*  ಗೃಹ ಸಚಿವ, ಉನ್ನತ ಶಿಕ್ಷಣ ಸಚಿವರ ಪಾತ್ರ ಸ್ಪಷ್ಟ, ಇವರನ್ನು ವಜಾ ಮಾಡಿ*  ಸಿಐಡಿ ಬದಲು ಜಡ್ಜ್‌ ಉಸ್ತುವಾರಿ ತನಿಖೆ ಆಗಬೇಕು*  40% ಭ್ರಷ್ಟಾಚಾರಕ್ಕೆ ಕೇಂದ್ರದ ಅಧಿಕೃತ ಮುದ್ರೆ 

ಬೆಂಗಳೂರು(ಮೇ.05): ‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ(Recruitment Scam) 300 ಕೋಟಿ ರು.ಗೂ ಅಧಿಕ ಮೊತ್ತದ ಬೃಹತ್‌ ಹಗರಣ. ಈ ಅಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಪಾತ್ರ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಈ ಪ್ರಕರಣದ ತನಿಖೆಯನ್ನು ಹೈಕೋರ್ಚ್‌ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆಸಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಈ ಹಗರಣದಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಂತಹ ಬೃಹತ್‌ ಹಗರಣದ ಬಗ್ಗೆ ಸಿಐಡಿ(CID) ತನಿಖೆ ಸಮಂಜಸವಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಮಧ್ಯಪ್ರವೇಶಿಸಿ ಪಿಎಸ್‌ಐ ನೇಮಕಾತಿ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕ ಎರಡನ್ನೂ ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಆರಗ ಗೃಹ ಸಚಿವರಾಗಿ ಮುಂದುವರೆಯಲು ನಾಲಾಯಕ್, ವಜಾಗೊಳಿಸಿ: ಸಿದ್ದರಾಮಯ್ಯ

ಆರಗ ಜ್ಞಾನೇಂದ್ರ ಹೊಣೆ:

‘ಪಿಎಸ್‌ಐ ನೇಮಕಾತಿ ದೊಡ್ಡ ಹಗರಣಕ್ಕೆ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹೊಣೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಖುದ್ದು ಬಿಜೆಪಿ ಸಚಿವರಾದ ಪ್ರಭು ಚೌಹಾಣ್‌ ಜ.25 ರಂದು ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ(BJP) ಪರಿಷತ್‌ ಸದಸ್ಯ ಸಂಕನೂರ ಅವರು ಮಾ.15 ರಂದು ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಪತ್ರ ಬರೆದು ಕೆಲವು ಅಭ್ಯರ್ಥಿಗಳು ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದಿದ್ದಾರೆ ಎಂದು ಹೇಳಿದ್ದರೂ ತನಿಖೆ ನಡೆಸಿರಲಿಲ್ಲ. ದೂರುಗಳನ್ನು ಬೇಜವಾಬ್ದಾರಿಯಾಗಿ ತಳ್ಳಿ ಹಾಕಿದ್ದರು’ ಎಂದು ಆರೋಪಿಸಿದರು.

‘ಇದೀಗ ಅಕ್ರಮ ನಡೆದಿರುವುದು ಸಾಬೀತಾಗಿ ಇದೇ ಆರಗ ಜ್ಞಾನೇಂದ್ರ ಅವರು ತಾತ್ಕಾಲಿಕ ಆಯ್ಕೆ ಪಟ್ಟಿರದ್ದು ಮಾಡಿ, ಮರು ಪರೀಕ್ಷೆಗೆ ಆದೇಶ ಮಾಡಿದ್ದಾರೆ. ಇಂತಹವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇದೆಯೇ? ಕೂಡಲೇ ಇವರನ್ನು ಸಂಪುಟದಿಂದ ಕಿತ್ತು ಹಾಕಬೇಕು’ ಎಂದು ಒತ್ತಾಯಿಸಿದರು.

