- ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐಗಳ ನೇಮಕಾತಿ ಪರೀಕ್ಷೆ- ಅಕ್ರಮ ಕುರಿತಾದ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ- ಆಡಿಯೋ ಬೆಳಕಿಗೆ ಬಂದ ಬಗ್ಗೆ ಕನ್ನಡಪ್ರಭ ನಿನ್ನೆಯೇ ವರದಿ ಮಾಡಿತ್ತು.
ಕಲಬುರಗಿ(ಏ.24): ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆಸಲು ಸಿದ್ಧತೆ ನಡೆದಿತ್ತೆನ್ನುವುದಕ್ಕೆ ಸಾಕ್ಷಿ ಎಂದೇ ಹೇಳಲಾದ ಆಡಿಯೋವೊಂದನ್ನು ಶನಿವಾರ ಚಿತ್ತಾಪುರ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ. ಜತೆಗೆ ಇಡೀ ಹಗರಣದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ತನಿಖೆ ಮುಗಿಯುವವರೆಗೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅವರನ್ನು ವರ್ಗಾವಣೆ ಮಾಡಬೇಕು ಎಂದೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ನಡೆದಿರುವ 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ. ಆದರೆ, ಈ ಪರೀಕ್ಷೆಯಲ್ಲೂ ಅಕ್ರಮಕ್ಕೆ ಯೋಜನೆ ನಡೆದಿತ್ತು ಎಂಬುದಕ್ಕೆ ಪುಷ್ಟಿನೀಡುವ ಆಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತು ‘ಕನ್ನಡಪ್ರಭ’ ವಿಶೇಷ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆಯವರು ಮಾಧ್ಯಮಗಳ ಮುಂದೆ ಆ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಪಿಎಸ್ಐ ಹುದ್ದೆಗೆ ಎಬಿವಿಪಿ, ಶ್ರೀರಾಮ ಸೇನೆ ಕಾರ್ಯಕರ್ತರ ನೇಮಕಕ್ಕೆ ಪ್ಲಾನ್!
ಆಡಿಯೋದಲ್ಲಿ ದಾಖಲಾಗಿರುವ ಸಂಭಾಷಣೆಯನ್ನು ಗಮನಿಸಿದರೆ ಇಡೀ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲೇ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ವಿಧಿವಿಜ್ಞಾನ ತಂಡದಿಂದ ಆಡಿಯೋದ ಸತ್ಯಾಸತ್ಯತೆ ಗುರುತಿಸುವ ಕೆಲಸವಾಗಬೇಕು, ಇಡೀ ಹಗರಣದಲ್ಲಿ ಯಾವುದೇ ಪಕ್ಷದವರು ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಿಂಗ್‌ಪಿನ್‌ಗಳು ಹೊರಗಿದ್ದಾರೆ: 545 ಪಿಎಸ್‌ಐ ಹುದ್ದೆಗಳಿಗೆ ಒಟ್ಟು 75,000 ಮಂದಿ ಪರೀಕ್ಷೆ ಬರೆದಿದ್ದರು. ಈ ಎಲ್ಲ ಅಭ್ಯರ್ಥಿಗಳ ಭವಿಷ್ಯಕ್ಕೆ ಕಂಟಕ ಎದುರಾಗಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಜೇಶ್ ಹಾಗರಗಿ, ಮಹಾಂತೇಶ ಪಾಟೀಲ್ ಹಾಗೂ ಇತರ 13 ಮಂದಿಯನ್ನು ಬಂಧಿಸಲಾಗಿದೆ. ಆದರೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧಿಸದಿರುವುದನ್ನು ಗಮನಿಸಿದರೆ ಪ್ರಮುಖ ಕಿಂಗ್‌ಪಿನ್‌ಗಳು ಇನ್ನೂ ಹೊರಗಡೆ ಇದ್ದಾರೆ. ದಿವ್ಯಾ ಹಾಗರಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದ ಮೇಲೆ ಯಾರದ್ದೋ ಸಂಪರ್ಕದಲ್ಲಿದ್ದಾರೆ ಎಂದರ್ಥವಲ್ಲವೇ? ಇದು ಅಧಿಕಾರಿಗಳಿಗೆ ಹಾಗೂ ಗುಪ್ತಚರ ಇಲಾಖೆಗೆ ತಿಳಿದಿಲ್ಲವೇ? ಇದೆಲ್ಲ ಗಮನಿಸಿದರೆ ತನಿಖಾಧಿಕಾರಿಗಳ ಮೇಲೆ ಒತ್ತಡ ಬರಬಹುದು ಎಂದು ಖರ್ಗೆ ಅನುಮಾನ ವ್ಯಕ್ತಪಡಿಸಿದರು.
