PSI Recruitment Scam: ದಿವ್ಯಾ ಹಾಗರಗಿ ಪತಿ ಅರೆಸ್ಟ್: ತನಿಖೆ ಇನ್ನಷ್ಟು ಚುರುಕು
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಅವರ ಪತಿ ರಾಜೇಶ ಖರ್ಗೆಯವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ (ಏ.18): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಕಲಬುರ್ಗಿಯ (Kalaburagi) ಬಿಜೆಪಿ ನಾಯಕಿ (BJP Leader) ದಿವ್ಯ ಹಾಗರಗಿ (Divya Hagaragi) ಅವರ ಪತಿ ರಾಜೇಶ ಖರ್ಗೆಯವರನ್ನು ಸಿಐಡಿ ಪೊಲೀಸರು (CID Police) ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಇದರ ಆಳ ಬಗೆದಷ್ಟು ವಿಸ್ತಾರಗೊಳ್ಳುತ್ತಿದೆ.
ಎಂಟು ಜನರ ಬಂಧನ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮೊದಲು ವೀರೇಶ ಎನ್ನುವ ಸೇಡಂನ ಯುವಕನನ್ನು ಬಂಧಿಸಿದ್ದಾರೆ. ಈತ ಕೇವಲ 20 ಪ್ರಶ್ನೆಗಷ್ಟೇ ಉತ್ತರಿಸಿ PSI ನೇಮಕಾತಿಯಲ್ಲಿ ಆಯ್ಕೆಯಾಗಿದ್ದ. ಇದಾದ ನಂತರ ಕಳೆದ ಏಪ್ರಿಲ್ 16 ರಂದು ಜ್ಞಾನ ಜ್ಯೋತಿ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕರು, ಮೂವರು ಅಭ್ಯರ್ಥಿಗಳನ್ನು ಬಂಧಿಸಿದ್ದರು. ಅಲ್ಲದೇ ಭಾನುವಾರ ದಿವ್ಯಾ ಹಾಗರಗಿ ಅವರ ಪತಿ ರಾಜೇಶ ಹಾಗರಗಿ ಅವರನ್ನು ಸಿಐಡಿ ಬಂಧಿಸಿದೆ. ಒಟ್ಟಾರೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾದಂತಾಗಿದೆ.
PSI ನೇಮಕಾತಿ ಅಕ್ರಮದಲ್ಲಿ ಕಲಬುರಗಿಯ ಬಿಜೆಪಿ ನಾಯಕಿ ಶಾಮೀಲು: ಅಕ್ರಮ ನಡೆದಿದ್ದು ಹೇಗೆ?
ದಿವ್ಯಾ ಇನ್ನೂ ನಾಪತ್ತೆ: ಪಿಎಸ್‌ಐ ನೇಮಕಾತಿ ಅಕ್ರಮ ನಡೆದ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿರುವ ಹಾಗರಗಿ ಸದ್ಯವೂ ಸಿಐಡಿ ಅಧಿಕಾರಿಗಳ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದಾರೆ.
ಅಕ್ರಮ ಶಾಲೆಗೆ ಭೇಟಿ: ಈವರೆಗೆ ಬಂಧಿತರಾಗಿರುವ ಆರೋಪಿಗಳ ಪೈಕಿ ಅಭ್ಯರ್ಥಿಗಳು ಮತ್ತು ಮೇಲ್ವಿಚಾರಕರು ಸೇರಿ ಏಳು ಆರೋಪಿಗಳನ್ನು ಸಿಐಡಿ ಮರಳಿ ತನ್ನ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗಾಗಿ ಇವರನ್ನು ತಮ್ಮ ವಶಕ್ಕೆ ನೀಡುವಂತೆ, ಸಿಐಡಿ ಕಲ್ಬುರ್ಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ನ್ಯಾಯಾಲಯ ಮೂರು ದಿನಗಳ ಕಾಲ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಿದೆ. ನ್ಯಾಯಾಂಗ ವಶದಲ್ಲಿದ್ದ ಅವರನ್ನು ತನ್ನ ವಶಕ್ಕೆ ಪಡೆದ ಕೂಡಲೇ ಸಿಐಡಿ ಅಧಿಕಾರಿಗಳು, ಅಕ್ರಮ ನಡೆದ ಶಾಲೆಗೆ ಇವರನ್ನು ಕರೆದುಕೊಂಡು ಹೋಗಿ ಮಾಹಿತಿ ಪಡೆದರು. ಅಕ್ರಮ ನಡೆದಿದ್ದು ಹೇಗೆ? ಯಾವ್ಯಾವ ಕೋಣೆನಲ್ಲಿ ಪರೀಕ್ಷೆ ಬರೆದಿದ್ದಿರಿ? ಸಿಸಿ ಕ್ಯಾಮೆರಾ ಕಣ್ ತಪ್ಪಿಸಲು ಮಾಡಿರುವ ಪ್ಲಾನ್ ಏನು? ಎಲ್ಲಾ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಸಿಸಿ ಕ್ಯಾಮೆರಾ ಡಿವಿಆರ್ ಅನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.
ತನಿಖೆ ಚುರುಕು: ಬಂಧಿತರು ಇನ್ಯಾರ ಜೊತೆ ಸಂಪರ್ಕದಲ್ಲಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವವರು ಇನ್ಯಾರಾರು ಇದ್ದಾರೆ ಅಕ್ರಮದಲ್ಲಿ ಯಾರ್ಯಾರ ಪಾಲು ಏನೇನು? ಎನ್ನುವುದರ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಒಟ್ಟಾರೆ ಈ ಪ್ರಕರಣದ ಜನ್ಮ ಜಾಲಾಡುತ್ತಿರುವ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸದ್ಯದಲ್ಲೇ ಇನ್ನಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಈ ನಡುವೆ ತಲೆಮರೆಸಿಕೊಂಡವರ ಪತ್ತೆಗೆ ಸಿಐಡಿ ಜಾಲ ಬೀಸಿದೆ.
PSI Recruitment Scam: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಸಿಐಡಿಗೆ: ಆರಗ ಜ್ಞಾನೇಂದ್ರ
ಮೂಲ ಕಿಂಗ್ ಪಿನ್ ಯಾರು?: ಇದರ ಮುಖ್ಯ ಕಿಂಗ್ ಪಿನ್ ಯಾರು ಎನ್ನುವುದರ ಬಗ್ಗೆ ಸಿಐಡಿ ತನಿಖೆ ತೀವ್ರಗೊಳಿಸಿದೆ. ಸದ್ಯ ಬಂಧಿತರಾಗಿರುವ ಪರೀಕ್ಷಾ ಮೇಲ್ವಿಚಾರಕರ ಬೊಟ್ಟು ಶಾಲಾ ಅಧ್ಯಕ್ಷೆ ದಿವ್ಯಾ ಹಾಗರಗಿ ಅವರತ್ತ ಹೊರಳುತ್ತಿದೆ ಎನ್ನಲಾಗಿದೆ. ಅದಾಗ್ಯೂ ಅವರು ಹೊರತುಪಡಿಸಿಯೂ ಇನ್ನೂ ಹಲವರ ಪಾತ್ರ ಅಲ್ಲಗಳೆಯುವಂತಿಲ್ಲ. ದಿವ್ಯಾ ಹಾಗರಗಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ನಾಯಕರೆಲ್ಲರಿಗೂ ಹತ್ತಿರದವರಾಗಿದ್ದು, ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯಕ್ಕಂತೂ ಸಿಐಡಿಯ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎನ್ನಲಾಗಿದೆ.