PSI Recruitment Scam ಸಿಸಿಟೀವಿ ಆಫ್ ಮಾಡಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ!
- ಕಲಬುರಗಿ ಪರೀಕ್ಷಾ ಕೇಂದ್ರಕ್ಕೆ ಸಿಐಡಿ ದಾಳಿ
- ಅರ್ಧತಾಸು ಸಿಸಿ ಕ್ಯಾಮೆರಾ ಆಫ್ ಮಾಡಿದ್ದ ಸಂಗತಿ ಬೆಳಕಿಗೆ
- ಕ್ಯಾಮೆರಾ ಆಫ್ ಆದಾಗ ಒಎಂಆರ್ ಶೀಟ್‌ನಲ್ಲಿ ಸರಿ ಉತ್ತರ ಭರ್ತಿ!
ಕಲಬುರಗಿ(ಏ.19): 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಬಗೆದಷ್ಟೂತೆರೆದುಕೊಳ್ಳುತ್ತಿದೆ. ಪಿಎಸ್‌ಐ ಪರೀಕ್ಷೆ ನಡೆದ ಕಲಬುರಗಿ ನಗರದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸಿಸಿ ಕ್ಯಾಮೆರಾವನ್ನು ಅರ್ಧ ಗಂಟೆ ಸ್ಥಗಿತಗೊಳಿಸಿ (ಆಫ್ ಮಾಡಿ) ಪರೀಕ್ಷಾ ಅಕ್ರಮ ಎಸಗಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
2021ರ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪಿಎಸ್‌ಐ ಆಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು ಅಕ್ರಮ ಎಸಗಿರುವುದನ್ನು ‘ಕನ್ನಡಪ್ರಭ’ ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಈ ನಡುವೆ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಸೋಮವಾರ ಜ್ಞಾನ ಜ್ಯೋತಿ ಶಾಲೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಶಾಲೆಯ ಕಂಪ್ಯೂಟರ್, ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ಜಪ್ತಿ ಮಾಡಿದೆ. ಆಗ, ಪಿಎಸ್‌ಐ ಪರೀಕ್ಷೆ ನಡೆದ ಬಳಿಕ ಅಕ್ರಮ ಎಸಗುವ ಉದ್ದೇಶದಿಂದಲೇ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದ ವಿಷಯ ಬಹಿರಂಗವಾಗಿದೆ. ಈ ಮೂಲಕ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಮತ್ತಷ್ಟುಪುಷ್ಟಿಸಿಕ್ಕಂತಾಗಿದೆ. ಅಲ್ಲದೆ ಪ್ರಕರಣದ ಪ್ರಮುಖ ಆರೋಪಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಬಿಜೆಪಿ ಪ್ರಭಾವಿ ನಾಯಕಿ ದಿವ್ಯಾ ಹಾಗರಗಿ ಅವರಿಗಾಗಿ ಹುಡುಕಾಟ ಮುಂದುವರಿದಿದೆ. ದಿವ್ಯಾ, ಶಾಲೆಯ ಪ್ರಾಂಶುಪಾಲ ಮತ್ತು ಇಬ್ಬರು ಶಿಕ್ಷಕರು ತಲೆಮರೆಸಿಕೊಂಡಿದ್ದು, ಅವರ ಬಂಧನದ ಬಳಿಕ ಮತ್ತಷ್ಟುಅಕ್ರಮದ ಮಾದರಿ ಹೊರಬರುವ ಲಕ್ಷಣಗಳು ದಟ್ಟವಾಗಿವೆ.
