ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯವು ಅರೆಸ್ಟ್ ವಾರಂಟ್ ಹೊರಡಿಸಿತ್ತು. ಬಂಧನದ ವೇಳೆ ಪೊಲೀಸರು ಮತ್ತು ವಾಟಾಳ್ ನಡುವೆ ವಾಗ್ವಾದ ನಡೆದು, ಹೈಡ್ರಾಮ ಸೃಷ್ಟಿಯಾಯಿತು.
ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆ, ಬಸವೇಶ್ವರನಗರ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ 2021ರಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಕೋರ್ಟ್ ಹಿಯರಿಂಗ್‌ಗಳಿಗೆ ಹಾಜರಾಗದೆ ಇದ್ದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಇದನ್ನು ಜಾರಿಗೊಳಿಸಲು ಬಸವೇಶ್ವರನಗರ ಪೊಲೀಸರು ಅವರ ಮನೆಗೆ ತೆರಳಿದ ವೇಳೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.
ಪೊಲೀಸರು ವಾರಂಟ್‌ನ ಸಾಫ್ಟ್ ಕಾಪಿಯನ್ನು ತೋರಿಸಿದಾಗ, ಹಾರ್ಡ್ ಕಾಪಿ ಇಲ್ಲದೆ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದರು. ನನ್ನನ್ನು ಬಂಧಿಸಲು ನಿಮ್ಮ ಬಳಿ ಸರಿಯಾದ ವಾರಂಟ್ ಇದೆಯೇ? ಯಾವ ಪ್ರಕರಣದಲ್ಲಿ ಬಂಧಿಸುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ನಾನು ಓಡಿ ಹೋಗಬೇಕೆಂದಿದ್ದರೆ ನಿನ್ನೆನೇ ಹೋಗುತ್ತಿದ್ದೆ. ಆರು ವರ್ಷಗಳ ಹಿಂದೆ ನಾನು ಒಬ್ಬನೇ ಪ್ರತಿಭಟನೆ ನಡೆಸಿದ್ದೆ. ಯಾವುದೇ ಗಲಾಟೆ, ದರೋಡೆ ಮಾಡಿಲ್ಲ. ಕೊರೊನಾ ಸಮಯದಲ್ಲಿ ರಾಜ್ಯದ ಮಕ್ಕಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಇಂಗ್ಲಿಷ್‌ನಲ್ಲಿ ವಾರಂಟ್ ತಂದಿದ್ದಕ್ಕೆ ವಾಟಾಳ್ ಅಸಮಾಧಾನ
ಇದೇ ವೇಳೆ, ವಾರಂಟ್ ಇಂಗ್ಲಿಷ್‌ನಲ್ಲಿ ತಂದಿರುವುದಕ್ಕೂ ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಪರ ಹೋರಾಟಗಾರನನ್ನು ಬಂಧಿಸಲು ಇಂಗ್ಲಿಷ್‌ನಲ್ಲಿ ವಾರಂಟ್ ತರುತ್ತೀರಾ? ಕನ್ನಡದಲ್ಲಿ ವಾರಂಟ್ ತೆಗೆದುಕೊಂಡು ಬನ್ನಿ ಎಂದು ಅವರು ಪೊಲೀಸರ ವಿರುದ್ಧ ಗರಂ ವ್ಯಕ್ತಪಡಿಸಿದರು.
ಆಟೋ ವ್ಯವಸ್ಥೆ ಮಾಡಿ ಕೋರ್ಟ್ ಗೆ ಕರೆದೊಯ್ದ ಪೊಲೀಸರು
ಆದರೂ, ನಂತರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿ ಕರೆದೊಯ್ದರು. ಪೊಲೀಸ್ ವಾಹನದಲ್ಲಿ ಹೋಗುವುದಕ್ಕೆ ನಿರಾಕರಿಸಿದ ಕಾರಣ, ಪೊಲೀಸರು ಆಟೋ ವ್ಯವಸ್ಥೆ ಮಾಡಿ ಅವರನ್ನು ಕೋರ್ಟ್‌ಗೆ ಕರೆದೊಯ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧನದ ನಂತರ, ವಾಟಾಳ್ ನಾಗರಾಜ್ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟಾರೆ, ಈ ಘಟನೆ ನಗರದಲ್ಲಿ ಸಣ್ಣ ಮಟ್ಟಿನ ಹೈಡ್ರಾಮಕ್ಕೆ ಕಾರಣವಾಗಿದ್ದು, ವಾಟಾಳ್ ನಾಗರಾಜ್ ಬಂಧನವು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.


