Asianet Suvarna News Asianet Suvarna News

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ 'ಹೃದಯ ಜ್ಯೋತಿ ಯೋಜನೆ ' ಆರಂಭ: ಹೃದಯಾಘಾತಕ್ಕೆ ಆಗುವುದೇ ಪರಿಹಾರ!

ನಮ್ಮ ಆರೋಗ್ಯ ಇಲಾಖೆಯಿಂದ ನವೆಂಬರ್‌ ತಿಂಗಳಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಆರಂಭಿಸಲಾಗುತ್ತದೆ.

Puneeth Rajkumar Hrudaya Jyoti scheme begins from November 85 Spoke and 10 Hub Hospitals install sat
Author
First Published Oct 31, 2023, 6:49 PM IST

ಬೆಂಗಳೂರು (ಅ.31): ರಾಜ್ಯದಲ್ಲಿ ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನ ಉಳಿಸಬೇಕು. ಜೊತೆಗೆ ಸುವರ್ಣ ಸಮಯ (Golden hour) ಸಕಾಲಕ್ಕೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯಿಂದ ಪುನಿತ್ ರಾಜಕುಮಾರ್ ಅವರ ಹೆಸರಿನಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನ ನವೆಂಬರ್‌ ತಿಂಗಳಲ್ಲಿ ಅನುಷ್ಠಾನಕ್ಕೆ ತರ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯಾಘಾತಕ್ಕೆ ಒಳಗಾದವರಿಗೆ ಸುವರ್ಣ ಸಮಯದಲ್ಲಿ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಇತ್ತಿಚೆಗೆ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗ್ತಿರೋದನ್ನ ನಾವು ನೋಡ್ತಿದ್ದೇವೆ. ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಒಳಗಾಗುವರಲ್ಲಿ ಶೇ.35 ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು. ಇಂಥಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸುವುದು ಆರೋಗ್ಯ ಸಚಿವನಾಗಿ ನನ್ನ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. 

ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಎರಡು ರೀತಿಯಲ್ಲಿ ಜಾರಿಗೆ ತರಲಾಗ್ತಿದೆ. Hub ಅಂಡ್ spoke ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ AED ಸಾಧನಗಳಗಳನ್ನ ಅಳವಡಿಸುವುದು. Hub ಮತ್ತು spoke ಕೇಂದ್ರಗಳ ಮಾದರಿ, ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.  85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನ SPOKE ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ. ಜಯದೇವಾ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 hub ಗಳನ್ನ ರಚಿಸಲಾಗಿದೆ.

ಹಾರ್ಟ್‌ ಅಟ್ಯಾಕ್‌ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್‌

30 ಸಾವಿರ ರೂ. ಮೊತ್ತದ ಇಂಜೆಕ್ಷನ್‌ ಉಚಿತ: ಯಾರಿಗೇ ಎದೆನೋವು ಕಾಣಿಸಿಕೊಂಡ್ರೂ, ಅವರು ನಮ್ಮ SPOKE ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ECG ಮಾಡಲಾಗುತ್ತದೆ. ಜೊತೆಗೆ AI ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ ಅನ್ನೋದನ್ನ ಸ್ಥಳದಲ್ಲಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತದೆ. ಯಾರು ಕ್ರಿಟಿಕಲ್ ಹಂತದಲ್ಲಿದ್ದಾರೆ, ಅವರಿಗೆ SPOKE ಕೇಂದ್ರಗಳಲ್ಲೇ ಅಂದ್ರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ Tenecteplase ಇಂಜೆಕ್ಷನ್ ಕೊಡಲಾಗುತ್ತೆ.. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಒಂದು Tenecteplase ಚುಚ್ಚುಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ  ಚಾರ್ಜ್ ಮಾಡ್ತಿದ್ದಾರೆ. ಆದರೆ, ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅನ್ನ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ. 