ಅಶ್ವತ್ಥನಾರಾಯಣ ಕೈವಾಡ ಸ್ಪಷ್ಟ:

‘ಪಿಎಸ್‌ಐ ನೇಮಕದಲ್ಲಿ ಅಶ್ವತ್ಥ್‌ ನಾರಾಯಣ ಕೈವಾಡ ಇದೆ. ಆಯ್ಕೆಯಾದ ದರ್ಶನ್‌ ಗೌಡ, ನಾಗೇಶ್‌ ಗೌಡ ಇಬ್ಬರೂ ಸಚಿವರ ಸಂಬಂಧಿಗಳು. ಐದು ಮತ್ತು ಹತ್ತನೇ ಶ್ರೇಣಿ ಪಡೆದಿದ್ದಾರೆ. ದರ್ಶನ್‌ ಗೌಡನಿಗೆ ಲಿಖಿತ ಉತ್ತರದಲ್ಲಿ 50ಕ್ಕೆ 19 ಅಂಕ, ಟಿಕ್‌ ಮಾಡುವುದರಲ್ಲಿ 150ಕ್ಕೆ 141 ಅಂಕ ಬಂದಿದೆ. ನಾಗೇಶ್‌ ಗೌಡ ಕ್ರಮವಾಗಿ 29 ಅಂಕ ಹಾಗೂ 128 ಅಂಕ ಪಡೆದಿದ್ದಾನೆ. ದರ್ಶನ್‌ ಹಾಗೂ ನಾಗೇಶ್‌ರನ್ನು ವಿಚಾರಣೆಗೆ ಕರೆಸಿ ವಾಪಸ್‌ ಕಳುಹಿಸಲಾಗಿದೆ. ಎಲ್ಲರನ್ನೂ ಬಂಧಿಸಿರುವಾಗ ನೇರ ಆರೋಪಿಗಳಾಗಿರುವ(Accused) ಈ ಇಬ್ಬರನ್ನು ಏಕೆ ತಕ್ಷಣ ಬಿಡುಗಡೆ ಮಾಡಲಾಗಿದೆ?’ ಎಂದು ಪ್ರಶ್ನಿಸಿದರು.

‘ಪಿಎಸ್‌ಐ ನೇಮಕ ಮಾತ್ರವಲ್ಲದೆ ಉನ್ನತ ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕ ಅಕ್ರಮದಲ್ಲೂ ಅಶ್ವತ್ಥನಾರಾಯಣ ಉತ್ತರದಾಯಿಯಾಗಿದ್ದಾರೆ. ಈ ಪ್ರಕರಣದಲ್ಲಿ ನಾಗರಾಜ್‌ ಹಾಗೂ ಸೌಮ್ಯ ಎಂಬುವವರನ್ನು ಬಂಧಿಸಲಾಗಿದೆ. ಇದರಿಂದ ಅಕ್ರಮ ಸಾಬೀತಾಗಿದ್ದು ಇಲಾಖೆ ಜವಾಬ್ದಾರಿ ಹೊತ್ತಿರುವ ಅಶ್ವತ್ಥನಾರಾಯಣ್‌ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು’ ಎಂದರು.

Karnataka Politics: ಅಮಿತ್‌ ಶಾ ಬಂದ್ರೂ ಬಿಜೆಪಿ 150 ಗೆಲ್ಲಲ್ಲ: ಸಿದ್ದರಾಮಯ್ಯ

40% ಭ್ರಷ್ಟಾಚಾರಕ್ಕೆ ಕೇಂದ್ರದ ಅಧಿಕೃತ ಮುದ್ರೆ: ಸಿದ್ದು

ರಾಜ್ಯದಲ್ಲಿ 40 % ಸರ್ಕಾರ, ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣಗಳು ಜಗಜ್ಜಾಹಿರಾಗಿದ್ದರೂ ಕೇಂದ್ರ ಸಚಿವರಾದ ಅಮಿತ್‌ ಶಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಹೊಗಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

‘ಸರ್ಕಾರಿ ಕಾಮಗಾರಿಗಳಿಗೆ ಶೇ.40 ರಷ್ಟು ಕಮಿಷನ್‌ ಕೊಡಬೇಕು ಎಂದು ಪ್ರಧಾನಿಗಳಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಸ್ವಾಮೀಜಿಗಳೂ ಮಾತನಾಡಿದ್ದಾರೆ. ಒಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿ ಸಚಿವರ ತಲೆದಂಡವೂ ಆಗಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಹೊಗಳುವ ಮೂಲಕ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕುಮ್ಮಕ್ಕು ನೀಡುತ್ತಿರುವುದು ಸಾಬೀತಾಗಿದೆ’ ಎಂದಿದ್ದಾರೆ.