ಸೌಜನ್ಯ ಪ್ರಕರಣದ ತನಿಖೆ ಬಗ್ಗೆ ಬಿಜೆಪಿ ನಡೆಸುತ್ತಿರುವ ರಾಜಕೀಯ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರ ಭಾಷೆ ಹಾಗೂ ನಡೆ ಬಗ್ಗೆಯೂ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಲಾಂಗು, ಚಾಕು, ಚೂರಿ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಕಲಬುರಗಿ (ಸೆ.15): ಬಿಜೆಪಿಯವರಿಗೆ ಏನು ಬೇಕು ಎನ್ನುವುದಾದರೂ ಅವರು ತೀರ್ಮಾನಿಸಲಿ. ಧರ್ಮಸ್ಥಳ ಚಲೋ ಯಾರಿಗೋಸ್ಕರ ಮಾಡಿದ್ರು? ಸೌಜನ್ಯ ಮನೆಗೆ ಬಿಜೆಪಿಯವರು ಹೋಗಿದ್ದಾಗ ಯಾರ ಮೇಲೆ ಆಪಾದನೆ ಮಾಡಿದ್ರು? ಅವರಿಗೆ ಕಾಮನ್‌ಸೆನ್ಸ್ ಏನಾದ್ರೂ ಇದೆಯಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಎಸ್.ಐ.ಟಿ ತನಿಖೆ ನಿಧಾನಗತಿಯಲ್ಲಿದೆ ಎಂಬ ಬಿಜೆಪಿಯ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರಿಗೆ ತಲೆಕೆಡಿಸಿಕೊಂಡು ರಾಜಕೀಯ ಮಾಡುವುದಷ್ಟೇ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಲೆ ಕಡೀರಿ, ತೊಡೆ ಮುರಿಯಿರಿ ಇವೆಲ್ಲ ಬಿಜೆಪಿಯವ್ರ ಭಾಷೆ:
ಧರ್ಮಸ್ಥಳ ಚಲೋ ನಾಲ್ಕು ದಿನ, ಚಾಮುಂಡೇಶ್ವರಿ ಚಲೋ ಎರಡು ದಿನ, ಮದ್ದೂರು ಚಲೋ ನಾಲ್ಕು ದಿನ ಇಷ್ಟೇನಾ ಬಿಜೆಪಿಯವರಿಗೆ ಬರುವುದು? ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ NDRF ನಿಯಮ ಸರಿಪಡಿಸಿ ಅಂತ ಮೋದಿಗೆ ಕೇಳುವುದು ಬಿಟ್ಟು ಆ ಚಲೋ.. ಈ ಚಲೋ ಮಾಡ್ತಾರೆ. ತಲೆ ಕಡೀರಿ, ತೊಡೆ ಮುರಿಯಿರಿ ಇವೆಲ್ಲ ಬಿಜೆಪಿಯವರ ಬಾಯಲ್ಲಿ ಬರೋ ಮಾತುಗಳು. ಇವರು ತಮ್ಮ ಮಕ್ಕಳ ಜೊತೆ ಡೈನಿಂಗ್ ಟೇಬಲ್ ಅಲ್ಲಿ ಊಟ ಮಾಡುವಾಗ ತಮ್ಮ ಮಕ್ಕಳಿಗೆ ಈ ರೀತಿ ಹೇಳ್ತಾರಾ? ಮಗಾ ನೀನು ಮಚ್ಚು ಹಿಡಿ, ತಲೆ ಕಡಿ, ತೊಡೆ ಮುರಿ ಅಂತ ತಮ್ಮ ಮಕ್ಕಳಿಗೂ ಹೇಳ್ತಾರಾ? ಬಿಜೆಪಿಯವರು ತಮ್ಮ ಮಕ್ಕಳಿಗೆ ಲಾಂಗು, ಚಾಕು ಚೂರಿ ಕೊಟ್ಟಿದ್ದಾರಾ? ಏನು ಬಾಷೆರೀ ಇವರದ್ದು? ಈ ರೀತಿ ಮಾತಾಡಿ ಏನು ಸಾಧನೆ ಮಾಡಲು ಹೊರಟಿದ್ದಾರೆ ಇವರು? ಕರ್ನಾಟಕವನ್ನು ಯುಪಿ, ಬಿಹಾರ ಮಾಡಲು ಹೊರಟಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಆ ಸಿಟಿ ರವಿ, ಪ್ರತಾಪ್ ಸಿಂಹ ಹಾಗೂ ಇತರ ಬಾಡಿಗೆ ಬಾಷಣಕಾರರು ಯಾವತ್ತಾದರೂ ಒಂದು ಸಾರಿ ಅವರ ಮಕ್ಕಳಿಗೆ ಈ ರೀತಿ ಹೇಳಿದ್ದಾರಾ? ಎಲ್ಲಿ ಗಲಾಟೆ ನಡೆಯುತ್ತೋ ? ಎಲ್ಲಿ ಕೋಮು ಗಲಭೆ ಆಗುತ್ತೋ ? ಎಲ್ಲಿ ಶವ ಬೀಳುತ್ತವೆ ಅಲ್ಲೇ ರಾಜಕೀಯ ಮಾಡೋದಷ್ಟೇ ಬಿಜೆಪಿಯವರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರ ಈ ರಾಜಕೀಯ ತಂತ್ರಗಳು ರಾಜ್ಯದ ಅಭಿವೃದ್ಧಿಗೆ ಯಾವ ಕೊಡುಗೆ ನೀಡಿವೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಜನತೆಗೆ ಜವಾಬ್ದಾರಿಯುತ ರಾಜಕೀಯದ ಅಗತ್ಯವಿದೆ ಎಂದರು.