ಸ್ಪೋಕ್‌ ಕೇಂದ್ರದಿಂದ ಹಬ್‌ಗೆ ರೋಗಿ ರವಾನೆಗೆ ವಿಶೇಷ ಆಂಬುಲೆನ್ಸ್: ತಾಲೂಕು ಅಥವಾ ಜಿಲ್ಲಾಸ್ಪತ್ರೆಯ Spoke ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ನಾವು ಸೂಪರ್ ಸ್ಪಾಷಾಲಿಟಿ ಆಸ್ಪತ್ರೆಯ Hub ಕೇಂದ್ರಗಳಿಗೆ ಅಂಬ್ಯುಲೆನ್ಸ್ ಸಹಾಯದೊಂದಿಗೆ ಕಳಿಸಿಕೊಡ್ತೇವೆ. ಅಲ್ಲಿ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನ ಕಲ್ಪಿಸಲಾಗುತ್ತೆ. ಆಂಜಿಯೋಗ್ರಾಮ್ ಅಥವಾ ಆ್ಯಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನ ಈ hub ಕೇಂದ್ರಗಳಲ್ಲಿ ಪಡೆಯಬಹುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ Hub ಗಳಲ್ಲೂ ಕೂಡಾ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. APL ಕಾರ್ಡುದಾರರು ನಮ್ಮ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಜಯದೇವಾ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೂರು ಹಬ್ ಗಳ ವ್ಯಾಪ್ತಿಗೆ 45  spoke ಕೇಂದ್ರಗಳನ್ನ ಸಂಪರ್ಕಿಸಲಾಗಿದೆ. ಇವುಗಳಲ್ಲಿ 35 ತಾಲೂಕು ಆಸ್ಪತ್ರೆಗಳು ಮತ್ತು 10 ಜಿಲ್ಲಾಸ್ಪತ್ರೆಗಳು ಸೇರಿವೆ ಎಂದು ಮಾಹಿತಿ ನೀಡಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಸರ್ಕಾರಿ ಶಾಲೆಗೆ ಭೂಮಿ ಕೊಟ್ಟ ಹುಚ್ಚಮ್ಮ ಸೇರಿ 68 ಮಂದಿ ಆಯ್ಕೆ

ನಮ್ಮ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರದಲ್ಲಿ 13 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಒಳಗೊಂಡ 7 hub ಗಳನ್ನ ರಚಿಸಿದ್ದೇವೆ. ಇವುಗಳ ವ್ಯಾಪ್ತಿಗೆ, 40 spoke ಕೇಂದ್ರಗಳನ್ನ ಲಿಂಕ್ ಮಾಡಲಾಗಿದೆ. ಇದರಲ್ಲಿ 34 ತಾಲೂಕು ಮತ್ತು 6 ಜಿಲ್ಲಾಸ್ಪತ್ರೆಗಳು ಸೇರಿವೆ. ಈ

ರಾಜ್ಯದ ಸ್ಪೋಕ್‌ ಮತ್ತು ಹಬ್‌ ಕೇಂದ್ರಗಳ ವಿವರ: 

ದಕ್ಷಿಣ ಕನ್ನಡ ಹಬ್: ಕೆಎಂಸಿ ಮಣಿಪಾಲ್, ಎನೆಪೋಯಾ ಹಾಸ್ಪಿಟಲ್, ಫಾದರ್‌ ಮುಲ್ಲರ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು. 
Spoke ಕೇಂದ್ರಗಳು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಸ್ಪತ್ರೆ, ಸುಳ್ಯ, ಬೆಳ್ತಂಗಡಿ, ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆ. 

ಶಿವಮೊಗ್ಗ ಹಬ್ : ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಸಿಮ್ಸ್‌ (SIMS) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು 
Spoke ಕೇಂದ್ರಗಳು : ಸಾಗರ, ತೀರ್ಥಹಳ್ಳಿ, ಸೊರಬ, ಕಡೂರು, ಕೊಪ್ಪ, ತರಿಕೆರೆ ತಾಲೂಕು ಆಸ್ಪತ್ರೆಗಳು 

ದಾವಣಗೆರೆ ಹಬ್ : ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಸಂಸ್ಥೆ/ ಬಸವೇಶ್ವರ ವೈದ್ಯಕೀಯ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.
Spoke ಕೇಂದ್ರಗಳು : ಹರಿಹರ, ಜಗಳೂರು, ಹಾವೇರಿ, ಶಿಗ್ಗಾವ್, ಚಳ್ಳಕೆರೆ ತಾಲೂಕು ಆಸ್ಪತ್ರೆಗಳು ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆ. 

