ಪುಣ್ಯಕೋಟಿ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ನಿಂತಿದ್ದರಿಂದ ಗೋಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ದಾನಿಗಳ ನೆರವಿನಿಂದ ನಿರ್ವಹಣೆ ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರದಿಂದ ಸಿಎಸ್‌ಆರ್ ನಿಧಿಯಿಂದ ₹2000 ಕೋಟಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಸಾವಯವ ಕೃಷಿ ಪ್ರೋತ್ಸಾಹಕ್ಕೆ ಗೋಶಾಲೆಗಳ ಬೆಂಬಲ ಅಗತ್ಯವೆಂದು ಒತ್ತಾಯಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ 10): ಆಹಾರ, ಆಶ್ರಯವಿಲ್ಲದೆ ನರಳುತ್ತಿರುವ ಗೋವುಗಳನ್ನು ಸಂರಕ್ಷಿಸುವ ಸಲುವಾಗಿ ಹಾಗೂ ಗೋ ಶಾಲೆಗಳಿಗೆ ಸಹಾಯವಾಗುವ ಉದ್ದೇಶದಿಂದ 2023ರಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರ್ಕಾರವು ಪುಣ್ಯಕೋಟಿ ಎಂಬ ಯೋಜನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೆ ತಂದಿದ್ರು. ಈ ಮೂಲಕ ಸಾರ್ವಜನಿಕರು ಗೋವುಗಳನ್ನು ದತ್ತು ಪಡೆದು ಅವುಗಳನ್ನು ಸಲಹುವ ಅವಕಾಶವನ್ನು ನೀಡಲಾಗಿತ್ತು. ಈ ಯೋಜನೆಗೆ ಸರ್ಕಾರವೂ ಕೋಟಿಗಟ್ಟಲೇ ಅನುದಾನವೂ ನೀಡಿತ್ತು. ಆದರೆ ಈಗ ಈ ಯೋಜನೆ ಸಂಪೂರ್ಣ ಹಳ್ಳಹಿಡಿದು ಅನುದಾನ ಬಾರದಂತಾಗಿದೆ.
ಕೇಂದ್ರ ಸರ್ಕಾರದ ಮೊರೆ :
ಸರ್ಕಾರದಿಂದ ಅನುದಾನ ಸಿಗದ ಕಾರಣ ಗೋ ಶಾಲೆಯಲ್ಲಿರುವ ಗೋವುಗಳ ಪರಿಸ್ಥಿತಿಯೂ ಹದಗೆಡುವಂತಾಗಿದ್ದು ಗೋ ಶಾಲೆಗಳನ್ನು ದಾನಿಗಳ ನೆರವಿನಿಂದ ನಡೆಸುವಂತಾಗಿದೆ ಅಲ್ಲದೇ ಗೋಶಾಲೆಗಳನ್ನು ನಡೆಸುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಗೋ ಶಾಲೆಗಳಿಗೆ ರಾಜ್ಯ ಸರ್ಕಾರದ ಅನುದಾನವಿಲ್ಲದೇ ಇರೋದ್ರಿಂದ ಇದೀಗ ಗೋ ಶಾಲೆಗಳನ್ನು ನಡೆಸುತ್ತಿರುವವರು ಕೇಂದ್ರ ಸರ್ಕಾರದ ಮೊರೆ ಹೋಗಲು ಮುಂದಾಗಿದ್ದಾರೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದ್ದು. ಸಿಎಸ್ ಅರ್ ಫಂಡ್ ನಲ್ಲಿ ದೇಶದಲ್ಲಿರುವ ಗೋ ಶಾಲೆಗಳಿಗೆ ಎರಡು ಸಾವಿರ ಕೋಟಿ ಹಣವನ್ನು ಮೀಸಲಿಡುವಂತೆ ಒತ್ತಾಯಿಸುತ್ತಿದ್ದಾರೆ.
ಸಾವಯವ ಕೃಷಿಗೂ ಒತ್ತು :
ಸರ್ಕಾರ ಸಹಾಯ ಮಾಡಿದ್ರೆ ನಾವು ಸಾವಯವ ಗೊಬ್ಬರ ನೀಡ್ತೇವೆ, ರೈತರಿಗೆ ಈ ಗೊಬ್ಬರವನ್ನು ಸಬ್ಸಿಡಿಯಲ್ಲಿ ಮಾರಿದ್ರೆ ಸಾವಯವ ಕೃಷಿಗೂ ಒತ್ತು ನೀಡುವಂತಾಗುತ್ತೇ. ಇಲ್ಲದಿದ್ರೆ ಗೋಶಾಲೆಗಳನ್ನು ನಡೆಸುವುದು ಬಹಳ ಕಷ್ಟ ಕೇಂದ್ರ ಸರ್ಕಾರ ದೊಡ್ಡ ಮನಸ್ಸು ಮಾಡಬೇಕು ಅಂತಿದ್ದಾರೆಒಟ್ಟಾರೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಪುಣ್ಯಕೋಟಿ ಯೋಜನೆ ಹಳ್ಳ ಹಿಡಿದಿದ್ದು ಅನುದಾನ ಕೊಡ್ತಾರೆ ಅನ್ನೋ ಭರವಸೆಯಲ್ಲಿ ವರ್ಷವೇ ಕಳೆದು ಹೋಗಿದೆ, ಈಗ ಗೋಶಾಲೆ ನಡೆಸುವವರು ಕೇಂದ್ರದ ಮೊರೆ ಹೋಗಿದ್ದು ಕೇಂದ್ರ ಸರ್ಕಾರ ಇವರ ಮನವಿಗೆ ಸ್ಪಂದಿಸುತ್ತಾ ಅಂತ ಕಾದು ನೋಡಬೇಕಾಗಿದೆ.


