ತಂದೆ-ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಅರುಣ್ ಬಡಿಗೇರ್
ಅರುಣ್ ಬಡಿಗೇರ್ ಅವರು ತಾಯಿಯನ್ನು ಕಳೆದುಕೊಂಡ ಮೂರೇ ದಿನದಲ್ಲಿ ತಂದೆಯನ್ನೂ ಸಹ ಕಳೆದುಕೊಂಡಿದ್ದಾರೆ. ಇವರ ಅಗಲಿಕೆಗ ಅರುಣ್ ಬಡಿಗೇರ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ
ಬೆಂಗಳೂರು, (ಮೇ.01): ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ಅವರ ತಂದೆ ಮತ್ತು ತಾಯಿ ಇಬ್ಬರು ಕೋವಿಡ್ ಸೋಂಕಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಮೂರು ದಿನಗಳ ಅಂತರದಲ್ಲಿ ಇಬ್ಬರೂ ಅಸುನೀಗಿದ್ದಾರೆ.
ತಾಯಿ ಕಸ್ತೂರಮ್ಮ ಬಡಿಗೇರ ಅವರು ಮೂರು ದಿನಗಳ ಹಿಂದೆ ಕೊರೋನಾಗೆ ಬಲಿಯಾಗಿದ್ದರು. ಇದೀಗ ಅವರ ತಂದೆ 68 ವರ್ಷದ ಚಂದ್ರಶೇಖರ ಬಡಿಗೇರ ಅವರು ಶುಕ್ರವಾರ ಕೊರೋನಾಗೆ ಬಲಿಯಾಗಿದ್ದಾರೆ.
ಸರ್ದಾನ ಬೆನ್ನಲ್ಲೇ ಮತ್ತೊಂದು ಆಘಾತ; TV ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿ!
ಮೂರು ದಿನದಲ್ಲಿಯೇ ಜನ್ಮಕೊಟ್ಟ ತಂದೆ-ತಾಯಿಯನ್ನು ಕಳೆದುಕೊಂಡ ಅರುಣ್ ಬಡಿಗೇರ್ ಅವರಿಗೆ ಒಂದರ ಮೇಲೊಂದರಂತೆ ಬರಸಿಡಿಲು ಬಡಿದಂತಾಗಿದೆ.
ಇನ್ನು ನಾಳೆ (ಮೇ 2) ಒಡಹುಟ್ಟಿದವ 37ನೇ ವರ್ಷದ ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅರುಣ್ ಬಡಿಗೇರ್ ಅವರು ಜನ್ಮಕೊಟ್ಟು ಬಿಟ್ಟುಹೋದವರ ಬಗ್ಗೆ ಎಮೋಷನಲ್ ಆಗಿ ಬರೆದುಕೊಂಡಿದ್ದಾರೆ.
ಭಾವಪೂರ್ಣ ಶ್ರದ್ಧಾಂಜಲಿ
(ಅಪ್ಪನ ಫೋಟೋ).
ಶ್ರೀ ಚಂದ್ರಶೇಖರ ಶಿ.ಬಡಿಗೇರ
ಮರಣ - 30-04-2021
(ಅಮ್ಮನ ಫೋಟೋ)
ಶ್ರೀಮತಿ ಕಸ್ತೂರಿ ಚಂ.ಬಡಿಗೇರ
ಮರಣ -27-04-2021
ಪ್ರೀತಿಯ ಅಪ್ಪ ಅಮ್ಮ. ನಿಮ್ಮನ್ನ ಕಳೆದುಕೊಂಡು ನಾವೆಲ್ಲ ಅನಾಥರಾಗಿದ್ದೇವೆ. ಇವತ್ತು (ಮೇ 2) ನಿಮ್ಮ 37ನೇ ವರ್ಷದ ಮದುವೆ ವಾರ್ಷಿಕೋತ್ಸವ. 37 ವರ್ಷದಿಂದಲೂ ಅನೋನ್ಯವಾಗಿ ದಾಂಪತ್ಯ ಜೀವನ ನಡೆಸಿದ ನೀವು, ಈ ಲೋಕ ಬಿಟ್ಟು ಹೋಗುವಾಗಲೂ ಜೊತೆಯಾಗಿಯೇ ಹೋಗಿದ್ದೀರಾ. ನಿಮ್ಮ ಅಗಲಿಕೆಯನ್ನ ಅದ್ಹೇಗೆ ತಡೆದುಕೊಳ್ತೀವೋ ಗೊತ್ತಿಲ್ಲ. ನೀವು ತೋರಿಸಿದ ದಾರಿಯನ್ನ ಎಂದಿಗೂ ಮರೆಯಲ್ಲ.
