ಬೆಳಗಾವಿಯ ರಾಮದುರ್ಗದಲ್ಲಿ ತಾಲೂಕು ನೇಕಾರರ ವೇದಿಕೆಯಿಂದ ತಮಟೆ ಬಾರಿಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಬಳ್ಳಾರಿ ನಗರದ ಕಾಳಮ್ಮ ಬೀದಿಯ ಅಂಗಡಿ ಮಾಲೀಕರು ದಿನದ ವಹಿವಾಟು ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಅವೈಜ್ಞಾನಿಕವಾಗಿರುವ ವಿದ್ಯುತ್‌ ದರ ಏರಿಕೆ ನೀತಿಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೆಳಗಾವಿ/ಬಳ್ಳಾರಿ(ಜೂ.13): ವಿದ್ಯುತ್‌ ದರ ದಿಢೀರ್‌ ಏರಿಕೆಗೆ ಜನಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಇದೀಗ ವರ್ತಕರು, ನೇಕಾರರು ಮತ್ತು ಕೈಗಾರಿಕೋದ್ಯಮಿಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಬೆಳಗಾವಿಯಲ್ಲಿ ನೇಕಾರರು ಪ್ರತಿಭಟನೆ ನಡೆಸಿದರೆ, ಬಳ್ಳಾರಿಯಲ್ಲಿ ವರ್ತಕರು ಸೋಮವಾರ ಅಂಗಡಿ ಬಂದ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ, ಬೆಳಗಾವಿಯಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಬೆಳಗಾವಿಯ ರಾಮದುರ್ಗದಲ್ಲಿ ತಾಲೂಕು ನೇಕಾರರ ವೇದಿಕೆಯಿಂದ ತಮಟೆ ಬಾರಿಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಬಾನಕಾರ ಪೇಟೆಯ ಬನಶಂಕರಿ ದೇವಸ್ಥಾನದಿಂದ ಹೊರಟ ಪ್ರತಿಭಟನಾಕಾರರು ನೇಕಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಹೊಸ ಬಾಡಿಗೆದಾರರು, ಹೊಸ ಮನೆಗೆ 58 ಯುನಿಟ್‌ ಉಚಿತ: ಸಚಿವ ಜಾರ್ಜ್‌

ಇನ್ನು ಬಳ್ಳಾರಿ ನಗರದ ಕಾಳಮ್ಮ ಬೀದಿಯ ಅಂಗಡಿ ಮಾಲೀಕರು ದಿನದ ವಹಿವಾಟು ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಅವೈಜ್ಞಾನಿಕವಾಗಿರುವ ವಿದ್ಯುತ್‌ ದರ ಏರಿಕೆ ನೀತಿಯಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂದು ಪ್ರತಿಭಟನೆ:

ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಕೂಡ ವಿದ್ಯುತ್‌ ದರ ಏರಿಕೆಗೆ ಅಸಮಾಧಾನ ಹೊರಹಾಕಿದ್ದು, ಮಂಗಳವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ವಿದ್ಯುತ್‌ ದರ ಈ ರೀತಿ ಏರಿಸಿದರೆ ಉದ್ಯಮಗಳು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತದೆ ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹೇಮಂತ್‌ ಪೋರವಾಲ್‌ ಹೇಳಿದ್ದಾರೆ. ಜತೆಗೆ, ವಿದ್ಯುತ್‌ ದರ ಏರಿಕೆ ಸಂಬಂಧಿಸಿ ನಮ್ಮ ಬೇಡಿಕೆ ಈಡೇರದಿದ್ದರೆ ಕರ್ನಾಟಕ ಬಂದ್‌ ನಡೆಸಲಾಗುವುದು ಎಂದೂ ಎಚ್ಚರಿಸಿದ್ದಾರೆ.