ಅನಧಿಕೃತ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ತಹಸೀಲ್ದಾರ್ , ಬಿಬಿಎಂಪಿ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 28/05/2024 ರಂದು ತಹಸೀಲ್ದಾರ್ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಸರ್ಕಾರಿ ನಿವೇಶನ ಒತ್ತುವರಿ ಮಾಡಿ ಸೈಟ್ ಮಾಡುತ್ತಾರೆಯೇ? ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಿ ಎಂದು ಪತ್ರ ಬರೆದಿದ್ದಾಗಿ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.