ಬೆಂಗಳೂರು (ಅ.29):  ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಸರದಿ ನಿಲ್ಲುವುದನ್ನು ತಪ್ಪಿಸಲು ಹಾಗೂ ನೋಂದಣಿ ಪ್ರಕ್ರಿಯೆ ಸರಳೀಕರಣಗೊಳಿಸುವ ಸಲುವಾಗಿ ನೋಂದಣಿಯನ್ನು ಸಂಪೂರ್ಣ ಆನ್‌ಲೈನ್‌ ಮಾಡಲು ಸರ್ಕಾರ ಮುಂದಾಗಿದೆ.

ಇದಕ್ಕಾಗಿ, ಪ್ರಾಯೋಗಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಾಲ ಉಪ ನೋಂದಣಾಧಿಕಾರಿ ಕಚೇರಿ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನ.2 ರಿಂದ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಮಾತ್ರವೇ ಆಸ್ತಿ ನೋಂದಣಿ ಮಾಡುವಂತೆ ಆದೇಶ ಹೊರಡಿಸಿದೆ. ಈ ಕಚೇರಿಗಳಲ್ಲಿ ಆನ್‌ಲೈನ್‌ ನೋಂದಣಿ ಯಶಸ್ವಿಯಾದರೆ ಮುಂದಿನ ಹಂತಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವುದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ. ಮೋಹನ್‌ರಾಜ್‌ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಈಗ ನೀವೂ ಜಾಗ ಖರೀದಿಸಬಹುದು: ಕೇಂದ್ರದಿಂದ ಅಧಿಸೂಚನೆ! ...

ವಾಸ್ತವವಾಗಿ ಆಸ್ತಿ ನೋಂದಣಿಯನ್ನು ಆನ್‌ಲೈನ್‌ ಮಾಡಲು 2017 ರಲ್ಲೇ ಕ್ರಮ ಕೈಗೊಳ್ಳಲಾಗಿತ್ತು. 2017ರಲ್ಲಿ ಆದೇಶ ಹೊರಡಿಸಿದ್ದ ಅಂದಿನ ಆಯುಕ್ತ ತ್ರಿಲೋಕ ಚಂದ್ರ ಅವರು, ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಆಸ್ತಿ ನೋಂದಣಿ ಹಾಗೂ ಸಿಸಿ, ಇಸಿ ದಾಖಲೆ ವಿತರಣೆ ಆನ್‌ಲೈನ್‌ನಲ್ಲಿಯೂ ಮಾಡುವಂತೆ ಆದೇಶ ಮಾಡಿದ್ದರು. ಇದಕ್ಕಾಗಿ ಕಾವೇರಿ ಆನ್‌ಲೈನ್‌ ಸರ್ವಿಸ್‌ ಪೋರ್ಟಲ್‌ನಲ್ಲಿ ಆಯ್ಕೆಯನ್ನೂ ನೀಡಿದ್ದರು. ಆದರೆ, ಆನ್‌ಲೈನ್‌ ಜೊತೆಗೆ ನೇರವಾಗಿ ಆಸ್ತಿ ನೋಂದಣಿಗೂ ಅವಕಾಶ ಇದ್ದಿದ್ದರಿಂದ ಹಾಗೂ ಆನ್‌ಲೈನ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಇದ್ದ ಕಾರಣ ಈವರೆಗೂ ಯಾರೊಬ್ಬರೂ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಮಾಡಿಲ್ಲ.

ಹೀಗಾಗಿ ಶತಾಯಗತಾಯ ಆನ್‌ಲೈನ್‌ ಆಸ್ತಿ ನೋಂದಣಿಯನ್ನು ಉತ್ತೇಜಿಸಲು ನೂತನ ಆಯುಕ್ತರು, ಮೂರು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಮಾತ್ರವೇ ಆಸ್ತಿ ನೋಂದಣಿ ಮಾಡಬೇಕು. ಆಸ್ತಿ ನೋಂದಣಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಆನ್‌ಲೈನ್‌ನಲ್ಲಿಯೇ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು. ಬಳಿಕ ಆಸ್ತಿ ನೋಂದಣಿಗೆ ನೀಡುವ ಸಮಯಾವಕಾಶದಲ್ಲಿ ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಡಮ್ಮಿ ಸಾಫ್ಟ್‌ವೇರ್‌ನಿಂದ ಸಂಬಂಧ ಉಪ ನೋಂದಣಾಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.

