Danappa Narone arrested by Bengaluru police: ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಾರಾಷ್ಟ್ರ ಸೋಲಾಪುರ ನಿವಾಸಿ ದಾನಪ್ಪ ನಾರೋನೆಯನ್ನು ಬೆಂಗಳೂರು ಪೊಲೀಸರು ಬಂಧಿಸಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು (ಅ.16): ಕರ್ನಾಟಕ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಸೋಲಾಪುರ ನಿವಾಸಿ ದಾನಪ್ಪ ನಾರೋನೆ ಎಂಬ ಆರೋಪಿಯನ್ನ ಬಂಧಿಸಿ ಬೆಂಗಳೂರಿಗೆ ಕರೆತಂದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆ ನಿನ್ನೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಜೀವ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಅಟ್ರಾಸಿಟಿ ಸೆಕ್ಷನ್‌ನ ಜೊತೆಗೆ ಬಿಎನ್‌ಎಸ್ ಸೆಕ್ಷನ್ 351 ಮತ್ತು 352ರಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು. ಬಂಧಿತ ಆರೋಪಿಯನ್ನು ಜಡ್ಜ್ ಮುಂದೆ ಹಾಜರುಪಡಿಸಿ 9 ದಿನಗಳ ಕಾನೂನು ಕಸ್ಟಡಿ ಪಡೆದಿರುವ ಶೇಷಾದ್ರಿಪುರಂ ಎಸ್‌ಸಿಪಿ ನೇತೃತ್ವದ ತಂಡ, ಬೆದರಿಕೆಯ ಮೂಲ ಮತ್ತು ಉದ್ದೇಶವನ್ನು ತಿಳಿಯಲು ತೀವ್ರ ವಿಚಾರಣೆ ನಡೆಸುತ್ತಿದೆ.
ದಾನಪ್ಪನಾರೋನೆಯಿಂದ ಬಂದ ಬೆದರಿಕೆಯು ರಾಜಕೀಯ ಉದ್ದೇಶಿತವೇ? ಬೇರೆ ಏನಾದರೂ ಕಾರಣಗಳಿವೆ? ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯ ಹಿನ್ನೆಲೆ ಮತ್ತು ಸಂಪರ್ಕಗಳನ್ನು ಆಳವಾಗಿ ತನಿಖೆ ಮಾಡಲಾಗುತ್ತಿದೆ.