ಸರಿಯಾದ ದಾರಿಯಲ್ಲಿ ನಮ್ಮನ್ನಷ್ಟೇ ನಡೆಸದೆ, ಕೆ ಇ ಬೋರ್ಡ್ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನೂ ನಿಮ್ಮ ೪ ದಶಕಗಳ ಶಿಕ್ಷಕ ವೃತ್ತಿಯಲ್ಲಿ ಸರಿ ದಾರಿಯಲ್ಲಿ ನೀವಿಬ್ಬರೂ ನಡೆಸಿದ್ದೀರಿ. ಎಲ್ಲರಿಗೂ ನೀವು ತೋರಿಸುತ್ತಿದ್ದ ಪ್ರೀತಿ, ವಾತ್ಸಲ್ಯದ ಜೊತೆಗೆ ಅತಿಥಿ ದೇವೋ ಭವ ಅಂತ ಮನೆಗೆ ಬಂದವರಿಗೆಲ್ಲ ಹೊಟ್ಟೆ ತುಂಬ ಊಟ ಬಡಿಸುವ ನಿಮ್ಮ ಗುಣ, ಸಹನಾ ಶಕ್ತಿ, ಧೈರ್ಯ ತುಂಬುವ ರೀತಿ ಎಂದೂ ಮರೆಯಲ್ಲ.
ಯಾರು ಏನೇ ಅಂದ್ರು ಅವರಿಗೆ ಒಳ್ಳೆಯದಾಗಲಿ, ಚೆನ್ನಾಗಿರಿ ಅಂತಾ ಹೇಳುವ ನಿಮ್ಮ ಮನಸ್ಸು ನಮ್ಮದಾಗಲಿ. ನೀವು ನಮ್ಮನ್ನ ಅಗಲಿ ನಮಗೆ ತುಂಬಲಾರದ ನಷ್ಟವಾಗಿದೆ. ನೀವು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸದಾ ನಡೆಯುತ್ತೇವೆ. ನಿಮ್ಮ ಆಸೆಯಂತೆ ಎಲ್ಲವೂ ನಡೆಯುತ್ತೆ ಅಂತಾ ಹೇಳುತ್ತಾ ಶ್ರೀ ಶಿರಸಂಗಿ ಕಾಳಿಕಾ ಮಾತೆಯು ತಮ್ಮ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ದುಃಖತಪ್ತರು -
ಮಕ್ಕಳಾದ - ಅರುಣ್ ಚಂ.ಬಡಿಗೇರ, ಕಿರಣ, ರಶ್ಮಿ
ಸೊಸೆಯರಾದ - ಸಂಗೀತಾ, ದೀಪಿಕಾ
ಮೊಮ್ಮಕ್ಕಳಾದ - ಆರುಷಿ, ಆರಾಧ್ಯ
ಹಾಗೂ ಅಜ್ಜ ಅಜ್ಜಿ, ಅಪ್ಪ ಅಮ್ಮನ ಸಹೋದರರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗದವರು, ಹಾಗೂ ಅಪಾರ ವಿದ್ಯಾರ್ಥಿ ವೃಂದ, ಶಿಕ್ಷಕ ವೃಂದ.