ಕೆಇಎ ಪರೀಕ್ಷಾ ಹಗರಣ: ಬ್ಲೂಟೂತ್ ಅಕ್ರಮಕ್ಕೆಂದೇ ರೆಡ್‌ಮಿ, ಒಪ್ಪೋ ಮೊಬೈಲ್‌ಗಳ ಖರೀದಿ..!
ಕಳೆದ ತಿಂಗಳು ಅ.28 ಹಾಗೂ 29 ರಂದು ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಫ್‌ಡಿಎ/ಎಸ್‌ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮದ ತನಿಖೆ ಇದೀಗ ಸಿಐಡಿಗೆ ವಹಿಸಲಾಗಿದೆ. ಈ ಮುಂಚೆ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರು ಆರೋಪಿಗಳ ವಿಚಾರಣೆ ವೇಳೆ ಇಂತಹ ಅಂಶಗಳು ಕಂಡುಬಂದಿದೆ.
ಆನಂದ್ ಎಂ. ಸೌದಿ
ಯಾದಗಿರಿ(ನ.16): ಪರೀಕ್ಷೆಯಲ್ಲಿ ಬ್ಲೂಟೂತ್ ಅಕ್ರಮಕ್ಕೆಂದೇ ರೆಡ್‌ಮೀ ಹಾಗೂ ಒಪ್ಪೋ ಕಂಪನಿಗಳ 24 ಮೊಬೈಲ್‌ಗಳನ್ನು ಖರೀದಿಸಲಾಗಿತ್ತು. ಜೊತೆಗೆ, 2 ಲಕ್ಷ ರು.ಗಳ ಹಣವನ್ನೂ ಆರ್ಡಿಪಿ ತಮಗೆ ನೀಡಿದ್ದ ಎಂದು ಯಾದಗಿರಿಯಲ್ಲಿ ಬಂಧಿತ ಆರೋಪಿ ಅಭ್ಯರ್ಥಿ ಸಿದ್ರಾಮ್ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಕಳೆದ ತಿಂಗಳು ಅ.28 ಹಾಗೂ 29 ರಂದು ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಫ್‌ಡಿಎ/ಎಸ್‌ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮದ ತನಿಖೆ ಇದೀಗ ಸಿಐಡಿಗೆ ವಹಿಸಲಾಗಿದೆ. ಈ ಮುಂಚೆ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರು ಆರೋಪಿಗಳ ವಿಚಾರಣೆ ವೇಳೆ ಇಂತಹ ಅಂಶಗಳು ಕಂಡುಬಂದಿದೆ ಎಂದು "ಕನ್ನಡಪ್ರಭ"ಕ್ಕೆ ಪೊಲೀಸ್ ಮೂಲಗಳು ತಿಳಿಸಿವೆ.
ಎಫ್‌ಡಿಎಗೆ 22 ಲಕ್ಷ, ಎಸ್‌ಡಿಎಗೆ 8 ಲಕ್ಷ: ಕೆಇಎ ಪರೀಕ್ಷೆ ಅಕ್ರಮ ರೇಟ್‌ಕಾರ್ಡ್, 25 ಕೋಟಿ ಸಂಗ್ರಹ?
ಪಿಎಸೈ ಹಾಗೂ ಎಫ್‌ಡಿಎ ಅಕ್ರಮದ ಪ್ರಮುಖ ಆರೋಪಿ ಅಫಜಲ್ಪೂರದ ಆರ್.ಡಿ. ಪಾಟೀಲ್ ಸಂಬಂಧಿಕ ಎನ್ನಲಾದ ಸಿದ್ರಾಮ್ ಒಬ್ಬಾತನೇ 24 ಅಭ್ಯರ್ಥಿಗಳ ಕಲೆಹಾಕಿದ್ದ. ಇದೇ ಕಾರಣಕ್ಕೆ ಈತನಿಗೆ 8 ರೆಡ್‌ಮೀ ಹಾಗೂ 16 ಒಪ್ಪೋ ಕಂಪನಿಗಳ ಮೊಬೈಲ್ ಖರೀದಿಸಿ ನೀಡಿದ್ದ ಆರ್‌ಡಿಪಿ, 2 ಲಕ್ಷ ರು.ಗ ಹಣವನ್ನೂ ನೀಡಿದ್ದ ಎಂದು ಸಿದ್ರಾಮ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆಂದು ಹೇಳಲಾಗುತ್ತಿದೆ.
