ಸೆಪ್ಟೆಂಬರ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಬುರಗಿಗೆ ಭೇಟಿ ನೀಡಲಿದ್ದು, ಸೆ.17 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯ 'ಮದ್ದೂರು ಚಲೋ' ಕಾರ್ಯಕ್ರಮವನ್ನು ಟೀಕಿಸಿದ್ದಾರೆ

ಕಲಬುರಗಿ(ಸೆ.10): ಇದೇ ಸೆಪ್ಟೆಂಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಗೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಮುಖ್ಯಮಂತ್ರಿಗಳ ಆಗಮನದ ಕುರಿತು ಮಾಹಿತಿ ನೀಡಿದರು.

ಬಿಜೆಪಿ ಮದ್ದೂರು ಚಲೋ ವಿರುದ್ಧ ಖರ್ಗೆ ವಾಗ್ದಾಳಿ:

ಬಿಜೆಪಿ ನಡೆಸುತ್ತಿರುವ 'ಮದ್ದೂರು ಚಲೋ' ಕಾರ್ಯಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ಮಾತನಾಡದೆ, ತಮ್ಮ ಕುರ್ಚಿ ಉಳಿಸಿಕೊಳ್ಳಲು ಮತ್ತು ಅಸ್ತಿತ್ವಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಶಾಂತಿ ಸಭೆಗೆ ಕರೆದರೂ ಅವರು ಯಾಕೆ ಬರಲಿಲ್ಲ? ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: 'ಸಂಗಮೇಶ್ ಈಗ್ಲೇ ನನ್ನ ಬಳಿ ಬರಲಿ, ಇಸ್ಲಾಂಗೆ ಕನ್ವರ್ಟ್ ಮಾಡ್ತೇನೆ..' ಕಾಂಗ್ರೆಸ್ ಶಾಸಕಗೆ ಸಾದಿಕ್ ಸವಾಲು

ಧರ್ಮಸ್ಥಳ ಚಲೋ, ಮಂಡ್ಯ ಚಲೋ, ಈಗ ಮದ್ದೂರು ಚಲೋ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ 20 ಜನರನ್ನು ಈಗಾಗಲೇ ಬಂಧಿಸಲಾಗಿದೆ, ತನಿಖೆ ನಡೆಯುತ್ತಿದೆ. ಬಿಜೆಪಿಯವರು ತಮ್ಮ ಮಕ್ಕಳನ್ನು ವಿದೇಶದಿಂದ ಕರೆಸಿ ಮದ್ದೂರಿಗೆ ಕಳಿಸಲಿ, ನೋಡೋಣ. ಅದರ ಬದಲಿಗೆ ಅಮಾಯಕ, ಬಡವರ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ:

ಇಲ್ಲಿ ಶಾಂತಿ ಸಭೆಗೆ ಬನ್ನಿ ಅಂದ್ರೆ ಬರಲ್ಲ, ಅಮಿತಾ ಶಾ ಬಳಿ ಹೋಗಿ ಏನ್ ಮಾಡೋರು ಇವ್ರು ? ಮಾತಾತೆತ್ತಿದ್ರೆ ಸಿಬಿಐ ಗೆ ಕೊಡಿ ಅಂತಾರೆ. ಬಾಂಗ್ಲಾದೇಶಿಗರು ಅಕ್ರಮವಾಗಿ ದೇಶದೊಳಗೆ ಬರ್ತಿದ್ದಾರೆ ಅಂತಾರೆ. ಎಲ್ಲಿ ಗಡಿ ದಾಟಿ ಬರುತ್ತಿದ್ದಾರೆ ? ಅಲ್ಲಿ ಗಡಿ ದಾಟಿ ಬಂದ್ರೆ ಇಲ್ಲಿನ ನಮ್ಮ ಗೃಹ ಮಂತ್ರಿಗಳು ಏನ್ ಮಾಡಬೇಕು? ಇವತ್ತು ಅಮಿತ್ ಶಾ ಬಳಿ ಹೊಗ್ತಾರೆ, ನಾಳೆ ಮೋಹನ್ ಭಾಗವತ್ ಬಳಿ ಹೋದ್ರೂ ಅಚ್ಚರಿ ಇಲ್ಲ ಎಂದು ತೀವ್ರ ವಾಗ್ದಾಳಿ ನಡಸಿದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿಗಳ ಭಾಗವಹಿಸುವಿಕೆಯಿಂದ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಸಚಿವ ಖರ್ಗೆ ತಿಳಿಸಿದ್ದಾರೆ.