PSI Recruitment Scam: ದಿವ್ಯಾ ಹಾಗರಗಿ ಪತಿ ಅರೆಸ್ಟ್: ತನಿಖೆ ಇನ್ನಷ್ಟು ಚುರುಕು
ಸಿಸಿ ಕ್ಯಾಮೆರಾ ಆಫ್:
ಕೆಲವು ಪಿಎಸ್‌ಐ ಆಕಾಂಕ್ಷಿಗಳಿಂದ ದಿವ್ಯಾ ಮತ್ತು ತಂಡ ಲಕ್ಷಾಂತರ ರುಪಾಯಿ ಹಣ ಪಡೆದಿತ್ತು. ಬಳಿಕ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜ್ಯಾದ್ಯಂತ 2021ರ ಅಕ್ಟೋಬರ್ 3ರಂದು ಪಿಎಸ್‌ಐ ಪರೀಕ್ಷೆ ನಡೆದಿತ್ತು. ಈ ವೇಳೆ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗುವ ಉದ್ದೇಶದಿಂದಲೇ ಶಾಲೆಯ ಪ್ರಾಂಶುಪಾಲ ಕಾಶಿನಾಥ್, ಪರೀಕ್ಷೆ ಮುಗಿದ ನಂತರ ಅರ್ಧ ಗಂಟೆ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಸಿ ಕ್ಯಾಮೆರಾ ಆಫ್ ಮಾಡಿಸಿ ಬಳಿಕ ಪರೀಕ್ಷಾರ್ಥಿಗಳ ಒಎಂಆರ್ ಶೀಟ್‌ಗಳಲ್ಲಿ ಸರಿ ಉತ್ತರವನ್ನು ಮಾರ್ಕ್ ಮಾಡಲಾಗಿದೆ ಎನ್ನಲಾಗಿದೆ. ಬಾಕಿ ಸಾಕ್ಷ್ಯಾಧಾರಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಇನ್ನೂ ವೀಕ್ಷಿಸಬೇಕಿದೆ.
ಪರೀಕ್ಷಾ ಕೇಂದ್ರದಲ್ಲೇ ಇದ್ದರೆ ದಿವ್ಯಾ?:
ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿರುವ ನಾಲ್ವರು ಅಭ್ಯರ್ಥಿಗಳು ಮತ್ತು ಪರೀಕ್ಷಾ ಮೇಲ್ವಿಚಾರಕರೆಂದು ಕರ್ತವ್ಯ ಮಾಡಿದ್ದ ಜ್ಞಾನಜ್ಯೋತಿ ಶಾಲೆಯ ಮೂವರು ಶಿಕ್ಷಕಿಯರನ್ನು ಈಗಾಗಲೇ ಸಿಐಡಿ ಬಂಧಿಸಿದೆ. ಜ್ಞಾನಜ್ಯೋತಿ ಶಾಲೆಗೆ ಸೇರಿದ ಇನ್ನೂ ಹಲವರ ಬಂಧನ ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ, ಇನ್ನಿಬ್ಬರು ಶಿಕ್ಷಕರು ನಾಪತ್ತೆಯಾಗಿರುವುದು ಅಕ್ರಮದ ಶಂಕೆಯನ್ನು ಇನ್ನಷ್ಟುಹೆಚ್ಚಿಸಿದೆ.
PSI ನೇಮಕಾತಿ ಹಗರಣದ ಸಮಗ್ರ, ನಿಷ್ಪಕ್ಷಪಾತ ತನಿಖೆಗೆ CID ಗೆ ಆದೇಶ: ಸಿಎಂ ಬೊಮ್ಮಾಯಿ
ಪಿಎಸ್‌ಐ ಪರೀಕ್ಷೆ ನಡೆದ ಹೊತ್ತಲ್ಲಿ ಸದರಿ ಪರೀಕ್ಷಾ ಕೇಂದ್ರದಲ್ಲಿ ದಿವ್ಯಾ ಹಾಗರಗಿ ಇದ್ದರು ಎಂದು ಗೊತ್ತಾಗಿದೆ. ಈ ಸಂಗತಿ ಖಚಿತವಾಗಬೇಕಾದರೆ ಸಿಸಿಟೀವಿ ದಾಖಲೆಗಳು ಬೇಕು. ಆದರೆ ಶಾಲೆಯಲ್ಲಿರುವ ಸಿಸಿಟೀವಿಯನ್ನು ಆಫ್ ಮಾಡಿಸಲಾಗಿದೆ. ಹೀಗಾಗಿ ಪ್ರಕರಣದಲ್ಲಿ ಸಾಕ್ಷ್ಯ ನಾಶ ವ್ಯವಸ್ಥಿತವಾಗಿ ಮಾಡಲಾಗಿದೆ. ಇದೇ ಕಾರಣಕ್ಕಾಗಿಯೇ ಸಿಐಡಿ ಶಾಲೆಯ ಒಡತಿ ದಿವ್ಯಾ ಮನೆ ಶೋಧ ನಡೆಸಿದ್ದು, ಅಲ್ಲಿ ಲಭ್ಯ ದಾಖಲೆಗಳನ್ನೆಲ್ಲ ಕಲೆ ಹಾಕಿದೆ.
