Asianet Suvarna News Asianet Suvarna News

ಬರಗಾಲದ ಎಫೆಕ್ಟ್‌: ಬೆಂಗ್ಳೂರಿನತ್ತ ಕೆಲಸ ಅರಸಿ ಹೊರಟ ಜನ, ರೈಲು ಫುಲ್‌ ರಶ್‌..!

ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುವಾಗಲೂ ಈ ಮೂರು ರೈಲುಗಳ ಸಾಮಾನ್ಯ ಬೋಗಿಗಳು ರಶ್‌ ಆಗಿರುತ್ತವೆ. ಇನ್ನು ಬೆಂಗಳೂರಿನಿಂದ ಹೊಸಪೇಟೆಗೆ ಬರುವಾಗಲೂ ರಶ್‌ ಆಗಿರುತ್ತವೆ. ಹಾಗಾಗಿ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಲು ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಎರಡು ಸಾಮಾನ್ಯ ಬೋಗಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. 

Train is Full Rush Due to People Travel to Bengaluru From Hospete grg
Author
First Published Sep 13, 2023, 12:30 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಸೆ.13):  ವಿಶ್ವ ಪರಂಪರೆ ತಾಣ ಹಂಪಿಯ ವೀಕ್ಷಣೆಗೆ ಒಂದೆಡೆ ಪ್ರವಾಸಿಗರು ದಂಡು ಆಗಮಿಸುತ್ತಿದ್ದರೆ, ಇನ್ನೊಂದೆಡೆ ಬರಗಾಲದ ಹಿನ್ನೆಲೆಯಲ್ಲಿ ಬೆಂಗಳೂರಿನತ್ತ ಕೆಲಸ ಅರಸಿ ಕೃಷಿ ಕೂಲಿ ಕಾರ್ಮಿಕರು, ಬಡ ರೈತರು ತೆರಳುತ್ತಿದ್ದಾರೆ. ಹಾಗಾಗಿ ಬೆಂಗಳೂರಿಗೆ ತೆರಳುವ ರೈಲುಗಳಲ್ಲಿ ಬೋಗಿಗಳ ಹೆಚ್ಚಳದ ಬೇಡಿಕೆಯೂ ಈಗ ಮುನ್ನೆಲೆಗೆ ಬಂದಿದೆ.

ವಿಜಯನಗರ ಜಿಲ್ಲೆಯಲ್ಲಿ ಮಳೆ ಇಲ್ಲದ್ದರಿಂದ ಬರಗಾಲ ಆವರಿಸಿದೆ. ಕೃಷಿ ಕೂಲಿಕಾರ್ಮಿಕರಿಗೆ ಕೆಲಸ ದೊರೆಯದ್ದರಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಸೇರಿ ಇತರೆ ಕೆಲಸಗಳಿಗಾಗಿ ಗುಳೆ ಹೋಗುತ್ತಿದ್ದಾರೆ. ಹಾಗಾಗಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಸಾಮಾನ್ಯ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಬಂದಿದೆ. ಹೊಸಪೇಟೆಯಿಂದ ಹೊರಡುವ ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬರೀ ಮೂರು ಬೋಗಿಗಳು ಮಾತ್ರ ಸಾಮಾನ್ಯ ಬೋಗಿಗಳಿವೆ. ಇನ್ನೂ ಕಾರಟಗಿ- ಯಶವಂತಪುರ, ವಿಜಯಪುರ- ಯಶವಂತಪುರ ರೈಲುಗಳಲ್ಲೂ ತಲಾ ಆರು ಸಾಮಾನ್ಯ ಬೋಗಿಗಳಿವೆ. ಕೆಲಸ ಅರಸಿ ತಂಡೋಪತಂಡವಾಗಿ ಜನರು ಬೆಂಗಳೂರಿಗೆ ತೆರಳುತ್ತಿದ್ದಾರೆ. ವಿಜಯಪುರ, ಗದಗ, ಕೊಪ್ಪಳ ಜಿಲ್ಲೆಗಳಿಂದಲೂ ಜನರು ಕೆಲಸ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಹಾಗಾಗಿ ಸಾಮಾನ್ಯ ಬೋಗಿಗಳನ್ನು ಹೆಚ್ಚಳ ಮಾಡಿದರೆ ಅನುಕೂಲ ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ತೆರಿಗೆ ಕಟ್ಟದ ವಾಹನಗಳ ಮಾಲೀಕರಿಗೆ ನೋಟಿಸ್‌ ಬಿಸಿ..!

