ಪಿಎಸ್‌ಐ ಅಕ್ರಮ ನೇಮಕಾತಿ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವ ವೇಳೆಯಲ್ಲಿಯೇ ಆಡಳಿತಾರೂಢ ಬಿಜೆಪಿ ಸೇರಿದಂತೆ ಮೂರೂ ಪಕ್ಷದ 9 ಶಾಸಕರು ಪ್ರಾಮಾಣಿಕ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ.

ಬೆಂಗಳೂರು (ಜೂ.05): ಪಿಎಸ್‌ಐ ಅಕ್ರಮ ನೇಮಕಾತಿ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವ ವೇಳೆಯಲ್ಲಿಯೇ ಆಡಳಿತಾರೂಢ ಬಿಜೆಪಿ ಸೇರಿದಂತೆ ಮೂರೂ ಪಕ್ಷದ 9 ಶಾಸಕರು ಪ್ರಾಮಾಣಿಕ ಅಭ್ಯರ್ಥಿಗಳ ಪರವಾಗಿ ಬ್ಯಾಟಿಂಗ್‌ ಮಾಡಿದ್ದು, ನೇಮಕಾತಿ ಆದೇಶ ಪ್ರತಿ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಪತ್ರ ಬರೆದ ಒಂಭತ್ತು ಶಾಸಕರ ಪೈಕಿ ಆರು ಶಾಸಕರು ಬಿಜೆಪಿಯವರಾಗಿದ್ದು, ಇಬ್ಬರು ಕಾಂಗ್ರೆಸ್‌ ಮತ್ತು ಒಬ್ಬರು ಜೆಡಿಎಸ್‌ ಶಾಸಕರಾಗಿದ್ದಾರೆ. 

ಬಿಜೆಪಿ ಶಾಸಕರಾದ ಪಿ.ರಾಜೀವ್‌, ಸುನೀಲ್‌ ಬಿ.ನಾಯ್ಕ, ಕೆ.ರಘುಪತಿ ಭಟ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ, ಲಾಲಜಿ ಆರ್‌. ಮೆಂಡನ್‌, ಹರೀಶ್‌ ಪೂಂಜಾ, ಕಾಂಗ್ರೆಸ್‌ನ ಜೆ.ಎನ್‌.ಗಣೇಶ್‌, ಕೆ.ರಾಘವೇಂದ್ರ ಹಿಟ್ನಾಳ್‌ ಮತ್ತು ಜೆಡಿಎಸ್‌ನ ಕೆ.ಎಸ್‌.ಲಿಂಗೇಶ್‌ ಅವರು ಪತ್ರ ಬರೆದಿದ್ದಾರೆ. ಅಕ್ರಮ ಎಸಗಿದವರನ್ನು ವೈಜ್ಞಾನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡಬಹುದು. ಹೀಗಾಗಿ ಅಕ್ರಮ ಎಸಗಿದವರನ್ನು ಪತ್ತೆ ಮಾಡಿ ಶಿಕ್ಷೆಗೊಳಪಡಿಸಬೇಕು. ಕೆಲವು ಎಸಗಿದ ಅಕ್ರಮದಿಂದ ಹಲವಾರು ಮಂದಿಗೆ ಅನ್ಯಾಯವಾಗುವುದು ಸರಿಯಲ್ಲ. ಅವರ ರಕ್ಷಣೆಗೆ ನಿಲ್ಲುವುದು ಸರ್ಕಾರ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆಗಿಂತ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾದವರಿಗೆ ಆದೇಶ ಪ್ರತಿ ನೀಡಬೇಕು ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

PSI ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ ಪಾಟೀಲನ ಮತ್ತಿಬ್ಬರು ಆಪ್ತರ ಬಂಧನ!

ರಾಜಕೀಯ ತಿರುವು: ಈ ಹಿಂದೆ ಗೃಹ ಸಚಿವರು ಪರೀಕ್ಷೆಯನ್ನು ರದ್ದುಪಡಿಸಿದ ಕ್ರಮವನ್ನು ಬಿಜೆಪಿಯ ಇದೇ ಶಾಸಕರು ಸ್ವಾಗತಿಸಿ ಬೆಂಬಲಿಸಿದ್ದರು. ಕಷ್ಟಪಟ್ಟು ಓದಿದವರಿಗೆ ಅಕ್ರಮದಿಂದ ಅನ್ಯಾಯವಾಗಿದೆ. ಆದ್ದರಿಂದ ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆ ಮಾಡುವಂತೆ ಹೇಳಿ ಗೃಹ ಸಚಿವರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಸಚಿವರಿಗೆ ಪತ್ರ ಬರೆದು ಆದೇಶ ಪ್ರತಿ ನೀಡುವಂತೆ ಒತ್ತಾಯಿಸಿದ್ದಾರೆ. ಈ ಮೂಲಕ ಇದು ರಾಜಕೀಯಕ್ಕೆ ತಿರುಗಿದೆ. ರಾಜಕೀಯ ಕಾರಣಕ್ಕಾಗಿಯೇ ಪತ್ರ ಬರೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

PSI Recruitment ಮರು ಪರೀಕ್ಷೆ ವಿರೋಧಿಸಿ ಅಭ್ಯರ್ಥಿಗಳ ಪ್ರತಿಭಟನೆ

ಕಳೆದ ವರ್ಷ 545 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಪರೀಕ್ಷೆ ಅಕ್ರಮ ನಡೆದಿರುವ ಬಗ್ಗೆ ಇತ್ತೀಚೆಗೆ ಬಹಿರಂಗಗೊಂಡಿತ್ತು. ತನಿಖೆ ಕೈಗೊಂಡ ಪೊಲೀಸರು 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಬಂಧನವಾಗಿದೆ. ಅಲ್ಲದೇ, ಕೆಲ ಪೊಲೀಸರ ಬಂಧನವೂ ಆಗಿದೆ. ಪ್ರಕರಣವು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿ ಚರ್ಚೆಗೆ ಗ್ರಾಸವಾಗಿತ್ತು. ತೀವ್ರ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಸರ್ಕಾರವು ಇಡೀ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರವು ಮುಂದಿನ ಪ್ರಕ್ರಿಯೆಯನ್ನು ನಡೆಸುತ್ತಿದೆ. ಈ ನಡುವೆ, ಶಾಸಕರ ಪತ್ರವು ರಾಜಕೀಯ ಚರ್ಚೆಗೆ ಕಾರಣವಾಗಿದೆ.