*   ಬಿಜೆಪಿ 150 ಸ್ಥಾನ ಗೆಲ್ಲುವುದು ಹಗಲು ಕನಸು*  ಸರ್ಕಾರ ಈಗಾಗಲೇ ಕಮೀಷನ್‌ ದಂಧೆ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಳುಗಿದೆ*  ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮುನಿರತ್ನ  

ಮದ್ದೂರು(ಮೇ.01):  ಹಗರಣಗಳನ್ನು ಸುತ್ತಿಕೊಂಡಿರುವ ಬಿಜೆಪಿ(BJP) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಹಗಲು ಕನಸು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಶನಿವಾರ ಲೇವಡಿ ಮಾಡಿದರು.

ಮೈಸೂರು(Mysuru) ಜಿಲ್ಲೆಯ ಟಿ.ನರಸೀಪುರ ಪ್ರವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಶಿವಪುರದಲ್ಲಿ ಕಾಂಗ್ರೆಸ್‌(Congress) ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಈಗಾಗಲೇ ಪಿಎಸ್‌ಐ ಮತ್ತು ಪ್ರಾಧ್ಯಾಪಕರ ಪರೀಕ್ಷೆಗಳ ಅಕ್ರಮ, ಕಮೀಷನ್‌ ದಂಧೆ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಳುಗಿದೆ. ಇಂತಹ ಭ್ರಷ್ಟಸರ್ಕಾರಕ್ಕೆ ಜನರ ವಿಶ್ವಾಸವಿಲ್ಲ ಎಂದು ಟೀಕಿಸಿದರು.
ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ(BS Yediyurappa) ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಪ್ರವಾಸ ಮಾಡುವುದರಿಂದ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ ಎನ್ನುವುದು ಬರೀ ಭ್ರಮೆ ಅಷ್ಟೆ. ಈ ಸರ್ಕಾರಕ್ಕೆ ಬಹುಮತ ಕೊಡುವುದಕ್ಕೆ ರಾಜ್ಯದ ಜನ ಸಿದ್ದರಿಲ್ಲ. ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.

ಅಮಿತ್ ಶಾ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ: ಬಿಜೆಪಿಗರ ವಿರುದ್ಧ ಸಿದ್ದು ಗರಂ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Election 2023) ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ತಮ್ಮ 30 ಮಂದಿಯ ತಂಡದೊಂದಿಗೆ ಒಂದು ವರ್ಷ ಕಾಲ ರಾಜ್ಯದಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆ ಅವರಲ್ಲೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುರ್ಜೇವಾಲ ಅವರಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ಸಹ ಬೆಂಬಲವಾಗಿ ನಿಲ್ಲುತ್ತೇವೆ. ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.

ಯಾವ ಶಾ ಬಂದರೂ ಏನು ಆಗುವುದಿಲ್ಲ:

ಬಿಜೆಪಿ ಪಕ್ಷದ ಸಂಘಟನೆಗಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಯಾವ ‘ಶಾ’ ಬಂದರೂ ಏನೂ ಆಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

Siddaramaiah: ಮುದ್ರಣ ಕಾಗದದ ಜಿಎಸ್‌ಟಿ ಇಳಿಸಿ: ಪ್ರಧಾನಿ ಮೋದಿಗೆ ಸಿದ್ದು ಪತ್ರ

ಬಿಜೆಪಿ ಆಹ್ವಾನ ನೀಡಿದರೆ ಇಡೀ ಕಾಂಗ್ರೆಸ್‌ ಖಾಲಿಯಾಗುತ್ತದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿಕೆಯನ್ನು ಖಂಡಿಸಿದ ಸಿದ್ದರಾಮಯ್ಯ, ಸಚಿವ ಮುನಿರತ್ನ ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಆ ಪಕ್ಷದ ಋುಣ ಆತನ ಮೇಲಿರುವುದರಿಂದ ಹೀಗೆ ಹೇಳುತ್ತಿದ್ದಾನೆ. ಹಗರಣಗಳಿಂದ ಬಿಜೆಪಿ ಬಣ್ಣ ಈಗ ಬಯಲಾಗಿರುವುದರಿಂದ ಕಾಂಗ್ರೆಸ್‌ನ ಯಾರೂ ಬಿಜೆಪಿಗೆ ಸೇರುವುದಿಲ್ಲ. ಆ ಪಕ್ಷದವರೇ ಕಾಂಗ್ರೆಸ್‌ನತ್ತ ಮುಖ ಮಾಡುವ ಕಾಲ ಸನ್ನಿಹಿತವಾಗುತ್ತದೆ ಎಂದರು.

ಈ ವೇಳೆ ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್‌ ನಿರ್ದೆಶಕ ಪಿ.ಸಂದರ್ಶ, ತಾಪಂ ಮಾಜಿ ಅಧ್ಯಕ್ಷರಾದ ಸಿ. ನಾಗೇಗೌಡ, ಕೆ.ಆರ್‌.ಮಹೇಶ, ಪುರಸಭಾ ಮಾಜಿ ಸದಸ್ಯ ಪಿ.ಸಿ.ಮಹೇಶ್‌ ಇದ್ದರು.