Asianet Suvarna News Asianet Suvarna News

ಕನ್ನಡಿಗರಿಗೆ ಧನ್ಯವಾದ ತಿಳಿಸಿದ ರಜನಿಕಾಂತ್‌..!

ನಾನು ಅಪ್ಪುವನ್ನು ಮೊದಲು ನೋಡಿದ್ದು 4 ವರ್ಷದ ಮಗುವಾಗಿದ್ದಾಗ. ಆ ಮಗುವಾಗಿಯೇ ಅಪ್ಪು ನನ್ನ ತಲೆಯಲ್ಲಿ ಇಂದಿಗೂ ಉಳಿದುಹೋಗಿದ್ದಾನೆ. ಆ ಮಗುವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ: ರಜನಿಕಾಂತ್‌

Puneeth Rajkumar child of God Says Actor Rajinikanth grg
Author
First Published Nov 2, 2022, 8:01 AM IST

ಬೆಂಗಳೂರು(ನ.02):  ‘ಅಪ್ಪು ದೇವರ ಮಗು. ಅದು ಸ್ವಲ್ಪದಿನ ನಮ್ಮ ಜೊತೆ ಇದ್ದು ಮತ್ತೆ ದೇವರ ಬಳಿಗೆ ಹೋಗಿದೆ. ಅದರ ಆತ್ಮ ನಮ್ಮ ಸುತ್ತಲೂ ಇದೆ. ಆದರೆ, ಆ ಮಗು ಮರೆಯಾದಾಗ ನಾನು ಆರೋಗ್ಯವಾಗಿದ್ದರೂ ನೋಡೋಕೆ ಬರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ನಾನು ಅಪ್ಪುವನ್ನು ಮೊದಲು ನೋಡಿದ್ದು 4 ವರ್ಷದ ಮಗುವಾಗಿದ್ದಾಗ. ಆ ಮಗುವಾಗಿಯೇ ಅಪ್ಪು ನನ್ನ ತಲೆಯಲ್ಲಿ ಇಂದಿಗೂ ಉಳಿದುಹೋಗಿದ್ದಾನೆ. ಆ ಮಗುವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ...’ ಇದು, ಖ್ಯಾತ ತಮಿಳು ನಟ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ‘ಕರ್ನಾಟಕ ರತ್ನ’ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಆಡಿದ ಮನದಾಳದ ಮಾತುಗಳು.

ರಾಜ್ಯ ಸರ್ಕಾರದಿಂದ ಮಂಗಳವಾರ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುರಿವ ಮಳೆಯಲ್ಲೇ ಸ್ವಚ್ಛ ಕನ್ನಡದಲ್ಲೇ ಮಾತುಗಳನ್ನು ಆರಂಭಿಸಿದ ರಜನೀಕಾಂತ್‌, ಮೊದಲು ಸಮಸ್ತ ಕನ್ನಡ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸಿ, ‘ಸಮಸ್ತ ನಾಡಿನ ಜನರು ನೆಮ್ಮದಿಯಾಗಿ ಇರಬೇಕೆಂದು ತಾಯಿ ರಾಜರಾಜೇಶ್ವರಿ, ಅಲ್ಲಾ ಹಾಗೂ ಜೀಸಸ್‌ನಲ್ಲಿ ಬೇಡುತ್ತೇನೆ’ ಎಂದರು.

Puneeth Rajkumar ಕೈಗೆ ಹಣ ಕೊಡುತ್ತಿರಲಿಲ್ಲ; ಸ್ಟ್ರಿಕ್ಟ್‌ ತಾಯಿ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್!