ಈ ಮೊಬೈಲ್‌ಗಳ ಹಾಗೂ ಬ್ಲೂಟೂತ್ ಡಿವೈಸ್‌ಗಳ ಹಂಚಿಕೆ ವೇಳೆ ಯಾರ ಕಣ್ಣಿಗೂ ಬಾರದಿರಲಿ ಅನ್ನುವ ಕಾರಣಕ್ಕೆ ಅಫಜಲ್ಪೂರದ ಸಮೀಪದ ಕಬ್ಬಿನ ಗದ್ದೆಗಳ ಮರೆಯಲ್ಲಿ ನೀಡಲಾಗುತ್ತಿತ್ತು ಎಂದು ಪೊಲೀಸ್ ವಿಚಾರಣೆಯಲ್ಲಿ ಕಂಡುಬಂದಿದೆ ಎಂದು "ಕನ್ನಡಪ್ರಭ"ಕ್ಕೆ ವಿಶ್ವಾಸಾರ್ಹ ಅಧಿಕಾರಿಯೊಬ್ಬರು ತಿಳಿಸಿದರು.
"ಕನ್ನಡಪ್ರಭ" ಬಯಲಿಗೆಳೆದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣ ತಾರ್ಕಿಕ ಅಂತ್ಯ..!
ಉಲ್ಟಾ ಪುಲ್ಟಾ ಮೊಬೈಲ್ ನಂಬರ್ !
ಅಕ್ರಮದ ವೇಳೆ ಸಿಕ್ಕಿಬಿದ್ದರೆ ಮೊಬೈಲ್ ಸಂಖ್ಯೆ ಸಿಗದಿರಲಿ ಎನ್ನುವ ಕಾರಣಕ್ಕೆ ಮೊದಲೈದು ಸಂಖ್ಯೆಗಳನ್ನು ಕೊನೆಗೆ ಸೇರಿಸಿ, ಮಧ್ಯೆದ ಐದು ಅಂಕಿಗಳಿಂದ ಆರಂಭಿಸಿ ಸೇವ್ ಮಾಡಿಕೊಳ್ಳುತ್ತಿದ್ದರು. ಹೀಗಾದರೆ, ಮೊಬೈಲ್ ಸಂಖ್ಯೆಗಳ ಗೊಂದಲದಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಆರೋಪಿಗಳ ದೂರಾಲೋಚನೆಯಾಗಿತ್ತಂತೆ. ಆದರೆ, ಇದನ್ನು ಅಕ್ರಮಕೋರರ ಇಂತಹ ತಂತ್ರವನ್ನು "ಡಿಕೋಡ್" ಮಾಡಿದ ಖಾಕಿಪಡೆ, ಮತ್ತಷ್ಟೂ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಅ.28ರಂದು ಎಫ್‌ಡಿಎ ಪರೀಕ್ಷೆಯ ವೇಳೆ ಯಾದಗಿರಿಯ ಐದು ಕೇಂದ್ರಗಳಲ್ಲಿ ಬ್ಲೂಟೂತ್ ಅಕ್ರಮ ಪತ್ತೆಯಾಗಿತ್ತು. 16 ಜನರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ಎಲ್ಲ ಕಡೆಗಳಲ್ಲಿ ಈ ಅಕ್ರಮ ವ್ಯಾಪಿಸಿರುವ ಶಂಕೆ ಹಿನ್ನೆಲೆಯಲ್ಲಿ, ಸರ್ಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿದೆ.