* ನೋಟಿಸ್ ಜಾರಿಯಾಗುತ್ತಿದ್ದಂತೆಯೇ ಕ್ಷಮೆಯಾಚಿಸಿದ ಶಾಸಕ ಜಮೀರ್ ಅಹ್ಮದ್ ಖಾನ್* ಹಿಜಾಬ್ ಪರ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮೀರ್* ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆಯಾಚನೆ 

ಬೆಂಗಳೂರು, (ಫೆ.14): ಮಹಿಳೆಯರು ಹಿಜಾಬ್ (Hijab) ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಶಾಸಕ ಜಮೀರ್ ಅಹ್ಮದ್​ ಖಾನ್​(Zameer Ahmed Khan) ಹೇಳಿಕೆಗೆ ತೀವ್ರ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ.

ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಜಮೀರ್ ಅಹ್ಮದ್ ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ.

Karnataka Congress ಶಾಸಕ ಜಮೀರ್ ಅಹ್ಮದ್‌ ಖಾನ್‌ಗೆ ಬಿಗ್ ಶಾಕ್ ಕೊಟ್ಟ ಕೆಪಿಸಿಸಿ

ಜಮೀರ್ ಮಾಡಿರುವ ಟ್ವೀಟ್ ನಲ್ಲಿ ಏನಿದೆ?
ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರಗಳನ್ನು ಕಂಡಾಗ ಭಯ-ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿಜಬ್ – ಬುರ್ಖಾ ಧರಿಸುವುದರಿಂದಾದರೂ ಅತ್ಯಾಚಾರವನ್ನು ತಡೆಗಟ್ಟಬಹುದೇನೋ ಎಂಬ ಮಾತನ್ನು ನಾನು ಆಡಿದ್ದೆ ಎಂದು ವಿವರಿಸಿದರು. ಈ ರೀತಿ ಹೇಳಿಕೆಗಳನ್ನ ಕೊಟ್ಟು ಯಾರ ಮನಸ್ಸನ್ನಾದರೂ ನೋಯಿಸುವ, ಇಲ್ಲವೇ ಅಗೌರವ ತೋರಿಸುವ ದುರುದ್ದೇಶದಿಂದ ಹೇಳಿದ್ದಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವುದು. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಿಜಬ್ – ಬುರ್ಖಾ ಧರಿಸುವುದನ್ನು ಧಾರ್ಮಿಕ ಕಟ್ಟಳೆಯನ್ನಾಗಿ ಮಾಡಿದ ನಮ್ಮ ಹಿರಿಯರ ಉದ್ದೇಶವೂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನಿಂದ ಆ ಮಾತುಗಳು ಬಂತು. ಇದರ ಹೊರತಾಗಿ ಬೇರೆ ಯಾವ ದುರುದ್ದೇಶವೂ ನನಗಿರಲಿಲ್ಲ. ಇತ್ತೀಚೆಗೆ ಅರ್ಧ ಹೆಲ್ಮೆಟ್ ಬದಲು ಫುಲ್ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಿಲುವಿನ ಹಿಂದೆ ಜನರ ಜೀವ ರಕ್ಷಣೆಯ ಉದ್ದೇಶ ಹೇಗಿದೆಯೋ, ಹಾಗೆಯೇ ನನ್ನ ಹೇಳಿಕೆ ಹಿಂದೆ ಹೆಣ್ಣುಮಕ್ಕಳ ಬಗೆಗಿನ ಕಾಳಜಿ ಇದೆ ಎಂದು ಹೇಳಿದ್ದಾರೆ.

ಹೆಣ್ಣುಮಕ್ಕಳಿಗೆ ನಿಜವಾದ ರಕ್ಷಣೆ ನೀಡುವುದು ಶಿಕ್ಷಣ ಮಾತ್ರ ಎಂದು ನನ್ನ ಅಭಿಪ್ರಾಯ. ಹಿಜಬ್ – ಬುರ್ಖಾ ಧರಿಸಿಯಾದರೂ ಒಮ್ಮೆ ಅವರು ಶಿಕ್ಷಣ ಪಡೆಯಲಿ. ಆ ಶಿಕ್ಷಣದ ಬಲದಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು ಎಂದಿದ್ದಾರೆ.

ಹೌದು, ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಖಂಡಿತ ಕಾರಣ ಅಲ್ಲ. ಮೈ ತುಂಬಾ ಬಟ್ಟೆ ಹಾಕಿದರೂ, ಹಾಕದೆ ಇದ್ದರೂ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲವು ಪುರುಷರಲ್ಲಿರುವ ರೇಪಿಸ್ಟ್ ಮನಸ್ಥಿತಿ. ಹೆಣ್ಣುಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು ಎಂದು ತಿಳಿಸಿದ್ದಾರೆ.

ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ಬೇರೆ ಇಲ್ಲ. ಆದ್ದರಿಂದ ಹಿಜಾಬ್ -ಬುರ್ಖಾದ ಕಾರಣ ನೀಡಿ ದಯವಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಬೇಡಿ ಎಂದು ನಾನು ಸರ್ಕಾರವನ್ನು ಮತ್ತು ಸಮಾಜವನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಜಮೀರ್ ಅಹ್ಮದ್ ಹೇಳಿದ್ದೇನು?
ಹಿಜಾಬ್‌ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್‌, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್‌ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್‌ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್‌ ಧರಿಸುತ್ತಾರೆ ಎಂದಿದ್ದರು. 

ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ ಎಂದ ಡಿಕೆಶಿ
ಕರ್ನಾಟಕದ ಉಡುಪಿ ಜಿಲ್ಲೆಯಿಂದ ಹೊತ್ತಿಕೊಂಡ ಹಿಜಾಬ್ ವಿವಾದದ ಕಿಡಿ ಸದ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಈ ನಡುವೆ ಅನೇಕ ಹಿರಿಯ, ಕಿರಿಯ ರಾಜಕೀಯ ನಾಯಕರು ಈ ವಿಚಾರವಾಗಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಪರ ವಿರೀಧಗಳು ವ್ಯಕ್ತವಾಗಿವೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದಿದ್ದಾರೆ.

ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹ್ಮದ್ ಬುರ್ಕಾ, ಹಿಜಾಬ್‌ (Hijab) ಧರಿಸದೆ ಇರುವುದೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದರು. ಅವರ ಈ ಹೇಳಿಕೆಗಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಿರುವಾಗ ಅವರ ಈ ಹೇಳಿಕೆಯನ್ನು ಡಿಕೆಶಿ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಮೀರ್ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಹಿಜಾಬ್ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಬಾರದು ಎಂದು ನಾನು ಸೂಚನೆ ಕೊಟ್ಟಿದ್ದೆ, ಆದರೂ ಮಾತಾಡಿದ್ದಾರೆ. ಈ ವಿಚಾರದಲ್ಲಿ ಪಕ್ಷದಿಂದ ಜಮೀರ್ ಅವರಿಗೆ ಸ್ಪಷ್ಟನೆ ಕೇಳ್ತೇವೆ. ಜಮೀರ್ ಹೇಳಿಕೆ ಗೆ ಅವರಿಂದ ಸ್ಪಷ್ಟನೆ ಕೇಳಿ ಅವರ ಹೇಳಿಕೆ ವಾಪಸ್ ಪಡೆಯುವಂತೆ ನಾನು ಸೂಚನೆ ನೀಡ್ತೇನೆ. ಅಲ್ಲದೇ ಜಮೀರ್ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.