ಅಪ್ಪು ತೀರಿದ್ದ 3 ದಿನ ಬಳಿಕ ಗೊತ್ತಾಯ್ತು:

ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕುರಿತು ಮಾತು ಆರಂಭಿಸಿದ ಅವರು, ‘ಅಪ್ಪು ದೇವರ ಮಗು. ಆ ಮಗು ಮರೆಯಾದಾಗ ನನಗೆ ಆಪರೇಷನ್‌ ಆಗಿ ಆಸ್ಪತ್ರೆಯಲ್ಲಿ ಇಂಟೆನ್ಸಿವ್‌ ಕೇರ್‌ನಲ್ಲಿದ್ದೆ. ಆ ಸಮಯದಲ್ಲಿ ನನಗೆ ಅಪ್ಪು ಮರೆಯಾದ ವಿಷಯ ಹೇಳಬಾರದೆಂದು ಮುಚ್ಚಿಟ್ಟಿದ್ದರು. 3 ದಿನಗಳ ಬಳಿಕ ನನಗೆ ವಿಷಯ ಗೊತ್ತಾಯಿತು. ನನಗೆ ನಂಬಲಾಗಲಿಲ್ಲ. ಬರಲೂ ಆಗಲಿಲ್ಲ’ ಎಂದರು.

ಮನುಷ್ಯತ್ವದ ಸಾಕಾರಮೂರ್ತಿ:

‘ಅಪ್ಪು ಮರೆಯಾದಾಗ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಬಂದಿದ್ಯಾಕೆ? ಅಪ್ಪು ಒಬ್ಬ ನಟ, ನಟ ಸಾರ್ವಭೌಮನ ಮಗ ಎಂದಲ್ಲ. ಅವನ ಒಂದು ಮನುಷ್ಯತ್ವಕ್ಕೆ. ಅವನಲ್ಲಿದ್ದ ಹೃದಯ ಶ್ರೀಮಂತಿಕೆ, ಧಾರಾಳ ದಾನ, ಧರ್ಮದ ಗುಣ. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಕೋಟಿ ಕೋಟಿ ದಾನ ಮಾಡಿ ಪರೋಪಕಾರ ಮಾಡಿದ ಫಲ. ಯಾರೇ ಆಗಲಿ ಒಬ್ಬ ನಟನಾಗಿ ಕ್ಯಾಮರಾದಿಂದ ಜನಗಳ ಮನ ಗೆಲ್ಲಲು ಸಾಧ್ಯವಿಲ್ಲ. ನಿಜ ಜೀವನದಲ್ಲಿ ಹೇಗೆ ಬಾಳುತ್ತಾನೆ.

ತನ್ನ ಚಿತ್ರಗಳಲ್ಲಿ ಯಾವ ಸಂದೇಶ ನೀಡುತ್ತಾನೆ. ಎಷ್ಟು ಪ್ರೀತಿ ಹಂಚುತ್ತಾನೆ ಎಂಬುದು ಮುಖ್ಯ. ಇದನ್ನು ತಮಿಳುನಾಡಲ್ಲಿ ಎಂಜಿಆರ್‌, ಶಿವಾಜಿ ಗಣೇಶನ್‌, ಆಂಧ್ರಪ್ರದೇಶದಲ್ಲಿ ಎನ್‌ಟಿಆರ್‌, ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್‌ ಮಾಡಿದರು. ಅದನ್ನೇ ಅಪ್ಪು ಕೂಡ ತಮ್ಮ ಜೀವನದಲ್ಲಿ ಹಾಗೂ ಕೇವಲ 21 ವರ್ಷದಲ್ಲಿ ಮಾಡಿದ 35 ಉತ್ತಮ ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅಮರವಾಗಿ ಹೋಗಿದ್ದಾನೆ. ಅಂತಹವನನ್ನು ಕಳೆದುಕೊಂಡು ಅಶ್ವಿನಿ ಆ ತಾಯಿ ಹೇಗೆ ದುಃಖ ತಡೆಯುತ್ತಿದ್ದಾರೋ ಗೊತ್ತಿಲ್ಲ. ದೇವರು ಅವರಿಗೆ ಅಭಯ ನೀಡಲಿ’ ಎಂದರು.