ಬಳ್ಳಾರಿ ಹಬ್: VIMS ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. 
Spoke ಕೇಂದ್ರಗಳು :  ಸಿರಗುಪ್ಪ, ಕೂಡ್ಲಗಿ, ಹೊಸಪೇಟೆ, ಹೆಚ್.ಬಿ ಹಳ್ಳಿ ತಾಲೂಕು ಆಸ್ಪತ್ರೆಗಳು. 

ಧಾರವಾಡ ಹಬ್: ಎಸ್‌ಡಿಎಂ ನಾರಾಯಣ ಹೃದಯ ಚಿಕಿತ್ಸಾ ಕೇಂದ್ರ/ ಹುಬ್ಬಳ್ಳಿ ಕಿಮ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
Spoke ಕೇಂದ್ರಗಳು :  ಧಾರವಾಡ ಜಿಲ್ಲಾಸ್ಪತ್ರೆ, ಕುಂದಗೋಳ, ಯಲ್ಲಾಪುರ, ಹಳಿಯಾಳ, ನರಗುಂದ, ಶಿರಹಟ್ಟಿ ತಾಲೂಕು ಆಸ್ಪತ್ರೆಗಳು. 

ಬಾಗಲಕೋಟೆ ಹಬ್: ಎಸ್‌. ನಂಜಪ್ಪ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. 
Spoke ಕೇಂದ್ರಗಳು : ಬಾಗಲಕೋಟೆ ಜಿಲ್ಲಾಸ್ಪತ್ರೆ, ಮೂದೋಳ್, ಹುನುಗುಂದ, ಯಲಬುರ್ಗಾ, ಕುಷ್ಟಗಿ ತಾಲೂಕು ಆಸ್ಪತ್ರೆಗಳು. 

ಬೆಳಗಾವಿ ಹಬ್ : ಕೆಎಲ್‌ಇ ಪ್ರಭಾಕರ್‌ ಕೋರೆ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. 
Spoke ಕೇಂದ್ರಗಳು : ಬೈಲಹೊಂಗಲ, ಸವದತ್ತಿ, ರಾಮದುರ್ಗಾ, ಗೋಕಾಕ್, ನಿಪ್ಪಾಣಿ, ಹುಕ್ಕೇರಿ, ಖಾನಾಪುರ ತಾಲೂಕು ಆಸ್ಪತ್ರೆಗಳು. 

ಬೆಂಗಳೂರು ಹಬ್: ಜಯದೇವಾ ಹೃದ್ರೋಗ ಸಂಸ್ಥೆ ಬೆಂಗಳೂರು. 
Spoke ಕೇಂದ್ರಗಳು : ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲಾಸ್ಪತ್ರೆಗಳು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ಮಾಗಡಿ, ತಾಲೂಕು ಆಸ್ಪತ್ರೆಗಳು, ಚಿಂತಾಮಣಿ, ಕೊರಟಗೆರೆ, ಶಿರಾ, ಮಧುಗಿರಿ, ಮಾಲೂರು, ಶ್ರೀನಿವಾಸಪುರ ಸರ್ಕಾರ ಆಸ್ಪತ್ರೆಗಳು. 