ಎಲ್ಲವೂ ದಿವ್ಯಾ ಪ್ಲಾನ್‌ನಂತೆಯೇ ಸಾಗಿತ್ತು:
ಬಿಜೆಪಿಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲಾ ಮಟ್ಟದಲ್ಲಿರುವ ಎಲ್ಲಾ ಪ್ರಭಾವಿಗಳೊಂದಿಗೆ ಗುರುತಿಸಿಕೊಂಡಿದ್ದ ದಿವ್ಯಾ ಹಾಗರಗಿ ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ತಾವು ಮಾಡಿದ ಪ್ಲಾನ್‌ನಂತೆಯೇ ಎಲ್ಲವೂ ಕಾರ್ಯರೂಪಕ್ಕೆ ತಂದಿದ್ದರು ಎಂದು ಸಿಐಡಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಒಡೆತನದ ಜ್ಞಾನಜ್ಯೋತಿ ಶಾಲೆಗೆ ಪಿಎಸ್‌ಐ ಪರೀಕ್ಷಾ ಕೇಂದ್ರ ಈ ಬಾರಿಯೂ ದಕ್ಕಲಿದೆ ಎಂಬ ಸಂಗತಿ ಖಚಿತವಾಗುತ್ತಿದ್ದಂತೆಯೇ ತಮ್ಮ ಆಪ್ತ, ರಾಜಕೀಯದಲ್ಲಿ ತಮಗೆ ಆಪ್ತರಾಗಿರುವ ಅನೇಕ ಹಾಲಿ-ಮಾಜಿ ನಾಯಕರನ್ನು ಸಂಪರ್ಕಿಸಿ, ಹಣ ಬಲದ ಪಿಎಸ್‌ಐ ಆಕಾಂಕ್ಷಿಗಳ ಸಂಪರ್ಕಿಸಿ ಪರೀಕ್ಷೆ ಅಕ್ರಮದ ಯೋಜನೆ ಹೆಣೆದಿದ್ದರು, ಅದರಂತೆಯೇ ಪರೀಕ್ಷೆ ಅವಧಿ ನಂತರವೂ ಸರಿ ಉತ್ತರಗಳಿಂದ ಒಎಂಆರ್ ಶೀಟ್ ಭರ್ತಿ ಮಾಡಿಸುವ ಮೂಲಕ ಅಕ್ರಮಕ್ಕೆ ಮುನ್ನುಡಿ ಬರೆದಿದ್ದರು ಎಂದು ಹೆಸರು ಬಹಿರಂಗಕ್ಕೆ ಇಚ್ಛಿಸಿದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಅಭ್ಯರ್ಥಿಗಳಾದ ವೀರೇಶ ನಿಡಗುಂದಾ, ಅರುಣ ಪಾಟೀಲ್, ರಾಯಚೂರಿನ ಕೆ. ಪ್ರದೀಪ ಕುಮಾರ್, ಚೇತನ ನಂದಗಾವ್, ಪರೀಕ್ಷಾ ಮೇಲ್ವಿಚಾರಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಜ್ಞಾನಗಂಗಾ ಶಾಲೆಯ ಶಿಕ್ಷಕಿಯರಾದ, ಉಮಾ, ಸಿದ್ದಮ್ಮ ಹಾಗೂ ಸಾವಿತ್ರಿ, ತಲೆ ಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಇವರ ಪತಿ ರಾಜೇಶ ಹಾಗರಗಿ ಇವರು ಸಿಐಡಿಯಿಂದ ಈಗಾಗಲೇ ಬಂಧಿತರಾಗಿದ್ದಾರೆ. ನ್ಯಾಯಾಂಗ ವಶದಲ್ಲಿರುವ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಿರೆಂಬ ಕೋರಿಕೆ ಮಾನ್ಯ ಮಾಡಿರುವ ನ್ಯಾಯಾಲಯ 3 ದಿನ ಸಿಐಡಿ ವಶಕ್ಕೆ ಇವರನ್ನೆಲ್ಲ ನೀಡಿದೆ.