ಬೋಗಿಗಳು ರಶ್‌:

ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುವಾಗಲೂ ಈ ಮೂರು ರೈಲುಗಳ ಸಾಮಾನ್ಯ ಬೋಗಿಗಳು ರಶ್‌ ಆಗಿರುತ್ತವೆ. ಇನ್ನು ಬೆಂಗಳೂರಿನಿಂದ ಹೊಸಪೇಟೆಗೆ ಬರುವಾಗಲೂ ರಶ್‌ ಆಗಿರುತ್ತವೆ. ಹಾಗಾಗಿ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಲು ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಎರಡು ಸಾಮಾನ್ಯ ಬೋಗಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಕಾರಟಗಿ- ಯಶವಂತಪುರ, ವಿಜಯಪುರ- ಯಶವಂತಪುರ ರೈಲುಗಳಲ್ಲೂ ತಲಾ ಒಂದೊಂದು ಸಾಮಾನ್ಯ ಬೋಗಿ ಹೆಚ್ಚಳ ಮಾಡಿದರೆ, ಈ ಭಾಗದ ಜನರಿಗೆ ಬರಗಾಲದ ಹೊತ್ತಿನಲ್ಲಿ ಆಸರೆಯಾಗಲಿದೆ ಹೇಳುತ್ತಾರೆ ಕಾರ್ಮಿಕ ಮುಖಂಡ ಎಂ. ಜಂಬಯ್ಯ ನಾಯಕ.

ಸಾಲು, ಸಾಲು ಹಬ್ಬ:

ಗೌರಿ ಗಣೇಶ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ ಹಬ್ಬ ಬರುತ್ತಿರುವುದರಿಂದ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಸಾಲು, ಸಾಲು ರಜೆ ಹಿನ್ನೆಲೆ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರು, ಬೆಂಗಳೂರು ಭಾಗದ ಸರ್ಕಾರಿ ನೌಕರರು ಕೂಡ ಪಯಣಿಸುವುದರಿಂದ ಮತ್ತು ಬೆಂಗಳೂರಿನಿಂದ ಹೊಸಪೇಟೆ, ಕೊಪ್ಪಳ, ಗದಗ, ವಿಜಯಪುರದ ಕಡೆಗೆ ಹೆಚ್ಚಿನ ಜನರು ಆಗಮಿಸುವುದರಿಂದ ಎಸಿ, ಸ್ಲೀಪರ್‌ ಕೋಚ್‌ಗಳನ್ನು ಹೆಚ್ಚಳ ಮಾಡಬೇಕು ಎಂದು ಹೇಳುತ್ತಾರೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌, ಕಾರ್ಯದರ್ಶಿ ಕೆ. ಮಹೇಶ್‌.

ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಹಂಪಿ ಸ್ಮಾರಕಗಳ ಮಾದರಿಯಲ್ಲಿ ಸೃಜಿಸಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ಉದ್ಘಾಟನೆ ಮಾಡಿದ್ದಾರೆ. ಈ ಭಾಗದಲ್ಲಿ ರೈಲ್ವೆ ಸೇವೆಯಲ್ಲಿ ಸುಧಾರಣೆ ಕಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹಾಗಾಗಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹಂಪಿ ಎಕ್ಸ್‌ಪ್ರೆಸ್‌, ಕಾರಟಗಿ- ಯಶವಂತಪುರ, ವಿಜಯಪುರ- ಯಶವಂತಪುರ ರೈಲುಗಳಲ್ಲಿ ಬೋಗಿಗಳನ್ನು ಹೆಚ್ಚಳ ಮಾಡಬೇಕು. ಅದರಲ್ಲೂ ಸಾಮಾನ್ಯ ಬೋಗಿಗಳನ್ನು ಹೆಚ್ಚಳ ಮಾಡಿದರೆ, ಅಸಂಘಟಿತ ವಲಯದ ಕಾರ್ಮಿಕರಿಗೂ ಅನುಕೂಲವಾಗಲಿದೆ. ಕೆಲಸ ಅರಸಿ ರಾಜಧಾನಿಗೆ ತೆರಳುವವರಿಗೂ ಸಹಕಾರಿಯಾಗಲಿದೆ.

