ಬೆಂಗಳೂರು[ಜ.11]: ವಿಧಾನಸೌಧದಲ್ಲಿ ನಗದು ಸಿಕ್ಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಆರೋಪಿ ಮೋಹನ್‌ನ ತಪ್ಪೊಪ್ಪಿಗೆ ಹೇಳಿಕೆಯಿಂದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಅವರ ತಲೆದಂಡ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದ ಸಂಪುಟ ಸೇರ್ಪಡೆಯಾಗಿದ್ದ ಪುಟ್ಟರಂಗಶೆಟ್ಟಿ ಅವರನ್ನು ಸದ್ಯಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಖುದ್ದು ಸಿದ್ದರಾಮಯ್ಯ ಅವರು ಸಮರ್ಥಿಸಿಕೊಳ್ಳುತ್ತಿ ದ್ದಾರೆ. ಆದರೆ, ಅವರ ವಿರುದ್ಧದ ಆರೋಪ ಗಟ್ಟಿಯಾಗುವ ಸಂದರ್ಭ ನಿರ್ಮಾಣವಾದರೆ ಆಗ ಪರಿಸ್ಥಿತಿ ಬದಲಾಗಲಿದೆ. ಲೋಕಸಭಾ ಚುನಾವಣೆ ಸಮೀಪವಿರುವ ಈ ಹಂತದಲ್ಲಿ ಕಳಂಕಕ್ಕೆ ಒಳಗಾದ ಸಚಿವರನ್ನು ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೂ ಕಷ್ಟವಾಗುವ ಹಿನ್ನೆಲೆಯಲ್ಲಿ ಅವರ ತಲೆ ದಂಡಕ್ಕೆ ಪಕ್ಷದಲ್ಲೇ ಕೂಗು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಮೋಹನ್ ತನ್ನ ಬಳಿ ಪತ್ತೆಯಾದ 25.76 ಲಕ್ಷ ರು. ಮೊತ್ತವನ್ನು ಸಚಿವರಿಗೆ ನೀಡಲು ತಂದಿದ್ದೆ ಎಂದು ಪೊಲೀಸರ ಸಮ್ಮುಖ ತಪ್ಪೊಪ್ಪಿಗೆ ನೀಡಿದ್ದಾನೆ ಎನ್ನಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಪೊಲೀಸರು ಸಹಜವಾಗಿಯೇ ಪುಟ್ಟರಂಗಶೆಟ್ಟಿ ಅವರನ್ನು ತನಿಖೆಗೆ ಒಳಪಡಿಸಬೇಕಾಗುತ್ತದೆ.

ಇಂತಹ ಮುಜುಗರದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಬಹುತೇಕ ನಾಯಕರು ಪುಟ್ಟರಂಗಶೆಟ್ಟಿ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿಲ್ಲ. ಸಚಿವರ ಕಚೇರಿ  ಸಿಬ್ಬಂದಿಯೇ ನೇರ ತಪ್ಪೊಪ್ಪಿಗೆ ನೀಡಿದರೆ ಅದು ಸಹಜವಾಗಿ ಸಚಿವರ ಪಾತ್ರದ ಬಗ್ಗೆ ಅನುಮಾನ ಹುಟ್ಟುಹಾಕುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪುಟ್ಟರಂಗಶೆಟ್ಟಿ ಅವರನ್ನು  ಸಮರ್ಥಿಸಿಕೊಳ್ಳುವುದು ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರಿಗೆ ಕಷ್ಟವಾಗಬಹುದು. ಇದಲ್ಲದೆ, ಬಿಜೆಪಿಯು ಈ ವಿಚಾರವನ್ನು ಪ್ರಮುಖವಾಗಿಟ್ಟುಕೊಂಡು ಪ್ರಚಾರ ನಡೆಸಲು ಮುಂದಾಗಿದೆ. ಹೀಗಾಗಿ ಪ್ರಕರಣ ಗಂಭೀರವಾದರೆ ಸಿದ್ದರಾಮಯ್ಯ ಅವರು ಪುಟ್ಟರಂಗಶೆಟ್ಟಿ ಬೆಂಬಲದಿಂದ ಹಿಂದೆ ಸರಿಯುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ಹೇಳುತ್ತವೆ.