*  ಬಿಪಿಎಲ್‌ ಕಾರ್ಡ್‌ಗೆ ಏ.1ರಿಂದ 1 ಕಿಲೋ ಹೆಚ್ಚುವರಿ ಅಕ್ಕಿ ನೀಡಿಕೆ*  ಬಡವರಿಗೆ 5 ಕೆ.ಜಿ. ಬದಲಾಗಿ 6 ಕೆ.ಜಿ. ಧಾನ್ಯ*  ಸರ್ಕಾರದ ಕೋವಿಡ್‌ ನಿರ್ವಹಣೆಗೆ ಮೆಚ್ಚುಗೆ

ಬೆಂಗಳೂರು(ಫೆ.15):  ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಪ್ರಸ್ತುತ ವಿತರಿಸುತ್ತಿರುವ ಐದು ಕೆ.ಜಿ. ಧಾನ್ಯದ ಜತೆಗೆ ಏಪ್ರಿಲ್‌ ತಿಂಗಳಿನಿಂದ ಒಂದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌(Thawar Chand Gehlot) ಘೋಷಣೆ ಮಾಡಿದ್ದಾರೆ.

ಸೋಮವಾರ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು ರಾಜ್ಯ ಸರ್ಕಾರ(Government of Karnataka) ಕೋವಿಡ್‌ ನಿರ್ವಹಣೆಗಾಗಿ ನಡೆಸಿದ ಹೋರಾಟ ಮತ್ತು ಜಾರಿಗೆ ತಂದಿರುವ ಕಾರ್ಯಕ್ರಮಗಳು ಮತ್ತು ಮುಂದುವರೆದ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.

ತಮಿಳುನಾಡು ಸರಕಾರದ ಜೊತೆ ಘರ್ಷಣೆ, ನೀಟ್ ಮಸೂದೆ ಹಿಂದಿರುಗಿಸಿದ ರಾಜ್ಯಪಾಲ

ಬಿಪಿಎಲ್‌ ಚೀಟಿಯನ್ನು ಹೊಂದಿದ ಪ್ರತಿ ಕುಟುಂಬಕ್ಕೆ ಐದು ಕೆ.ಜಿ. ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಂದು ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶಿಸಿದ್ದು, ಏಪ್ರಿಲ್‌ ತಿಂಗಳಿನಿಂದ ಜಾರಿಗೆ ಬರಲಿದೆ. ಸುಸ್ಥಿರ ಕೃಷಿ ಕಾರ್ಯಕ್ರಮವನ್ನು ಜಾರಿಗೊಳಿಸಲು ಪ್ರಾಥಮಿಕ ಕೃಷಿ ಉತ್ಪನ್ನಗಳ ಗರಿಷ್ಠ ಬಳಕೆಯ ಮೂಲಕ ರೈತರ(Farmers) ಆದಾಯವನ್ನು ಹೆಚ್ಚಿಸಲು ಮತ್ತು ಮಾನ ಸಂಪನ್ಮೂಲ ಮತ್ತು ಮೌಲ್ಯಾಧಾರಿತ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ದ್ವಿತೀಯ ಕೃಷಿ ನಿರ್ದೇಶನಾಲಯವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಪ್ರಸ್ತುತ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನದಲ್ಲಿದ್ದ ಹೈದರಾಬಾದ್‌-ಕರ್ನಾಟಕ ವಿಶೇಷ ಕೋಶವನ್ನು ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಾಭಿವೃದ್ಧಿ ಮಂಡಳಿಯ ಅಧೀನಕ್ಕೊಳಪಡಿಸಿ ಕಲಬುರಗಿಗೆ(Kalaburagi) ಸ್ಥಳಾಂತರಿಸಿ ಆದೇಶ ಹೊರಡಿಸಲಾಗಿದೆ. ಗ್ರಾಮ ಒನ್‌(Grama One) ಯೋಜನೆಯಡಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂಧು ಯೋಜನೆಯ ಮೂಲಕ ನೀಡಲಾಗುವ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅದೇ ರೀತಿ ಮಾಹಿತಿ ಹಕ್ಕು ಅಧಿನಿಯಮದ ಅರ್ಜಿಗಳು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋರಿ ಅರ್ಜಿಗಳನ್ನು ಮತ್ತು ಸಕಾಲ ಸೇವೆಗಳನ್ನು ಕೋರಿ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಗ್ರಾಮ ಒನ್‌ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿಯೇ ಕರ್ನಾಟಕ(Karnataka) ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶದಲ್ಲಿನ ದೇಶಿ ಸಂಜಾತರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ಮರಳಿ ತಾಯ್ನಾಡಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಕ್ತ ನೀತಿ ರಚನೆ ಮತ್ತು ಅನುದಾನ ಬಿಡುಗಡೆ ಮಾಡುವ ಆಶ್ವಾಸನೆಯನ್ನು ನೀಡಿದರು.