ಬಿಜೆಪಿಯವರಿಗೆ ದಮ್‌ ಇದ್ದರೆ 40 ಅಲ್ಲ, ಬರೀ 4 ಶಾಸಕರನ್ನು ಕರೆದೊಯ್ಯಲಿ: ಸಚಿವ ತಂಗಡಗಿ ಸವಾಲು

ಎಸಿ, ಸ್ಲೀಪರ್ ಕೋಚ್‌ಗಳಿಗೂ ಬೇಡಿಕೆ:

ಜಿಲ್ಲಾ ಕೇಂದ್ರ ಹೊಸಪೇಟೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದ ವಾಣಿಜ್ಯೋದ್ಯಮಿಗಳು, ವರ್ತಕರು ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಯಣಿಸುತ್ತಿದ್ದಾರೆ. ಜತೆಗೆ ದೇಶ, ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹಾಗಾಗಿ ಹಂಪಿ ಎಕ್ಸ್‌ಪ್ರೆಸ್‌, ಕಾರಟಗಿ- ಯಶವಂತಪುರ, ವಿಜಯಪುರ- ಯಶವಂತಪುರ ರೈಲುಗಳಲ್ಲಿ ಅಗತ್ಯಕ್ಕನುಗುಣವಾಗಿ ಎಸಿ, ಸ್ಲೀಪರ್ ಕೋಚ್‌ಗಳನ್ನೂ ಹೆಚ್ಚಳ ಮಾಡಬೇಕೆಂಬ ಬೇಡಿಕೆಯೂ ಇದೆ.
ಹೊಸಪೇಟೆ, ಕೊಪ್ಪಳ, ಗದಗ ಭಾಗದಿಂದ ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಕೆಲಸ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಹಾಗಾಗಿ ಹಂಪಿ ಎಕ್ಸ್‌ಪ್ರೆಸ್‌ ಸೇರಿದಂತೆ ರಾಜಧಾನಿಗೆ ತೆರಳುವ ರೈಲುಗಳಲ್ಲಿ ಸಾಮಾನ್ಯ ಬೋಗಿಗಳನ್ನು ಹೆಚ್ಚಳ ಮಾಡಬೇಕು. ಬೇಡಿಕೆಗನುಗುಣವಾಗಿ ಎಸಿ, ಸ್ಲೀಪರ್‌ ಕೋಚ್‌ಗಳನ್ನು ಹೆಚ್ಚಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಮುಖಂಡರು ವೈ. ಯಮುನೇಶ್‌, ಕೆ. ಮಹೇಶ್‌ ತಿಳಿಸಿದ್ದಾರೆ. 

ಬರಗಾಲದ ಹಿನ್ನೆಲೆ ಜನರು ಕುಟುಂಬ ಸಮೇತ ಬೆಂಗಳೂರಿಗೆ ಕೆಲಸ ಅರಸಿ ಹೊರಟ್ಟಿದ್ದಾರೆ. ಜಿಲ್ಲೆಯಲ್ಲಿ ಬೆಳೆಗಳು ಒಣಗಿವೆ. ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ಬೆಂಗಳೂರಿನಲ್ಲಿ ಗಾರೆ ಕೆಲಸ ಸೇರಿದಂತೆ ರಸ್ತೆ ಕಾಮಗಾರಿ ಸೇರಿ ವಿವಿಧ ಕಾರ್ಖಾನೆಗಳಲ್ಲಿ ದುಡಿಯಲು ತೆರಳುತ್ತಿದ್ದಾರೆ. ಈ ಜನರ ಸಂಚಾರಕ್ಕೆ ಅನುಕೂಲಕ್ಕಾಗಿ ರೈಲುಗಳಲ್ಲಿ ಸಾಮಾನ್ಯ ಬೋಗಿಗಳನ್ನು ಹೆಚ್ಚಳ ಮಾಡಬೇಕು ಎಂದು ನಾಯಕ ಕಾರ್ಮಿಕ ಮುಖಂಡ ಎಂ. ಜಂಬಯ್ಯ ತಿಳಿಸಿದ್ದಾರೆ.  

Follow Us:
Download App:
  • android
  • ios