ಪುತ್ತೂರು ಗ್ರಾಪಂ ಉಪ ಚುನಾವಣಾ ಸ್ಪರ್ಧೆಗೆ ಇಳಿದ 'ಪುತ್ತಿಲ ಪರಿವಾರ; ಬಿಜೆಪಿಗೆ ಮತ್ತೊಮ್ಮೆ ಸೆಡ್ಡು?

 ಜು.23ರಂದು ನಡೆಯುವ ಗ್ರಾಮ ಪಂಚಾಯ್ತಿ ಉಪ ಚುನಾವಣೆಗೆ ಪುತ್ತೂರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಪುತ್ತಿಲ ಪರಿವಾರ ಬಿಜೆಪಿಗೆ ಮತ್ತೊಮ್ಮೆ ಸೆಡ್ಡು ಹೊಡೆಯಲು ಹೊರಟಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಜತೆಗಿನ ಮಾತುಕತೆ ಬಳಿಕದ ವಿದ್ಯಮಾನದಲ್ಲಿ ಈ ಬೆಳವಣಿಗೆ ಸಂಭವಿಸಿದೆ.

Puttur Parivar contest against BJP in Puttur Gram by-election at mangaluru rav

ಮಂಗಳೂರು (ಜು.11) :  ಜು.23ರಂದು ನಡೆಯುವ ಗ್ರಾಮ ಪಂಚಾಯ್ತಿ ಉಪ ಚುನಾವಣೆಗೆ ಪುತ್ತೂರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಪುತ್ತಿಲ ಪರಿವಾರ ಬಿಜೆಪಿಗೆ ಮತ್ತೊಮ್ಮೆ ಸೆಡ್ಡು ಹೊಡೆಯಲು ಹೊರಟಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌(BL Santosh) ಜತೆಗಿನ ಮಾತುಕತೆ ಬಳಿಕದ ವಿದ್ಯಮಾನದಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಹಿಂದೂ ಸಂಘಟಕ ಅರುಣ್‌ ಕುಮಾರ್‌ ‘ಪುತ್ತಿಲ ಪರಿವಾರ’(Puthila parivar) ಈಗ ನೇರವಾಗಿ ಗ್ರಾಮ ಪಂಚಾಯ್ತಿ ಉಪಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ತಿರುಗೇಟು ನೀಡಲು ಹೊರಟಿದೆ.

ಸಂಘ ಪರಿವಾರಕ್ಕೆ ಪರ್ಯಾಯವಾಗಿ 'ಪುತ್ತಿಲ ಪರಿವಾರ' ಅಸ್ತಿತ್ವಕ್ಕೆ, ಆರೆಸ್ಸೆಸ್ ವಿರುದ್ಧವೇ ಪುತ್ತಿಲ ಅಚ್ಚರಿಯ ನಡೆ!

ಬಿಜೆಪಿ ವಿರುದ್ಧ ಬಂಡಾಯ ಗುಡುಗಿದ ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಎರಡು ಪಂಚಾಯ್ತಿಗಳ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈಗಾಗಲೇ ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯ್ತಿಗಳ ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಿಡ್ಪಳ್ಳಿಯಲ್ಲಿ ಪುತ್ತಿಲ ಪರಿವಾರದಿಂದ ಚಂದ್ರಶೇಖರ ಪ್ರಭು ಹಾಗೂ ಆರ್ಯಾಪಿನಲ್ಲಿ ಜ್ಯೋತಿಷಿ ಸುಬ್ರಹ್ಮಣ್ಯ ಬಲ್ಯಾಯ ಕಣಕ್ಕೆ ಇಳಿದಿದ್ದಾರೆ. ನಿಡ್ಪಳ್ಳಿಯಲ್ಲಿ 1ನೇ ವಾರ್ಡ್‌ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್‌ ಕೆಲವು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಆರ್ಯಾಪಿನಲ್ಲೂ ಹಾಲಿ ಸದಸ್ಯನ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಪುತ್ತಿಲ ಪರಿವಾರ ಇದೇ ಮೊದಲ ಬಾರಿಗೆ ಸ್ಪರ್ಧಾ ಕಣಕ್ಕೆ ಧುಮುಕುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸುತ್ತಿದ್ದು, ಈ ಬಾರಿ ಪುತ್ತಿಲ ಪರಿವಾರದ ಸ್ಪರ್ಧೆ ಗ್ರಾಮ ಮಟ್ಟದಿಂದಲೇ ಸದ್ದು ಮಾಡುವ ಮುನ್ಸೂಚನೆ ನೀಡಿದೆ. ಅಸೆಂಬ್ಲಿ ಚುನಾವಣೆ ಬಳಿಕ ಈಗ ಗ್ರಾಮ ಪಂಚಾಯ್ತಿ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿ ವಿರುದ್ಧ ತೊಡೆತಟ್ಟಿದೆ.

ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ:

ಪುತ್ತಿಲ ಪರಿವಾರ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇ ತಡ ಪುತ್ತೂರು ಬಿಜೆಪಿಯ ನಗರ ಹಾಗೂ ಗ್ರಾಮಾಂತರ ಮುಖಂಡರ ಗಡಣವೇ ಈಗ ಬಿಜೆಪಿ ಬೆಂಬಲಿತರ ಗೆಲವಿಗೆ ಶ್ರಮಿಸಲು ಮುಂದಾಗಿದೆ. ಈ ಮೂಲಕ ಉಪ ಚುನಾವಣೆಯಲ್ಲೇ ಪುತ್ತಿಲ ಪರಿವಾರಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್‌ ಕುಮಾರ್‌ ಪುತ್ತಿಲರ ಪರಿವಾರವನ್ನು ತಳಮಟ್ಟದಲ್ಲೇ ಹೆಡೆಮುರಿ ಕಟ್ಟಲು, ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲು ಮಾತ್ರವಲ್ಲ ಒಟ್ಟಾಗಿ ಗೆಲವಿನ ತಂತ್ರ ಹೆಣೆಯಲು ಪುತ್ತೂರು ಬಿಜೆಪಿ ತೀರ್ಮಾನಿಸಿದೆ.

ಜಿ.ಪಂ, ತಾ.ಪಂ.ಗೂ ಸ್ಪರ್ಧೆ?:

ಅರುಣ್‌ ಕುಮಾರ್‌ ಪುತ್ತಿಲ ಬಿಕ್ಕಟ್ಟು ಶಮನಗೊಳಿಸದಿದ್ದರೆ ಇದು ಲೋಕಸಭಾ ಚುನಾವಣೆಗೂ ಮುನ್ನ ನಡೆಯಬಹುದಾದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲೂ ಬಿಜೆಪಿಗೆ ದೊಡ್ಡ ಮಟ್ಟಿನ ಹಿನ್ನೆಡೆ ಕಾಣುವ ಸಾಧ್ಯತೆಯನ್ನು ಹೇಳಲಾಗುತ್ತಿದೆ.

ಈಗಾಗಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪುತ್ತೂರು ಭೇಟಿ ವೇಳೆ ಬಿಕ್ಕಟ್ಟು ಶಮನ ಬಗ್ಗೆ ಮಾತನಾಡಿದ್ದಾರೆ. ದೆಹಲಿ ಭೇಟಿ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಳಿಕ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೀಡಿದ ಭರವಸೆ ಇನ್ನೂ ಇತ್ಯರ್ಥವಾಗುವ ಮೊದಲೇ ಉಪ ಚುನಾವಣಾ ಕಣದಲ್ಲಿ ಪುತ್ತಿಲ ಪರಿಹಾರ ತಮ್ಮ ವಿಜಯ ಪತಾಕೆ ಹಾರಿಸುವ ಗುಂಗಿನಲ್ಲಿದೆ. ಇದು ತಳ ಮಟ್ಟದಲ್ಲಿ ಬಿಜೆಪಿ ಸಂಘಟನೆಗೆ ತೊಡರುಗಾಲು ಆಗುವ ಸಂಭವ ಇದ್ದು, ಪುತ್ತಿಲ ಪರಿವಾರ ವರ್ಸಸ್‌ ಬಿಜೆಪಿ ಬೆಂಬಲಿತರ ಹೋರಾಟವಾಗಿ ಮಾರ್ಪಡುವ ಸಾಧ್ಯತೆ ಹೇಳಲಾಗಿದೆ. ಗ್ರಾಮ ಮಟ್ಟದಲ್ಲಿ ಕಾಣಿಸಿದ ಹೋರಾಟ ಮುಂದೆ ಜಿ.ಪಂ, ತಾ.ಪಂ. ಚುನಾವಣೆಗೂ ವಿಸ್ತರಿಸಿಸುವ ಮುನ್ಸೂಚನೆ ನೀಡುತ್ತಿದೆ.

ಪುತ್ತಿಲ ಬಿಕ್ಕಟ್ಟು ಸದ್ಯ ಶಮನ ಸದ್ಯಕ್ಕಿಲ್ಲ?