ಮೈಸೂರು ಹಬ್: ಜಯದೇವಾ ಆಸ್ಪತ್ರೆ, ಮೈಸೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 
Spoke ಕೇಂದ್ರಗಳು : ಮಂಡ್ಯ, ಹಾಸನ, ಮಡಿಕೆರಿ, ಚಾಮರಾಜನಗರ ಜಿಲ್ಲಾಸ್ಪತ್ರೆಗಳು, ಕೆ.ಆರ್ ನಗರ, ಹುಣಸೂರು, ಪಿರ್ಯಾಪಟ್ಟಣ, ಹೆಚ್.ಡಿ ಕೋಟೆ, ನಂಜನಗೂಡು, ಟಿ. ನರಸಿಪುರಾ, ತಾಲೂಕು ಆಸ್ಪತ್ರೆಗಳು. ಚೆನ್ನರಾಯಪಟ್ಟಣ, ಎಸ್.ಆರ್ ಪಾಟ್ನಾ, ಕೆ.ಆರ್ ಪೇಟೆ, ಪಾಂಡವಪುರ, ಹೊಳೆನರಸಿಪುರ ಸರ್ಕಾರಿ ಆಸ್ಪತ್ರೆಗಳು. 

ಕಲಬುರಗಿ ಹಬ್: ಜಯದೇವಾ ಆಸ್ಪತ್ರೆ, ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. 
Spoke ಕೇಂದ್ರಗಳು : ಬೀದರ್, ಯಾದಗಿರಿ ಜಿಲ್ಲಾಸ್ಪತ್ರೆಗಳು, ಅಳಂದಾ, ಅಫ್ಜಲ್ ಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಸಿಂದಗಿ, ಹುಮನಾಬಾದ್, ಬಾಲ್ಕಿ, ಬಸವಕಲ್ಯಾಣ, ಶೋಲಾಪುರ್, ಶಾಹಾಪುರ, ದೇವದುರ್ಗಾ ತಾಲೂಕು ಆಸ್ಪತ್ರೆಗಳು.

ಬರಗಾಲದಿಂದ 33,770 ಕೋಟಿ ರೂ. ನಷ್ಟವಾಗಿದ್ರೂ, ಪರಿಹಾರ ಕೇಳದೇ 25 ಸಂಸದರು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಸಿಎಂ ಟೀಕೆ

ಒಟ್ಟಾರೆ ರಾಜ್ಯದ 31 ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಹಬ್ಸ್, ಹಾಗೂ 85 ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ spoke ಕೇಂದ್ರಗಳನ್ನ ರೂಪಿಸುವ ಮೂಲಕ, ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಂತ ಒಂದು ಪರಿಣಾಮಕಾರಿ ಚಿಕಿತ್ಸಾ ಕಾರ್ಯಕ್ರಮವನ್ನ ಪುನಿತ್ ರಾಜಕುಮಾರ್ ಹೆಸರಿನಲ್ಲಿ ಜಾರಿಗೆ ತರ್ತಿದ್ದೇವೆ. 

ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಅಳವಡಿಕೆ: ಪುನಿತ್ ರಾಜಕುಮಾರ್ ಹೃದಯಜ್ಯೋತಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ 2 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ (AED - Automated External Defibrillator) ಸಾಧನಗಳನ್ನ ಅಳವಡಿಸಲು ನಿರ್ಧರಿಸಿದ್ದೇವೆ. ಬಸ್ ಸ್ಟಾಂಡ್, ರೈಲ್ಬೇ ಸ್ಟೇಷನ್ಸ್, ಏರ್ಪೋರ್ಟ್ಸ್, ವಿಧಾನ ಸೌಧ, ಕೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಡಿಫಿಬ್ರಿಲೇಟರ್ ಗಳನ್ನ ಅಳವಡಿಸ್ತೇವೆ. ಬೆಂಗಳೂರು ಹೊರತಾಗಿಯೂ ರಾಜ್ಯದ ಪ್ರಮುಖ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನಸಂದಣಿ ಇರುವಂತ ಜಾಗಗಳಲ್ಲಿ AED ಸಾಧನಗಳನ್ನ ಇಡ್ತೇವೆ. 50 AED ಡಿಫಿಬ್ರಿಲೇಟರ್ ಗಳನ್ನ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಯೋಜಿಸಲಾಗಿದೆ. ಒಂದು AED ಸಾಧನ ಖರೀದಿಗೆ 1 ಲಕ್ಷದ 10 ಸಾವಿರದ ವರೆಗೆ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Follow Us:
Download App:
  • android
  • ios