ಹಾಲಿನಲ್ಲಿ ನಂ.11, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ:

ಹಾಲಿನ ಉತ್ಪಾದನೆಯಲ್ಲಿ 11ನೇ ಸ್ಥಾನದಲ್ಲಿರುವ ರಾಜ್ಯವು ಮೊಟ್ಟೆ(Egg Production) ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿದೆ. ಮಾಂಸ(Meat) ಉತ್ಪಾದನೆಯಲ್ಲಿ 10 ನೇ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ಜಿಡಿಪಿಗೆ(GDP) ಶೇ.3.53ರಷ್ಟು ಕೊಡುಗೆ ನೀಡುತ್ತಿದೆ. ಸಾರ್ವಜನಿಕ ವ್ಯವಹಾರ ಸೂಚ್ಯಂಕದಲ್ಲಿ (ಬೆಳವಣಿಗೆ, ಸಮಾನತೆ, ಸುಸ್ಥಿರತೆ) 4ನೇ ಸ್ಥಾನದಲ್ಲಿದೆ. 2019-20ರ ಎಸ್‌ಡಿಜಿ ಭಾರತ ಸೂಚ್ಯಂಕದ ಪ್ರಕಾರ 6ನೇ ಸ್ಥಾನದಲ್ಲಿತ್ತು. 2020-21ರ ವರದಿ ಪ್ರಕಾರ ರಾಜ್ಯದ ಶ್ರೇಯಾಂಕ 4ಕ್ಕೆ ಏರಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನಗೊಳಿಸುವಲ್ಲಿ 11 ನೇ ಸ್ಥಾನದಲ್ಲಿದ್ದೇವೆ ಎಂದು ರಾಜ್ಯಪಾಲರು ಇದೇ ವೇಳೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ನೀರಾವರಿ(Irrigation) ಕ್ರಾಂತಿ ಮಾಡಲು 1500 ಕೋಟಿ ರು. ವೆಚ್ಚದಲ್ಲಿ 55 ಅಣೆಚ್ಚಕಟ್ಟುಗಳನ್ನು ಪುನಶ್ಚೇತನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಎರಡು ವರ್ಷದಲ್ಲಿ ರಾಜ್ಯದ ಎಲ್ಲಾ ಗ್ರಾಮಗಳ ಜನರಿಗೆ ನಲ್ಲಿ ನೀರು ಒದಗಿಸಲು ತೀರ್ಮಾನಿಸಲಾಗಿದೆ. ಮೊದಲ ವರ್ಷ 27.14 ಲಕ್ಷ ಮತ್ತು ಎರಡನೇ ವರ್ಷ 17.45 ಲಕ್ಷ ಮನೆಗಳಿಗೆ ನಲ್ಲಲಿ ಸಂಪರ್ಕವನ್ನು ಒದಗಿಸಲಾಗುವುದು. ಅಲ್ಲದೇ, ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರು ಅಭ್ಯಸಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು 16.88 ಕೋಟಿ ರು. ಒದಗಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ನಿರ್ವಹಣೆಗೆ ಮೆಚ್ಚುಗೆ:

