ಕೇಂದ್ರ ಸರ್ಕಾರದ 'ವಿಬಿ ಜಿ ರಾಮ್‌ ಜಿ ಕಾಯ್ದೆ' ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗ ಹಕ್ಕನ್ನು ಕಸಿದುಕೊಳ್ಳಲಿದೆ ಹೀಗಾಗಿ ಇದನ್ನ ಹಿಂಪಡೆಯುವಂತೆ ಆಗ್ರಹಿಸಿದರು.

ವಿಧಾನಸಭೆ (ಫೆ.5): ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನ ವಿರೋಧಿಯಾಗಿದೆ. ರಾಜ್ಯಗಳ ಮೇಲಿನ ಆರ್ಥಿಕ ಭಯೋತ್ಪಾದನೆ ಹಾಗೂ ತೆರಿಗೆ ಭಯೋತ್ಪಾದನೆಯ ಸಂಚಾಗಿದೆ. ಹೀಗಾಗಿ ಈ ಕಾಯ್ದೆ ಹಿಂಪಡೆದು ಮನರೇಗಾ ಕಾಯ್ದೆ ಪುನರ್‌ ಸ್ಥಾಪಿಸಬೇಕು ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು. 

Add Asianetnews Kannada as a Preferred SourcegooglePreferred

ವಿಬಿ ಜಿ ರಾಮ್‌ ಜಿ ಕಾಯ್ದೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ

ವಿರೋಧ ಪಕ್ಷಗಳ ಧರಣಿ ಹಾಗೂ ತೀವ್ರ ಗದ್ದಲ ನಡುವೆ ವಿಬಿ ಜಿ ರಾಮ್‌ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರದ ನಿರ್ಣಯ ಸಮರ್ಥಿಸಿ ಮಾತನಾಡಿದರು. ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ. ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಲಿದೆ. ಗ್ರಾಮೀಣ ಜನರ ಉದ್ಯೋಗ ಹಕ್ಕು ಕಸಿದುಕೊಳ್ಳಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರರು, ಮಹಿಳೆಯರಿಗೆ ಉದ್ಯೋಗದ ಹಕ್ಕನ್ನು ವಂಚಿಸಲಿದೆ ಎಂದು ಸದನದ ಗಮನ ಸೆಳೆದರು.

ಹಿಂಪಡೆಯದಿದ್ದಾರೆ ಹೋರಾಟ: ಪ್ರಿಯಾಂಕ್ ಎಚ್ಚರಿಕೆ

ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಹಿಂಪಡೆಯದಿದ್ದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಹೋರಾಟದ ಮಾದರಿಯಲ್ಲಿ ಜನಪರ ಹೋರಾಟ ಮಾಡುತ್ತೇವೆ. ಮನರೇಗಾ ಕಾಯ್ದೆ ಪುನರ್‌ ಸ್ಥಾಪನೆವರೆಗೂ ನಮ್ಮ ಹೋರಾಟ ಇರಲಿದೆ ಎಂದು ಹೇಳಿದರು.

ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಹಕ್ಕು ನೀಡುವುದರ ಜೊತೆಗೆ ಘನತೆಯಿಂದ ಬದುಕುವ ಗ್ಯಾರಂಟಿ ಕೊಟ್ಟಿತ್ತು. ಈ ಯೋಜನೆ ಜಗತ್ತಿನಲ್ಲಿ ಅತಿದೊಡ್ಡ ಹಕ್ಕು ಆಧಾರಿತ ಯೋಜನೆ ಎಂದು ಮೆಚ್ಚುಗೆ ಪಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಈ ಯೋಜನೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚು ಮಾತನಾಡಿದ್ದಾರೆ. ಸ್ವತಃ ಪ್ರಧಾನಿ ಮೋದಿ ಈ ಯೋಜನೆಯನ್ನು ನ್ಯಾಷನಲ್‌ ಪ್ರೈಡ್‌ ಎಂದಿದ್ದರು ಎಂದು ಸದನ ಗಮನ ಸೆಳೆದರು