ಬೆಂಗಳೂರು[ಜ.26]: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ. ಸುರೇಶ್ ಅವರ ಏಕಮಾತ್ರ ಹೆಸರನ್ನು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಅಂತಿಮಗೊಳಿಸಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಹಾಗೂ ಬೆಂಗಳೂರು ವಿಭಾಗದ ಉಸ್ತುವಾರಿ ಯಶೋಮತಿ ಠಾಕೂರ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಹಾಗೂ ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಕುರಿತು ನಡೆದ ಕ್ಷೇತ್ರದ ಮುಖಂಡರ ಸಭೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಆದರೆ, ಈ ಕ್ಷೇತ್ರ ದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಿಯಕೃಷ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಂ.ಕೃಷ್ಣಪ್ಪ ಅವರು ಇನ್ನೂ ಒಪ್ಪಿಲ್ಲ ಎನ್ನಲಾಗಿದೆ. ಬಿಜೆಪಿ ಯಿಂದ ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆಯಿ ರುವುದು ಹಾಗೂ ಪ್ರಿಯಕೃಷ್ಣ ಅವರು ರಾಜ್ಯ ರಾಜಕಾರಣದಲ್ಲೇ ಇರಲು ಬಯಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಹೈಕಮಾಂಡ್ ಬಯಸಿದರೆ ಕ್ಷೇತ್ರ ಬಿಟ್ಟುಕೊಡುವೆ- ಡಿಕೆಸು:

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಂಸದ ಡಿ.ಕೆ. ಸುರೇಶ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ, ಜೆಡಿಎಸ್ ಜತೆ ಮೈತ್ರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಹೈಕಮಾಂಡ್ ಹೇಳಿದರೆ ಅದಕ್ಕೆ ತಾವು ಸಿದ್ಧ ಎಂದು ಡಿ.ಕೆ. ಸುರೇಶ್ ತಿಳಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಚರ್ಚೆಯ ವೇಳೆ ಮೈತ್ರಿ ಏರ್ಪಟ್ಟಲ್ಲಿ ಜೆಡಿಎಸ್ ಪಕ್ಷವು ತನಗೆ ಬಿಟ್ಟುಕೊಡುವಂತೆ ಕೇಳಿರುವ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕೂಡ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಯಶೋಮತಿ ಠಾಕೂರ್ ಅವರು ಡಿ.ಕೆ. ಸುರೇಶ್ ಅವರನ್ನು ಪ್ರಶ್ನಿಸಿ ದಾಗ ಸುರೇಶ್ ಅವರು ಹೈಕಮಾಂಡ್ ಹೇಳಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದರು ಎಂದು ಮೂಲಗಳು ಹೇಳಿವೆ

ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಎಚ್. ಎಂ. ರೇವಣ್ಣ, ನಾರಾಯಣ ಸ್ವಾಮಿ, ಬಿ.ಎಲ್. ಶಂಕರ್, ರವಿಶಂಕರ್ ಶೆಟ್ಟಿ, ಚೆಲುವರಾ ಯಸ್ವಾಮಿ, ರಕ್ಷಾ ಸೀತಾರಾಂ, ಸಚಿವರಾದ ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಂ, ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರ ಹೆಸರು ಪ್ರಸ್ತಾಪಿಸಲಾಗಿದೆ

ಅದೇ ರೀತಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್, ಮುಖಂಡರಾದ ನಜೀರ್ ಅಹ್ಮದ್, ಮಾಜಿ ಸಂಸದ ಸಾಂಗ್ಲಿ ಯಾನ ಸೇರಿದಂತೆ ಹಲವರ ಹೆಸರು ಕೇಳಿಬಂತು ಎಂದು ಮೂಲಗಳು ತಿಳಿಸಿವೆ.