Asianet Suvarna News Asianet Suvarna News

ಬರ ಪರಿಹಾರಕ್ಕೆ ಕೇಂದ್ರ ನಿಯಮ ಅಡ್ಡಿ, ಮಾನದಂಡ ಬದಲಿಸದಿದ್ದರೆ ಪರಿಹಾರ ಕಾರ್ಯ ಅಸಾಧ್ಯ: ಸಿದ್ದು

ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಉತ್ತರ ಬಂದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ 

Problems in Central Government Standards for Drought Compensation Says Siddaramaiah grg
Author
First Published Sep 17, 2023, 5:19 AM IST

ಬೆಂಗಳೂರು(ಸೆ.17): ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದ ವಿಳಂಬವಾಗಿದೆ. ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಿಲ್ಲ. ಹೀಗಿದ್ದರೂ ರಾಜ್ಯ ಬಿಜೆಪಿ ನಾಯಕರು ಮಾನದಂಡ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದೆ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಉತ್ತರ ಬಂದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದ್ದ ರಾಜ್ಯ ಬಿಜೆಪಿ ನಾಯಕರು ರೈತರ ಸಂಕಷ್ಟದಲ್ಲಿ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಬರಗಾಲದ ಎಫೆಕ್ಟ್‌: ಬೆಂಗ್ಳೂರಿನತ್ತ ಕೆಲಸ ಅರಸಿ ಹೊರಟ ಜನ, ರೈಲು ಫುಲ್‌ ರಶ್‌..!

ಕರ್ನಾಟಕವು ವೈವಿಧ್ಯಮಯವಾದ 14 ಕೃಷಿ ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ. ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯ ಎಂದು ಒತ್ತಾಯಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್‌) ಅಂಶವೆಂದು ಪರಿಗಣಿಸಬೇಕು ಎಂದಿದ್ದಾರೆ.

ಶುಷ್ಕ ಅಥವಾ ಒಣ ಹವೆಯ ವಿಚಾರದಲ್ಲಿಯೂ ಕೈಪಿಡಿಯಲ್ಲಿ ಕಠಿಣವಾದ ನಿಯಮಾವಳಿ ಇದೆ. ಬರ ಘೋಷಿಸಲು ಮೂರು ವಾರಗಳ ಒಣಹವೆಯನ್ನು ಸೂಚ್ಯಂಕವಾಗಿ ಪರಿಗಣಿಸಲಾಗಿದೆ. ವಿಪರ್ಯಾಸವೆಂದರೆ, ಎರಡು ಮೂರು ವಾರಗಳ ಒಣಹವೆ ಕೂಡ ಬೆಳೆಯ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡಿ ಸರಿಪಡಿಸಲಾಗದ ಬೆಳೆಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಳೆ ಕುರಿತಾದ ಸೂಚ್ಯಂಕದಲ್ಲಿ ಒಣಹವೆಯ ಅವಧಿಯನ್ನು ಎರಡು ವಾರಗಳಿಗಿಂತ ಕಡಿಮೆ ಎಂದು ಪರಿಗಣಿಸಬೇಕು.

ಕೈಪಿಡಿಯಲ್ಲಿರುವ ಮತ್ತೊಂದು ಪ್ರಮುಖ ಮಾನದಂಡವೆಂದರೆ ರಾಜ್ಯ ಸರ್ಕಾರವು ‘ಇನ್ನು ಯಾವುದೇ ಬಿತ್ತನೆ ಚಟುವಟಿಕೆ’ ನಡೆಯುವುದಿಲ್ಲ ಎಂದು ಬೆಳೆ ಹಂಗಾಮಿನ ವೇಳೆ ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿ ಪ್ರಮಾಣಪತ್ರ ಸಲ್ಲಿಸಬೇಕಿದೆ. ಇದು ಸಹ ಬರ ಘೋಷಣೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇದು ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಗೆ ವ್ಯತಿರಿಕ್ತವಾಗಿದ್ದು, ಕೇಂದ್ರದ ನಿಯಮಾವಳಿಯಿಂದಾಗಿ ರಾಜ್ಯ ಸರ್ಕಾರವು ಬರ ಘೋಷಣೆ ಮಾಡಿ ತಕ್ಷಣ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳೆಹಾನಿ ಸಹಾಯಧನಕ್ಕೆ ಅರ್ಹತೆ ಪಡೆಯಲು ಬರನಿರ್ವಹಣೆ ಕೈಪಿಡಿ 2016 ರಲ್ಲಿನ ನಿಯಮಗಳು ಹಾಗೂ ಎಸ್‌ ಡಿ ಆರ್‌ ಎಫ್‌ / ಎನ್‌ ಡಿ ಆರ್‌ ಎಫ್‌‌ ನಿಯಮಾವಳಿಗಳನ್ನು ಸಮೀಕರಿಸುವ ಅಗತ್ಯವಿದೆ.

ಬರಗಾಲ ಘೋಷಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಬರದಿಂದ ಉಂಟಾಗುವ ಸಂಕಷ್ಟವನ್ನು ಎದುರಿಸಲು ವಿಮೆಯ ಪಾತ್ರವು ಮಹತ್ವದ್ದಾಗಿದೆ. ಪ್ರಸಕ್ತ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿನ ವಿಮೆಯ ಹಣವನ್ನು ಪಡೆಯುವಲ್ಲಿ ರೈತರು ಅನೇಕ ಸಂದರ್ಭಗಳಲ್ಲಿ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇನ್‌ಪುಟ್‌ ಸಬ್ಸಿಡಿಯ ವಿತರಣೆಯನ್ನು ವಿಮಾ ಕಂಪನಿಗಳು ಬೆಳೆ ನಾಶವಾಗಿರುವ ಸಂಬಂಧ ವಿಮಾ ಪರಿಹಾರ ನೀಡಲು ಪುರಾವೆಯಾಗಿ ಪರಿಗಣಿಸಬೇಕು. ಇದರಿಂದ ಸರಳವಾಗಿ ರೈತರಿಗೆ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಾನದಂಡಗಳಲ್ಲಿ ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ ಲಾಭಕ್ಕೆ ಬಿಜೆಪಿಗರಿಂದ ಯತ್ನ

ರಾಜ್ಯ ಬಿಜೆಪಿ ನಾಯಕರು ಮಾನದಂಡ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ರೈತರ ಸಂಕಷ್ಟದಲ್ಲಿ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  

Follow Us:
Download App:
  • android
  • ios