ಬಿಸಿಲ ಬೇಗೆಯಲ್ಲಿ 'ಬೆಂದ'ಕಾಳೂರು, ಈ ವರ್ಷದ ಗರಿಷ್ಠ 38.5 ಡಿಗ್ರಿ ಸೆಲ್ಶಿಯಸ್ ದಾಖಲು;ಮಳೆ ಯಾವಾಗ?
ಬೆಂಗಳೂರಲ್ಲಿ ಈ ವರ್ಷದ ಗರಿಷ್ಠ ತಾಪಮಾನ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬೆಂಗಳೂರು ಕಾದ ಕಬ್ಬಿಣದ ರೀತಿ ಆಗಿದ್ದು, ಮಳೆಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ. ತಾಪಮಾನ ಹೀಗೆ ಮುಂದುವರಿದರೆ 8 ವರ್ಷದ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ.
ಬೆಂಗಳೂರು(ಏ.29) ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಿಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಉರಿ ಬಿಸಿಲು, ಬಿಸಿ ಗಾಳಿ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈಗಾಲೇ ಆರೋಗ್ಯ ಇಲಾಖೆ ಉರಿ ಬಿಸಿಲಿನಲ್ಲಿ ಪ್ರಯಾಣ, ಕೆಲಸಗಳಿಂದ ದೂರವಿರುವಂತೆ ಸೂಚನೆ ನೀಡಿದೆ. ಈ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷದ ಗರಿಷ್ಠ 38.5 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಬೆಂಗಳೂರು ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.
ಬೆಂಗಳೂರಿನಲ್ಲಿನ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಭಾನುವಾರ 38 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದ್ದರೆ, ಸೋಮವಾರ 38.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇದುವರೆಗೆ ಬೆಂಗಳೂರಿನಲ್ಲಿ ದಾಖಲಾಗಿರುವ ಗರಿಷ್ಥ ತಾಪಮಾನ ಎಂದರೆ 39.2 ಡಿಗ್ರಿ ಸೆಲ್ಶಿಯಸ್. 2016ರಲ್ಲಿ ಈ ಗರಿಷ್ಠ ತಾಪಮಾನ ದಾಖಲಾಗಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರು ಹಿಂದಿನ ಎಲ್ಲಾ ದಾಖಲೆ ಮುರಿದು ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತ ಗೋಚರಿಸುತ್ತಿದೆ.
ರಾಜ್ಯದಲ್ಲಿ 3 ದಿನ ಕಾಲ ಬಿಸಿ ಗಾಳಿ ಸಾಧ್ಯತೆ: ಏ.30ರಿಂದ 3 ದಿನ ಮಳೆ
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿ ಆತಂಕ ಎದುರಾಗಿದೆ. ಹೀಗಾಗಿ ಕಾದ ಕಬ್ಬಿಣದಂತಾಗಿರುವ ಬೆಂಗಳೂರು ಹಾಗೂ ಕರ್ನಾಟಕವನ್ನು ಸದ್ಯ ಮಳೆಯಿಂದ ಮಾತ್ರ ಕಾಪಾಡಲು ಸಾಧ್ಯ. ಬೆಂಗಳೂರು ಹೊರತಪಡಿಸಿದರೆ ಇತರ ಜಿಲ್ಲೆಗಳಲ್ಲಿ ಒಂದೆಡೆರು ಮಳೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಇದುವರೆಗೂ ಮಳೆಯಾಗಿಲ್ಲ. ಕೆಲ ಭಾಗದಲ್ಲಿ ಒಂದೆಡೆರಡು ಹನಿ ಬಿಟ್ಟರೆ ಮಳೆಯಾಗಿಲ್ಲ.
ಮೇ.1 ಹಾಗೂ ಮೇ.2ರಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಮೇ 1 ರಿಂದ ಬೆಂಗಳೂರಿನಲ್ಲಿ 23ರಿಂದ 37 ಡಿಗ್ರಿ ಸೆಲ್ಶಿಯಸ್ ತಾಪಮಮಾನ ದಾಖಲಾಗುವ ಸಾಧ್ಯತೆ ಇದೆ.ಇನ್ನು ಮೇ 2ರಂದು 23 ರಿಂದ 38 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ತಂಪರೆಯಲು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯಾದ್ಯಂತ ಒಂದು ವಾರ ಒಣ ಹವೆ; ಮಳೆ ಆಸೆಯಲ್ಲಿದ್ದವರಿಗೆ ಭಾರಿ ನಿರಾಸೆ
ಎಪ್ರಿಲ್ 29 ರಿಂದ ಮೇ3ರ ಒಳಗೆ ಬೆಂಗಳೂರಿನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಮೇ ತಿಂಗಳ ಆರಂಭದಲ್ಲಿ ದಿನ ಮೋಡ ಕವವಿದ ವಾತಾವರಣ ಇರಲಿದೆ. ರಾಯಚೂರು, ಕಲಬುರಗಿ, ಯಾದಗಿರಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿ ಗಾಳಿ ಸವಾಲು ಎದುರಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಬಿಸಿನಲ್ಲಿ ಓಡಾಡುವುದು, ಕೆಲಸ, ಪ್ರಯಾಣ ಸೇರಿದಂತೆ ಕೆಲಸಗಳಿಂದ ದೂರವಿರುವಂತೆ ಮನವಿ ಮಾಡಲಾಗಿದೆ.