ಬರಗಾಲದಿಂದ 33,770 ಕೋಟಿ ರೂ. ನಷ್ಟವಾಗಿದ್ರೂ, ಪರಿಹಾರ ಕೇಳದೇ 25 ಸಂಸದರು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಸಿಎಂ ಟೀಕೆ
ಕರ್ನಾಟಕದಲ್ಲಿ ಬರಗಾಲದಿಂದ 33,770 ಕೋಟಿ ರೂ, ನಷ್ಟವಾಗಿದೆ. ರಾಜ್ಯದ 25 ಬಿಜೆಪಿ ಸಂಸದರು ಪರಿಹಾರ ಕೊಡಿಸದೇ ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರು (ಅ.31): ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಬರಗಾಲದಿಂದಾಗಿ ಅಂದಾಜು 33,770 ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ 17,901 ಕೋಟಿ ರೂ. ಪರಿಹಾರ ಕೇಳಿದರೂ ಒಂದು ನಯಾಪೈಸೆ ಹಣವನ್ನೂ ಕೊಟ್ಟಿಲ್ಲ. ಡಬಲ್ ಇಂಜಿನ್ ಸರ್ಕಾರದ ಹೆಸರೇಳಿ 25 ಸಂಸದರನ್ನು ಗೆಲ್ಲಿಸಿಕೊಂಡಿರಲ್ಲಾ ಅವರೇನು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಎಂದು ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸಕ್ಕೆ ಹೋಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, 'ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಡಿದರಂತೆ' ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ. ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ. ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರ ಕಳುಹಿಸಿರುವ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳುಹಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆ ಅಕ್ಕಿಯಿಂದ ಹೊಟ್ಟೆ ತುಂಬ್ತಿಲ್ಲ: 10 ಕೆಜಿ ಅಕ್ಕಿ ಕೊಡುವಂತೆ ಸಚಿವರ ಮುಂದೆ ಮಂಡಿಯೂರಿದ ರೈತ
ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನೀವು ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಒತ್ತಾಯಿಸಿ. ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ಎಂದು ಕಿಡಿಕಾರಿದ್ದಾರೆ.
ಮೋದಿ ಕಾಲಿಗೆ ಬಿದ್ದಾದರೂ ಹಣ ಕೊಡಿಸಿ, ಇಲ್ಲ ನನಗೆ ಅಪಾಯಿಂಟ್‌ಮೆಂಟ್ ಕೊಡಿಸಿ: ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟುಕೊಂಡ ಎಫ್‌ಡಿಎ ಪರೀಕ್ಷಾರ್ಥಿಗಳು: ಮೆಟಲ್ ಡಿಟೆಕ್ಟರ್‌ಗೂ ಸಿಗ್ತಿರಲಿಲ್ಲ
ಬಾಯಿ ಮಾತಿನ ಸಾಂತ್ವನದ ಬದಲು ಕೇಂದ್ರದಿಂದ ಪರಿಹಾರ ಕೊಡಿಸಿ: ನೆಲ-ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ ರಾಜ್ಯ ಬಿಜೆಪಿ ನಾಯಕರೇ? ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ - ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.