ಆನ್‌ಲೈನ್‌ ನೋಂದಣಿ ಹೇಗೆ?:

ಈ ಬಗ್ಗೆ   ಮಾತನಾಡಿದ ತುಮಕೂರು ಉಪ ನೋಂದಣಾಧಿಕಾರಿ ಸುಭಾಷ್‌, ಪ್ರಸ್ತುತ ತುಮಕೂರು ವ್ಯಾಪ್ತಿಗೆ 6 ಹೋಬಳಿ ಹಾಗೂ 385 ಗ್ರಮಗಳು ಬರುತ್ತವೆ. ಮ್ಯಾನ್ಯುಯಲ್‌ ಎಂಟ್ರಿ ಡಿಸೇಬಲ್‌ ಮಾಡುತ್ತಿರುವುದರಿಂದ ನೇರವಾಗಿ ದತ್ತಾಂಶ ದಾಖಲು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರೇ ಪಿಡಿಇಎಸ್‌ (ಪ್ರೀ ಡಾಟಾ ಎಂಟ್ರಿ ಸಿಸ್ಟಂ) ಮೂಲಕ ದತ್ತಾಂಶ ಹಾಗೂ ದಾಖಲೆಗಳ ಅಪ್‌ಲೋಡ್‌ ಮಾಡಬೇಕು. ಇದನ್ನು ಉಪ ನೋಂದಣಾಧಿಕಾರಿ ಪರಿಶೀಲಿಸಿ ದೋಷವಿದ್ದರೆ ವಾಪಸು ತಿರಸ್ಕರಿಸಿ ಸರಿಯಾದ ದಾಖಲೆಗಳೊಂದಿಗೆ ಪುನಃ ಸಲ್ಲಿಸಲು ತಿಳಿಸಬಹುದು. ಎಲ್ಲಾ ಸರಿ ಇದ್ದರೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಬಹುದು ಎಂದರು.

ಹಿಂದೆ ವಿಫಲವಾಗಿದ್ದು ಏಕೆ?:

ಪಿಡಿಇಎಸ್‌ (ಪ್ರೀ ಡಾಟಾ ಎಂಟ್ರಿ ಸಿಸ್ಟಂ) ವ್ಯವಸ್ಥೆಯಡಿ ತಾಂತ್ರಿಕ ದೋಷಗಳಿಂದ ಉತ್ತಮ ಕಂಪ್ಯೂಟರ್‌ ಜ್ಞಾನ ಇರುವವರೂ ದಾಖಲೆಗಳನ್ನು ಸಲ್ಲಿಸಿ, ದತ್ತಾಂಶ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಮಾಹಿತಿ ಹಕ್ಕು ಅಧ್ಯಯನ ಕೇಂದ್ರವು, ಪಿಡಿಇಎಸ್‌ ವ್ಯವಸ್ಥೆಯಡಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು. ಎರಡನೇಯದಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿ ಮಾಡಿದ್ದ ಸಮಯ ಹೆಚ್ಚಿಸಬೇಕು. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಗೆ ಕಡ್ಡಾಯವಾಗಿ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿರುವುದನ್ನು ಸಡಿಲಗೊಳಿಸಿ ಡಿ.ಡಿ. ಸಲ್ಲಿಕೆಗೂ ಅವಕಾಶ ನೀಡಬೇಕು. ಪಾಸ್‌ವರ್ಡ್‌ ಜನರೇಷನ್‌ನಲ್ಲಿ ಆಗುತ್ತಿರುವ ಲೋಪ ತಪ್ಪಿಸಬೇಕು. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದತ್ತಾಂಶ ಭರ್ತಿ ಮಾಡುವ ಪ್ರಕ್ರಿಯೆಗೆ ವಿಶೇಷ ಸಹಾಯಕ ಕೌಂಟರ್‌ ತೆರೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಸಲಹೆ ನೀಡಲು ಸಹಾಯವಾಣಿ ಆರಂಭಿಸಬೇಕು. ದಾಖಲೆಗಳ ಅಪ್‌ಲೋಡ್‌ಗೆ ಹೆಚ್ಚಿನ ಸಮಯ ನೀಡಬೇಕು ಎಂದು ಮನವಿ ಮಾಡಿತ್ತು. ಈ ತಾಂತ್ರಿಕ ದೋಷ ಸರಿಪಡಿಸಲು ಇಲಾಖೆ ವಿಫಲವಾಗಿತ್ತು.