ನೂತನ ರಾಷ್ಟ್ರೀಯ ಪಿಂಚಣಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಜಾರಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸೋಮವಾರದಿಂದ ಆರಂಭವಾಗಿದೆ.
ಬೆಂಗಳೂರು (ಡಿ.20) : ನೂತನ ರಾಷ್ಟ್ರೀಯ ಪಿಂಚಣಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಜಾರಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸೋಮವಾರದಿಂದ ಆರಂಭವಾಗಿದೆ. ಮೊದಲ ದಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ನೌಕರರು ಪಾಲ್ಗೊಂಡಿದ್ದು, ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧದ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಎನ್‌ಪಿಎಸ್ ಅಡಿ ಬರುವ ರಾಜ್ಯ ಸರ್ಕಾರಿ ನೌಕರರು, ವಿವಿಧ ನಿಗಮ ಮಂಡಳಿಗಳು, ಸ್ವಾಯತ್ತ, ಅನುದಾನಿತ ಸಂಸ್ಥೆಗಳ ಎನ್‌ಪಿಎಸ್ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆದಿದೆ. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನೌಕರರು, 2006ರ ಏ.1ರ ಬಳಿಕ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಹಾಗೂ ಮೃತಪಟ್ಟಿರುವ ನೌಕರರ ಅವಲಂಬಿತರಿಗೆ ಎನ್‌ಪಿಎಸ್‌ನಿಂದ ಅನ್ಯಾಯವಾಗುತ್ತಿದೆ. ನಿವೃತ್ತಿ ಬಳಿಕ ಕನಿಷ್ಠ ಪಿಂಚಣಿ ಇಲ್ಲದೇ ದಯನೀಯ ಜೀವನ ನಡೆಸುವ ಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
Bengaluru : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ.29ರಂದು ಆಟೋ ಚಾಲಕರ ಮುಷ್ಕರ
ರಾಷ್ಟ್ರೀಯ ಹಳೆಪಿಂಚಣಿ ಯೋಜನೆ ಚಳವಳಿ ಸಮಿತಿ ರಾಷ್ಟಾ್ರಧ್ಯಕ್ಷ ವಿಜಯಕುಮಾರ್ ಬಂಧು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ತಿದ್ದುಪಡಿ ಕಾಯ್ದೆಯಂತೆ ಎನ್‌ಪಿಎಸ್ ಹಿಂಪಡೆವವರೆಗೆ ಹೋರಾಟ ನಡೆಸಲಿದ್ದೇವೆ. ಈಗಾಗಲೆ ರಾಜಸ್ಥಾನ, ಪಂಜಾಬ್, ಜಾರ್ಖಂಡ, ಛತ್ತಿಸ್‌ಘಡದಲ್ಲಿ ಎನ್‌ಪಿಎಸ್ ರದ್ದತಿಗೆ ತೀರ್ಮಾನಿಸಿವೆ. ಅದರಂತೆ ಕರ್ನಾಟಕದಲ್ಲೂ ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕು. ಇಲ್ಲದಿದ್ದರೆ ಹಿಮಾಚಲ ಪ್ರದೇಶದಲ್ಲಿ ಸರ್ಕಾರಕ್ಕೆ ಪೆಟ್ಟು ಕೊಟ್ಟಂತೆ ಇಲ್ಲಿಯೂ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ದೆಹಲಿವರೆಗೆ ಚಳವಳಿ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ಶಾಂತಾರಾಮ್, ಹೋರಾಟಕ್ಕೆ ರಾಜ್ಯದ ಎಲ್ಲ ಸರ್ಕಾರಿ ನೌಕರ ಸಂಘಟನೆಗಳು ಸಾಥ್ ನೀಡಿವೆ. ಬೆಳಗಾವಿ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಾವು ಯಾವುದೇ ರಾಜಕೀಯ ಪಕ್ಷ, ಸಂಘಟನೆ ವಿರುದ್ಧ ಹೋರಾಡುತ್ತಿಲ್ಲ. 35-40 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಬರಿಗೈಯಲ್ಲಿ ನೌಕರ ಮನೆ ಸೇರುವಂತಾಗಿದೆ. ಒಪಿಎಸ್ ನೌಕರರ ಸಾಂವಿಧಾನಿಕ ಹಕ್ಕಾಗಿದ್ದು, ಅದನ್ನು ಪಡೆಯುವರೆಗೆ ಧರಣಿ ಮುಂದುವರಿಸಲಿದ್ದೇವೆ ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಸರ್ಕಾರಿ ನೌಕರಿಯಲ್ಲಿದ್ದು ಸದಾ ಜನತೆಗಾಗಿ ಕೆಲಸ ಮಾಡುವವರನ್ನು ಸಂಧ್ಯಾಕಾಲದಲ್ಲಿ ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ. ಅವರಿಗೆ ಹಿಂದಿನಂತೆ ಒಪಿಎಸ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರಮುಖರಾದ ಶಂಭುಲಿಂಗನಗೌಡ, ಸಂಘಟನೆಯ ಪ್ರ.ಕಾರ್ಯದರ್ಶಿ ನಾಗನಗೌಡ ಸೇರಿ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಧರಣಿಯಲ್ಲಿದ್ದರು.
Bike Taxi : ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾಲೀಕರು, ಆಟೋ ಚಾಲಕರ ಜಟಾಪಟಿ ಶುರು
ಸಂಘಟನೆಗಳ ಬೆಂಬಲ
ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಾಖಂಡದ ಸರ್ಕಾರಿ ನೌಕರರ ಸಂಘಟನೆಗಳ ಮುಖಂಡರು ಎನ್‌ಪಿಎಸ್ ವಿರುದ್ಧದ ಹೋರಾಟಗಾರರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ರಾಜ್ಯದಿಂದ ಪಿಯು ಕಾಲೇಜು ಉಪನ್ಯಾಸಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಾಜಿ ಸೈನಿಕರ ಸಂಘ, ಆರೋಗ್ಯ ಇಲಾಖೆ ನಿರೀಕ್ಷಕರ ಸಂಘ, ಪಿಂಚಣಿ ವಂಚಿತ ನೌಕರರ ಸಂಘದವರು ಬೆಂಬಲಿಸಿ ಧರಣಿಯಲ್ಲಿ ತೊಡಗಿದ್ದಾರೆ.