ಕೋವಿಡ್‌ನಿಂದ ಎದುರಾದ ಸವಾಲುಗಳು, ಸಂಕಷ್ಟದ ನಡುವೆಯೂ ಸರ್ಕಾರ ಸಮರ್ಥವಾಗಿ ನಿಭಾಯಿಸಿ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜ್ಯಪಾಲರು, ಕೋವಿಡ್‌ ಲಸಿಕೆ(Covid Vaccine) ಕಾರ್ಯಕ್ರಮದಲ್ಲಿ ಸಮತೋಲನದಲ್ಲಿ ನಡೆಯುತ್ತಿದೆ. ಪ್ರತಿದಿನ ಆರು ಸಾವಿರ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ 9.3 ಕೋಟಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಶೇ.100ಷ್ಟುಮೊದಲ ಡೋಸ್‌ ಮತ್ತು ಶೇ.85ರಷ್ಟುಎರಡನೇ ಡೋಸ್‌ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನವು ಪ್ರಾರಂಭಿಸಿದ ಟೆಲಿಮೆಡಿಸಿನ್‌ ಆಧಾರಿತ ಆರೋಗ್ಯ ಸೇವೆಗಳ ಸದುಪಯೋಗ ಪಡೆಯುವಲ್ಲಿ ರಾಷ್ಟ್ರದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ಕೋವಿಡ್‌ ಸಂಕಟದ ನಡುವೆಯೂ ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ದೇಶಕ್ಕೆ ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪೈಕಿ ಶೇ.48ರಷ್ಟುಹಣ ರಾಜ್ಯಕ್ಕೆ ಹರಿದು ಬಂದಿದೆ ಎಂದು ತಿಳಿಸಿದರು.

Hijab Row ನೋಟಿಸ್ ಜಾರಿಯಾಗುತ್ತಿದ್ದಂತೆಯೇ ಕ್ಷಮೆಯಾಚಿಸಿದ ಶಾಸಕ ಜಮೀರ್ ಅಹ್ಮದ್ ಖಾನ್

ಸರ್ಕಾರದ ಸಾಧನೆ

1. ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಹೆಗ್ಗಳಿಕೆ
2. ಹಳ್ಳಿಗಳಲ್ಲೂ ಎಲ್ಲ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಅರ್ಜಿ ಸ್ವೀಕಾರಕ್ಕೆ ಗ್ರಾಮ ಒನ್‌ ಶುರು
3. ಕೋವಿಡ್‌ ಮೊದಲ ಡೋಸ್‌ ವಿತರಣೆಯಲ್ಲಿ ಶೇ.100, 2ನೇ ಡೋಸ್‌ನಲ್ಲಿ ಶೇ.85 ಸಾಧನೆ
4. .1500 ಕೋಟಿ ವೆಚ್ಚದಲ್ಲಿ ನೀರಾವರಿ ಕ್ರಾಂತಿ, 55 ಅಣೆಕಟ್ಟುಗಳ ಪುನಶ್ಚೇತನಕ್ಕೆ ತೀರ್ಮಾನ
5. ರಾಜ್ಯದ ರೈತರ ಆದಾಯ ಹೆಚ್ಚಿಸಲು ಸಕಲ ಕ್ರಮ. ದ್ವಿತೀಯ ಕೃಷಿ ನಿರ್ದೇಶನಾಲಯ ಸೃಷ್ಟಿ

ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌(Hijab) ವಿವಾದ ಉಂಟಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಖಂಡಿಸಿ ಕಾಂಗ್ರೆಸ್‌ನ(Congress) ವಿಧಾನಸಭೆ ಹಾಗೂ ಪರಿಷತ್‌ ಸದಸ್ಯರು ಸೋಮವಾರ ಜಂಟಿ ಅಧಿವೇಶನಕ್ಕೆ ಕಪ್ಪು ಪಟ್ಟಿಧರಿಸಿ ಆಗಮಿಸುವ ಮೂಲಕ ಮೌನ ಪ್ರತಿಭಟನೆ(Protest) ನಡೆಸಿದರು.