ಇನ್ನಿಬ್ಬರ ಮೇಲೆ ಸಿಐಡಿ ನಿಗಾ
ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಫಜಲ್ಪುರ ಭಾಗದಲ್ಲಿರುವ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕಲಬುರಗಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಇವರಿಬ್ಬರ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಗೊತ್ತಾಗಿದೆ. ಏತನ್ಮಧ್ಯೆ ಜ್ಞಾನಜ್ಯೋತಿ ಕೇಂದ್ರದಲ್ಲೇ ಪಿಎಸ್‌ಐ ಪರೀಕ್ಷೆ ಬರೆದು ಪಾಸಾಗಿರುವ ಇನ್ನೂ ಹಲವರು ಅಭ್ಯರ್ಥಿಗಳ ವಿಚಾರಣೆಗೆ ಸಿಐಡಿ ಮುಂದಾಗಿರೋದರಿಂದ ಅನೇಕರು ತಲೆ ಮರೆಸಿಕೊಂಡಿದ್ದಾರೆ.
ಬಿಜೆಪಿಗೆ ಮುಜುಗರ
ಈಗಾಗಲೇ ಶೇ.40 ಕಮೀಷನ್ ಆರೋಪದ ಮೇಲೆ ಪಕ್ಷದ ಹಿರಿಯ ನಾಯಕ ಈಶ್ವರಪ್ಪ ತಲೆದಂಡವಾಗಿ ಮೊದಲೇ ಸುದ್ದಿಯಲ್ಲಿರುವ ಬಿಜೆಪಿಗೆ ಕಲಬುರಗಿಯಲ್ಲಿನ ದಿವ್ಯಾ ಹಾಗರಗಿ ಸುತ್ತಮುತ್ತಲಿನ ಬೆಳವಣಿಗೆಗಳು ತಲೆಬಿಸಿ ಉಂಟು ಮಾಡಿವೆ. ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಮನೆ ಶೋಧಕ್ಕೆ ಬಂದು ಪತಿ ರಾಜೇಶರನ್ನು ಬಂಧಿಸಿದ್ದರಿಂದ ಕಮಲ ಪಡೆಯಲ್ಲಿ ತೀವ್ರ ಸಂಚಲನ ಮೂಡಿದೆ. ಪಿಎಸ್‌ಐ ಅಕ್ರಮದಲ್ಲಿ ತಮ್ಮ ಪಕ್ಷದ ನಾಯಕಿಯೊಬ್ಬರ ಹೆಸರು ತಳಕು ಹಾಕಿಕೊಂಡಿದ್ದರಿಂದ ಬಿಜೆಪಿ ಮತ್ತೆ ತೀವ್ರ ಮುಜುಗರಕ್ಕೆ ಸಿಲುಕಿದಂತಾಗಿದೆ.
ಬಿಜೆಪಿ ದೌರ್ಬಲ್ಯ ಕಾರಣ
52 ಸಾವಿರ ಯುವಕರು ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಪಿಎಸ್‌ಐ ನೇಮಕಾತಿಯಲ್ಲೂ ಅವ್ಯವಹಾರವಾಗಿದ್ದು, ಇದಕ್ಕೆಲ್ಲಾ ಬಿಜೆಪಿ ಸರ್ಕಾರದ ದೌರ್ಬಲ್ಯವೇ ಕಾರಣ.
- ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಬಿಜೆಪಿಗೆ ಸಂಬಂಧವಿಲ್ಲ
ಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪಿ ಕಲಬುರಗಿಯ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಸಿಐಡಿ ತನಿಖೆಗೆ ನಮ್ಮ ಸರ್ಕಾರ ಒಪ್ಪಿಸಿದೆ.
-ರಾಜಕುಮಾರ್ ತೇಲ್ಕೂರ್ ಬಿಜೆಪಿ ವಕ್ತಾರ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