ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್‌ಗೆ ಏಳು ಪ್ರಶ್ನೆಗಳನ್ನು ಕೇಳಿದ್ದು, ಸಮರ್ಪಕ ಉತ್ತರ ನೀಡಿದರೆ ಅವರ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ ಕ್ಷಮೆ ಕೇಳಲೂ ಸಿದ್ಧ ಎಂದು ಹೇಳಿದ್ದಾರೆ. ಸಂಘಟನೆಯ ನೋಂದಣಿ, ಆಸ್ತಿ, ಮತ್ತು ಉದ್ದೇಶಗಳ ಬಗ್ಗೆ ಮಾಹಿತಿ ಕೇಳುವುದು ಗೃಹ ಇಲಾಖೆಯ ಜವಾಬ್ದಾರಿ ಎಂದಿದ್ದಾರೆ.

 ಬೆಂಗಳೂರು (ಜೂ.21): ಜವಾಬ್ದಾರಿಯುತ ಗೃಹ ಸಚಿವನಾಗಿ ನಾನು ಕೇಳಿರುವ ಏಳು ಪ್ರಶ್ನೆಗಳಿಗೆ ಆರೆಸ್ಸೆಸ್‌ನವರು ಸಮರ್ಪಕ ಉತ್ತರ ನೀಡಿದರೆ, ಆ ಸಂಸ್ಥೆಯ ಕಚೇರಿ ಕೇಶವಕೃಪಾಗೆ ಹೋಗಲು ಸಿದ್ಧನಿದ್ದೇನೆ. ಅವರ ಉತ್ತರ ಸಮಂಜಸವಾಗಿದ್ದರೆ ಅವರ ಕ್ಷಮೆ ಬೇಕಾದರೂ ಕೇಳುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಕೇಶವ ಕೃಪಾಗೆ ಭೇಟಿ ನೀಡಲು ಸಿದ್ಧ

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರೆಸ್ಸೆಸ್‌ ವಿಚಾರವಾಗಿ ತಾವು ಬರೆದಿರುವ ಪತ್ರಕ್ಕೆ ಕೇಶವಕೃಪಾಗೆ ಚರ್ಚೆಗೆ ಬರುವಂತೆ ಆ ಸಂಸ್ಥೆಯ ನಾಯಕರು ನೀಡಿರುವ ಆಹ್ವಾನದ ಕುರಿತು ಕೇಳಿದಾಗ, ಆರೆಸ್ಸೆಸ್‌ನ ನೋಂದಣಿ, ಆಸ್ತಿ ಪಾಸ್ತಿ, ತೆರಿಗೆ ಸೇರಿ ಸರ್ಕಾರದ ಪರ ನಾನು ಕೇಳಿರುವ 7 ಪ್ರಶ್ನೆಗಳಿಗೆ ಉತ್ತರಿಸಿದರೆ ಚರ್ಚೆಗೆ ಕೇಶವ ಕೃಪಾಗೆ ಭೇಟಿ ನೀಡಲು ಸಿದ್ಧ ಎಂದರು.

ದಲಿತರಿಗೆ ಆರೆಸ್ಸೆಸ್‌ ವಿಚಾರ ಯಾಕೆ? ಈ ಹೇಳಿಕೆ ಯಾಕೆ ಬಂತು?

ನನ್ನ ಏಳು ಪ್ರಶ್ನೆಗಳಿಗೆ ಅವರು ನೀಡುವ ಉತ್ತರ ಸಮಂಜಸವಾಗಿದ್ದರೆ, ನಾನು ಅವರ ನಿಲುವು ಒಪ್ಪಿಕೊಳ್ಳುತ್ತೇನೆ ಮತ್ತು ಕ್ಷಮೆಯನ್ನೂ ಕೇಳುತ್ತೇನೆ. ಆ ಸ್ಪಷ್ಟನೆ ಸಿಕ್ಕರೆ ಖಂಡಿತವಾಗಿಯೂ ನಾನು ಆರೆಸ್ಸೆಸ್‌ ಕಚೇರಿಗೆ ಭೇಟಿ ಕೊಟ್ಟು, ಅಲ್ಲಿ ಒಳ್ಳೆಯ ಟೀ ಸಿಕ್ಕರೆ ಕುಡಿದು ಬರುತ್ತೇನೆ. ಅದಕ್ಕೂ ಮುನ್ನ ಅವರದೇ ಪಕ್ಷದ ಸಂಸದರೊಬ್ಬರು ‘ದಲಿತರಿಗೆ ಆರೆಸ್ಸೆಸ್‌ ವಿಚಾರ ಯಾಕೆ?'' ಎಂದು ಹೇಳಿರುವುದನ್ನು ನೆನಪಿಸಿಕೊಳ್ಳಲಿ ಎಂದು ಕುಟುಕಿದರು.

 ಅವರೆಲ್ಲ ಯಾರು? ಯಾವ ಉದ್ದೇಶಕ್ಕೆ ಒಟ್ಟುಗೂಡ್ತಾರೆ?