ಅರುಣ್‌ ಕುಮಾರ್‌ ಪುತ್ತಿಲ(Arun kumar puthila) ಬಿಕ್ಕಟ್ಟನ್ನು ತ್ವರಿತವಾಗಿ ಪರಿಹರಿಸುವ ಇರಾದೆ ಸದ್ಯದ ಮಟ್ಟಿಗೆ ಬಿಜೆಪಿ ಹಾಗೂ ಸಂಘಪರಿವಾರದ ಹಿರಿಯ ನಾಯಕರಲ್ಲಿ ಕಾಣುತ್ತಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರ ನಡೆದದ್ದೇ ಹಾದಿ ಎಂಬಂದಂತಾಗಿದೆ.

ಅರುಣ್‌ ಕುಮಾರ್‌ ಪುತ್ತಿಲರನ್ನು ದೆಹಲಿಗೆ ಕರೆಸಿಕೊಂಡ ಬಿಎಲ್‌ ಸಂತೋಷ್‌, ರಾಜಕೀಯದಲ್ಲಿ ತೀವ್ರ ಕುತೂಹಲ

ದೆಹಲಿಗೆ ಅರುಣ್‌ ಕುಮಾರ್‌ ಪುತ್ತಿಲ ಎರಡು ಬಾರಿ ಎಡತಾಕಿದರೂ ಬಿಕ್ಕಟ್ಟು ಮಾತ್ರ ಶಮನಗೊಂಡಿಲ್ಲ, ತಕ್ಷಣದಲ್ಲಿ ಶಮನಗೊಳ್ಳುವ ಲಕ್ಷಣವೂ ಕಾಣುತ್ತಿಲ್ಲ. ಯಾಕೆಂದರೆ, ಪುತ್ತಿಲ ಬಿಕ್ಕಟ್ಟಿಗಿಂತ ಬಿಜೆಪಿಗೆ ವಿಪಕ್ಷ ನಾಯಕನ ಆಯ್ಕೆ, ಬಳಿಕ ಹೊಸ ರಾಜ್ಯಾಧ್ಯಕ್ಷರ ನೇಮಕ, ನಂತರ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ನೇಮಕ ನಡೆಯಬೇಕಾಗಿದೆ. ಇಷ್ಟೆಲ್ಲ ಹೊಣೆಗಾರಿಕೆಯನ್ನು ಲೋಕಸಭಾ ಚುನಾವಣೆ ಘೋಷಣೆಗೆ ಸಾಕಷ್ಟುಮುಂಚೆಯೇ ನಡೆಸಬೇಕಾಗಿರುವುದರಿಂದ ಪುತ್ತಿಲ ಬಿಕ್ಕಟ್ಟನ್ನು ತರಾತುರಿಯಲ್ಲಿ ಶಮನಗೊಳಿಸುವ ಇರಾದೆ ಇಬ್ಬರಿಗೂ ಇದ್ದಂತಿಲ್ಲ. ಹೀಗಾಗಿ ಪುತ್ತಿಲ ಪರಿವಾರ ಬಿಕ್ಕಟ್ಟು ತನ್ನಿಂತಾನೇ ಬಗೆ ಹರಿಯುವುದಿದ್ದರೆ ಸರಿ, ಇಲ್ಲವೇ ಪುತ್ತಿಲ ಪರಿವಾರ ಒಡೆದು ಹೋದರೂ ಆದೀತು, ಆದರೆ ತುರ್ತಾಗಿ ಪರಿಹರಿಸುವ ಔಚಿತ್ಯ ಕಾಣುತ್ತಿಲ್ಲ ಎಂದು ಹಿರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಇದೇ ಹಿನ್ನೆಲೆಯಲ್ಲಿ ಬಿಕ್ಕಟ್ಟು ನಿವಾರಿಸಲು ಹಿರಿಯರಿಗೆ ಒತ್ತಡ ತಂತ್ರ ಅನುಸರಿಸುವ ಸಲುವಾಗಿ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಕಣಕ್ಕೆ ಇಳಿಯುತ್ತಿದೆ ಎಂದು ಹೇಳಲಾಗಿದೆ. ಈ ಮೂಲಕ ಬಿಕ್ಕಟ್ಟು ಶಮನಗೊಳಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎಂಬ ಸಂದೇಶ ರವಾನಿಸಲು ಪುತ್ತಿಲ ಪರಿವಾರ ಹೊರಟಿದೆ.

Latest Videos
Follow Us:
Download App:
  • android
  • ios