ಸರ್ಕಾರದ ಮತ್ತೆರಡು ವಿಕೆಟ್ ಪತನ ಖಚಿತ: ಪ್ರಿಯಾಂಕ್ ಖರ್ಗೆ ಬಾಂಬ್
ಆಡಿಯೋ ಬಗ್ಗೆ ತನಿಖೆ
ಆಡಿಯೋವನ್ನು ನಾನು ಕೇಳಿಲ್ಲ. ಆದರೆ, ಆಡಿಯೋದಲ್ಲಿ ಯಾರು ಮಾತನಾಡಿರುವುದು, ಇಬ್ಬರ ಅರ್ಹತೆ ಏನು? ಎಲ್ಲದರ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ. ಪ್ರಕರಣದಲ್ಲಿ ಯಾರಿದ್ದರೂ ಬಿಡುವುದಿಲ್ಲ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಈಗ ಯಾಕೆ ಬಿಡುಗಡೆ?
ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದು ತಿಂಗಳ ಬಳಿಕ ಆಡಿಯೋ ಬಹಿರಂಗವಾಗಿದೆ. ಇದುವರೆಗೆ ಯಾಕೆ ಕಾಂಗ್ರೆಸ್ ನಾಯಕರು ಆಡಿಯೋ ಬಿಡುಗಡೆ ಮಾಡಿರಲಿಲ್ಲ. ಇದರ ಹಿಂದಿನ ಉದ್ದೇಶವೇನು?
- ಆರಗ ಜ್ಞಾನೇಂದ್ರ, ಗೃಹ ಸಚಿವ
ಆಡಿಯೋದಲ್ಲೇನಿದೆ?
ವ್ಯಕ್ತಿ-1 : ನಮಸ್ಕಾರ್ರೀ ಸರ...
ವ್ಯಕ್ತಿ-2 : ನಮಸ್ಕಾರ್ ಪಿಎಸೈ ಸಾಬ್ರಿಗೆ..
ವ್ಯಕ್ತಿ-1 : ಎಚ್ಕೆದವರು ಕೋರ್ಟಿಗೆ ಹೋಗಿದ್ದಾರಂತೆ?
ವ್ಯಕ್ತಿ-2 : ವರ್ಷಾ ಇದ್ದುದ್ದೇ, ಅದೇನೂ ಆಗೋಲ್ಲ.
ವ್ಯಕ್ತಿ-1 : 2014ರ ಕೆಎಎಸ್‌ನಲ್ಲಿ ಆದಂತೆ ಮತ್ತೇನಾದರೂ...
ವ್ಯಕ್ತಿ-2 : ಏನೂ ಆಗೋಲ್ಲ, ಇಲ್ಲಿ ಎಲ್ಲಾ ದೊಡ್ಡವರೇ ಶಾಮೀಲಾಗಿದ್ದಾರೆ. ಗೌಡ್ರೆ, ನಮ್ಮವರೂ ಒಬ್ರಿರಿದ್ದಾರೆ, ದುಡ್ಡು ಸಾಕಷ್ಟಿದೆ.
ವ್ಯಕ್ತಿ-1 : ಈ ಸಲ ಆಗೋಲ್ಲ, 402ಗೆ ಹಾಕಿ.. ಬೇಗ ಅಪ್ಲಿಕೇಶನ್ ನಂಬರ್ ವಾಟ್ಸಾಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರಿಂದ ಮಾಡಲಿ. ಸೆಂಟರ್ ಹಾಕಿಸಿಕೊಂಡು ಬರಬೇಕು.
ವ್ಯಕ್ತಿ-2 : ಮುಂದಿನ ಪ್ರೋಸೀಜರ್ ಹೇಳ್ತೇನೆ, ಅಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರಿನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ.
ವ್ಯಕ್ತಿ-1 : ಆಯ್ತು..