ನಾನು ಜನರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿಯುತ ಇಲಾಖೆಯಲ್ಲಿದ್ದೇನೆ. ಆರೆಸ್ಸೆಸ್‌ನವರು ರಾಜ್ಯದಲ್ಲಿ 20 ಲಕ್ಷ ಜನರನ್ನು ಸೇರಿಸಿ ವಿವಿಧೆಡೆ ಸಮಾವೇಶ, ರ್‍ಯಾಲಿ ಮಾಡಿರುವುದಾಗಿ ಅವರ ವರದಿಯಲ್ಲೇ ಹೇಳಿದ್ದಾರೆ. ಅವರೆಲ್ಲಾ ಯಾರು, ಯಾವ ಉದ್ದೇಶಕ್ಕಾಗಿ ಒಟ್ಟುಗೂಡುತ್ತಾರೆ ಎಂದು ತಿಳಿಯಬೇಕಾದ್ದು ಯಾರ ಕೆಲಸ? ಅಷ್ಟೊಂದು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದಾಗ ರಕ್ಷಣೆ ಕೊಡುವುದು ಯಾವ ಇಲಾಖೆಯ ಜವಾಬ್ದಾರಿ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಕ್ಷಣೆ ಕೊಡುತ್ತಾ? ವಾಣಿಜ್ಯ ಇಲಾಖೆ ಕೊಡುತ್ತಾ? ಗೃಹ ಇಲಾಖೆ ತಾನೇ ರಕ್ಷಣೆ ಕೊಡಬೇಕು. ಹಾಗಾಗಿಯೇ ನಾನು ಆರೆಸ್ಸೆಸ್‌ ನೋಂದಣಿ, ಸದಸ್ಯರು, ಪದಾಧಿಕಾರಿಗಳು ಸೇರಿ ಎಲ್ಲದರ ಬಗ್ಗೆ ಮಾಹಿತಿ ಕೇಳಿರುವುದು. ಅವರೇನೋ ತಾವೇ ದೇಶಭಕ್ತರು, ಸಂವಿಧಾನ ಬಲ್ಲವರು ಎಂದು ಹೇಳಿಕೊಳ್ಳುತ್ತಾರಲ್ಲವೇ? ಹಾಗಿದ್ದರೆ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಆಗ್ರಹಿಸಿದರು.

ಸರ್ಕಾರದಿಂದ ಪ್ರಶ್ನೆ ಕೇಳಿದ್ದೇನೆ:

ನಾನು ಸರ್ಕಾರದಿಂದ ಪ್ರಶ್ನೆ ಕೇಳಿದ್ದೇನೆ. ಅವರು ಇಂದಲ್ಲ ನಾಳೆ ಉತ್ತರ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. 100 ವರ್ಷಗಳ ಹಳೆಯ ಸಂಸ್ಥೆ ಅವರ ಲೆಟರ್‌ ಹೆಡ್‌ನಲ್ಲಿ ಉತ್ತರ ಕೊಡಲಿ. ಅದನ್ನು ಬಿಟ್ಟು ಯಾರೋ ವಕೀಲರಿಂದ ಸಂಪಾದಕೀಯ ಲೇಖನ ಬರೆಸುವುದು, ಹೇಳಿಕೆ ಕೊಡಿಸುವುದು ಮಾಡಿದರೆ ನಾನು ಹೆದರುವುದಿಲ್ಲ. ಅದ್ಯಾವುದಕ್ಕೂ ಉತ್ತರ ಕೊಡಬೇಕಾಗಿಲ್ಲ ಎಂದರು.

ತಮ್ಮ ಪತ್ರಕ್ಕೆ ಬಿಜೆಪಿಯ ದಲಿತ ನಾಯಕರು ಮಾಡಿರುವ ಟೀಕೆ ಕುರಿತ ಪ್ರಶ್ನೆಗೆ, ಬಿಜೆಪಿಯ ದಲಿತ ನಾಯಕರು ಆರೆಸ್ಸೆಸ್‌ನ ಉಪಸೇವಕರು. ಅವರ ಭಾಷೆ, ಅಭಿಪ್ರಾಯಗಳನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ದಲಿತರು ಆರೆಸ್ಸೆಸ್‌ ಅನ್ನು ಪ್ರಶ್ನೆ ಮಾಡಬಾರದಾ? ದಲಿತರು ಈ ಸಮಾಜದ, ಸಂವಿಧಾನದ ಭಾಗ ಅಲ್ಲವಾ? ಏನು ಪ್ರಶ್ನಿಸಬಾರದು, ಪ್ರಶ್ನೆ ಮಾಡಬೇಕು ಎಂದು ನನಗೆ ಹೇಳಲು ಅವರ್‍ಯಾರು? ಪ್ರಶ್ನೆ ಮಾಡಲು ಮೋಹನ್‌ ಭಾಗವತ್‌ ಅವರಷ್ಟೇ ಹಕ್ಕು ನನಗೂ ಇದೆ. ರಮೇಶ್‌ ಜಿಗಜಿಣಗಿ ಸೇರಿ ಬಿಜೆಪಿಯ ಯಾವ ನಾಯಕರ ಮಾತುಗಳಿಗೂ ನಾನು ಉತ್ತರ ನೀಡಬೇಕಿಲ್ಲ. ನಾನು ಗೃಹ ಸಚಿವನಾಗಿ ಕೇಳಿರುವ ಮಾಹಿತಿ ಬಗ್ಗೆ ನನಗೆ ಸ್ಪಷ್ಟತೆ ಇದೆ. ಅಷ್ಟು ದೊಡ್ಡ ಸಂಘಟನೆ ರಾಜ್ಯದಲ್ಲಿ ಇರುವಾಗ ನೋಂದಣಿ ಆಗಬೇಕು ತಾನೆ. ಯಾವ ಕಾನೂನಿನಡಿ ಅದು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಬೇಕಾಗುತ್ತದೆ. ನಾನು ಸಂವಿಧಾನ, ಕರ್ತವ್ಯಕ್ಕೆ ಬದ್ಧನಾಗಿ ಮಾಹಿತಿ ಕೇಳಿದ್ದೇನೆ. ಅವರು ಉತ್ತರ ನೀಡಲಿ ಎಂದರು.