ಕ್ಯಾಮರಾದಲ್ಲಿ ಸೆರೆಯಾದ 'ಕರ್ನಾಟಕ ರತ್ನ' ಪ್ರಶಸ್ತಿ ಸಮಾರಂಭದ ಅಪೂರ್ವ ಕ್ಷಣಗಳಿವು

ಚಿಕ್ಕಮಗು ಸ್ವಾಮಿಯೇ ಶರಣಂ ಅಂತು:

‘ನಾನು ಪುನೀತ್‌ ರಾಜ್‌ಕುಮಾರ್‌ನನ್ನು ಮೊದಲು ನೋಡಿದ್ದು 1979ನಲ್ಲಿ ಮದರಾಸ್‌ನಲ್ಲಿ. ಪ್ರತೀ ವರ್ಷ ಶಬರಿಮಲೆಗೆ 48 ಕಿ.ಮೀ. ಕಾಲ್ನಡಿಗೆ ಮಾಡುತ್ತಾರೆ. ಆ ಯಾತ್ರೆಯಲ್ಲಿ ಡಾ.ರಾಜ್‌ಕುಮಾರ್‌ ಅವರು ಕೂಡ ಬರುತ್ತಿದ್ದರು. ನಾನು ಕೂಡ ಹೊಗುತ್ತಿದ್ದೆ. ಇರುಮುಡಿ ಕಟ್ಟಿತುಪ್ಪ ಹಾಕುವುದು ಸೇರಿ ಎಲ್ಲ ಕಾರ್ಯಗಳು ಮುಗಿದಾಗ ಸ್ವಾಮಿಯೇ ಅಂದಾಗ ಶರಣಮಯ್ಯಪ್ಪ ಎಂದು ವೀರಮಣಿ ಎಂದು ದೊಡ್ಡ ಗಾಯಕರು ಪ್ರತಿ ಬಾರಿ ಹೇಳುತ್ತಿದ್ದರು.’ ‘ಆದರೆ, 1979ರಲ್ಲಿ ಒಂದು ಚಿಕ್ಕಮಗು ಸ್ವಾಮಿಯೇ ಶರಣಮಯ್ಯಪ್ಪ ಎಂದು ಕೂಗುವ ಶಬ್ದ ಬರುತ್ತದೆ. ಆ ಸದ್ದು ಒಂದು ರೀತಿ ಝೇಂಕಾರದಂತಿತ್ತು. ಅದು ಯಾವುದೆಂದು ನೋಡಿದರೆ 4 ವರ್ಷದ ಚಿಕ್ಕ ಮಗು ರಾಜ್‌ಕುಮಾರ್‌ ಮಡಿಲಲ್ಲಿ ಕುಳಿತಿತ್ತು. ಅದೇ ಪುನೀತ್‌ ರಾಜ್‌ಕುಮಾರ್‌. ಚಂದ್ರನಂತಹ ಕಳೆ, ನಕ್ಷತ್ರದಂತಹ ಕಣ್ಣುಗಳು, ಕೃಷ್ಣನಂತೆ ಮಮತೆಯ ನಗು ಆ ಮಗುವಿನಲ್ಲಿತ್ತು. ಯಾರೇ ಕರೆದರು ಹೋಗುತ್ತಿತ್ತು. ಅಣ್ಣಾವ್ರು ತಮ್ಮ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡೇ 48 ಕಿ.ಮೀ. ನಡೆದುಕೊಂಡು ಹೊಗುತ್ತಿದ್ದರು’ ಎಂದು ಸ್ಮರಿಸಿದರು.

‘ಇದೇ ವೇದಿಕೆಯಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ‘ಕರ್ನಾಟಕ ರತ್ನ’ ಶ್ರೇಷ್ಠ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿತ್ತು. ಆಗಲೂ ಮಳೆ ಬಂದಿತ್ತು ಎಂದು ಕೇಳಿಪಟ್ಟೆ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ, ರಾಷ್ಟ್ರಕವಿ ಕುವೆಂಪು, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿ ಅಂತಹ ಮಹನೀಯರಿಗೆ ನೀಡಲಾಗಿರುವ ಕರ್ನಾಟಕ ರತ್ನ ಪ್ರಶಸ್ತಿ ಈಗ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಲ್ಲುತ್ತಿದೆ. ಇದಕ್ಕಾಗಿ ಕನ್ನಡ ನಾಡಿನ ಸಮಸ್ತ ಜನತೆಗೆ ಹಾಗೂ ಆ ಜನಗಳ ಮೂಲಕ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಬಯಸುತ್ತೇನೆ’ ಎಂದರು. ಇದೇ ವೇಳೆ ನೆರೆದಿದ್ದ ತಮಿಳು ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದರು.
 

Follow Us:
Download App:
  • android
  • ios